ಇಎನ್ಎಲ್ ಧಾರವಾಡ: ರೈತರ ಜೀವನಕ್ಕೆ ಅನುಕೂಲವಾಗುವ ಬೆಳೆ ಮತ್ತು ಇಳುವರಿ ಬಗ್ಗೆ ಸಂಶೋಧನೆ ಮಾಡುವ ಮೂಲಕ ರೈತರ ಜೀವನಕ್ಕೆ ಹೊಸ ರೂಪ ನೀಡಲು ಮುಂದಾಗಿ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಭೆ ನಡೆಸಿದ ಸಚಿವ ಮುನೇನಕೊಪ್ಪ, ಡಿಸಿಎಚ್ ಮತ್ತು ವರಲಕ್ಷ್ಮೀ ಹತ್ತಿಯನ್ನ ಬೆಳೆಯುವುದು ಸಂಪೂರ್ಣವಾಗಿ ನಿಂತು ಹೋಗಿದೆ. ಇದಕ್ಕೆ ಕಾರಣವಾಗಿದ್ದು, ಇಳುವಳಿ ಕಡಿಮೆ ಬರುವುದಾಗಿದೆ. ಈ ಎರಡು ತಳಿಗಳು ಮತ್ತೆ ಬೆಳೆಯುವಂತಾಗಬೇಕೆಂದು ಎಂದ ಸಚಿವರು, ಇದಕ್ಕೆ ಬೇಕಾದ ಸೌಲಭ್ಯವನ್ನ ಸರಕಾರ ನೀಡಲಿದೆ ಎಂದು ಸಚಿವರು ಹೇಳಿದರು.
ಕೃಷಿ ವಿಶ್ವವಿದ್ಯಾಲಯ ಇಲ್ಲಿಯವರೆಗೆ ಹತ್ತಿ ಹಾಗೂ ಜವಳಿ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನ ನೀಡಿದೆ. ಇದನ್ನ ಸ್ಮರಿಸಿಕೊಂಡು ಇನ್ನಷ್ಟು ಉತ್ತಮ ಸಾಧನೆಯನ್ನ ಮಾಡಬೇಕೆಂದು ಸಚಿವರು ಕೋರಿದರು.
ಬಣ್ಣದ ಬಣ್ಣದ ಹತ್ತಿಯನ್ನ ಬೆಳೆಯಲು ರೈತರಿಗೆ ಪ್ರೇರಪಣೆ ನೀಡುವ ನಿಟ್ಟಿನಲ್ಲಿಯೂ ಸರಕಾರ ಚಿಂತನೆ ನಡೆಸಿದೆ. ಈ ಮೂಲಕ ಬಣ್ಣದ ಹತ್ತಿಯಿಂದ ಸಿದ್ಧ ಉಡುಪು ತಯಾರಿಸಿ ಉಪಯೋಗಿಸಬೇಕು ಜೊತೆಗೆ ಬೇರೆ ದೇಶಗಳಿಗೆ ಕಳಿಸುವಂತಾಗಬೇಕು. ಇದರಿಂದ ರೈತರಿಗೆ ಮತ್ತು ನೇಕಾರರಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ರೈತರಿಗೆ ಅನುಕೂಲವಾಗುವ ಪ್ರತಿಯೊಂದು ನಿಟ್ಟಿನಲ್ಲಿಯೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪ್ರಯತ್ನಿಸಬೇಕು. ಸರಕಾರ ಸದಾಕಾಲ ರೈತರ ಪರವಾಗಿ ನಿಲ್ಲತ್ತೆ ಎಂದು ಸಚಿವರು ಮನವರಿಕೆ ಮಾಡಿಕೊಟ್ಟರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಂ.ಬಿ.ಚೆಟ್ಟಿ, ವಿ.ವಿ.ಕಾಗವಾಡ, ಯೋಗೀಶ ಸಿ.ಎಸ್, ಶಾಮಣ್ಣ, ಸಿ.ಎಸ್.ಫಡಕೆ, ಎಸ್.ಐ.ಸಣ್ಣಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯ ನಂತರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೃಷಿ ವಿಶ್ವವಿದ್ಯಾಲಯದ ಬಟ್ಟೆ ಹಾಗೂ ಸಿದ್ಧ ಉಡುಪು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ, ನೈಸರ್ಗಿಕ ಬಣ್ಣದ ಬಟ್ಟೆಗಳ ಉತ್ಪಾದನೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
next post