34 C
Hubli
ಮಾರ್ಚ್ 23, 2023
eNews Land
ರಾಜ್ಯ ಸುದ್ದಿ

ರಾಯಣ್ಣನ ಹೆಸರಿನಲ್ಲಿ 180 ಕೋಟಿ ರು. ವೆಚ್ಚದಲ್ಲಿ ವೆಚ್ಚದಲ್ಲಿ ಮಿಲಿಟರಿ ಶಾಲೆ : ಮುಖ್ಯ ಮಂತ್ರಿ  ಬೊಮ್ಮಾಯಿ

Listen to this article

ಇಎನ್ಎಲ್ ಬೆಂಗಳೂರು

ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರ್ಕಾರ 180 ಕೋಟಿ ರೂ.ಗಳ ವೆಚ್ಚದಲ್ಲಿ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡುತ್ತಿದ್ದರು.

ಈ ಉದ್ದೇಶಕ್ಕಾಗಿ 55 ಕೋಟಿ ರೂ.ಗಳನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ರಕ್ಷಣಾ ಇಲಾಖೆ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಮಾತುಕತೆ ನಡೆದಿದೆ. ಪರಿಶೀಲನಾ ಕಾರ್ಯವೂ ನಡೆದಿದ್ದು, ರಕ್ಷಣಾ ಇಲಾಖೆ ಅದನ್ನು ಬಹುತೇಕವಾಗಿ ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು 100 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ ಎಂದರು.

ರಾಯಣ್ಣ ಹುತಾತ್ಮರಾದ ನಂದಗಡದಲ್ಲಿ ಅವರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು. ಅವರ ಹುಟ್ಟೂರು ಸಂಗೊಳ್ಳಿಯಲ್ಲಿ 10 ಎಕರೆ ಜಮೀನು ರಾಕ್ ಗಾರ್ಡನ್ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ಜೀವನದ ಪರಿಚಯ ಮಾಡಿಕೊಡಲು ಈ ಸ್ಮಾರಕಗಳ ನಿರ್ಮಾಣವಾಗುತ್ತಿದೆ ಎಂದರು.

*ಶಾಲಾ ಕಾಲೇಜುಗಳಲ್ಲಿ ಭಾವಚಿತ್ರ: ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಿಸಲು ಇಂದೇ ಆದೇಶ ಹೊರಡಿಸಲಾಗುವುದು ಎಂದು ಪ್ರಕಟಿಸಿದರು.

ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರು: ಸಂಗೊಳ್ಳಿ ರಾಯಣ್ಣನ ವಿಚಾರಧಾರೆಯನ್ನು ಪ್ರಚುರಪಡಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಕರ್ನಾಟಕದಲ್ಲಿ ಸ್ವತಂತ್ರ ಹೋರಾಟಗಾರರ ದೊಡ್ಡ ಇತಿಹಾಸವಿದೆ. ಬೆಂಗಳೂರಿನ ರಸ್ತೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಬೇಕು ಎಂಬ ಪ್ರಸ್ತಾಪವನ್ನು ಸಂಸದ ಪಿ.ಸಿ.ಮೋಹನ್ ಮಾಡಿದ್ದು ಈ ಬಗ್ಗೆ ಸಭೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

*ನವದೆಹಲಿಯಲ್ಲಿ ರಾಯಣ್ಣನ ಪ್ರತಿಮೆ* : ನವದೆಹಲಿಯಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆಯಿದೆ. ಚನ್ನಮ್ಮ ಇದ್ದ ಕಡೆ ರಾಯಣ್ಣ ಸಹ ಇರಬೇಕು. ನವದೆಹಲಿಯ ಸೂಕ್ತ ಸ್ಥಳದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಂಬಂಧ ಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದರು.

*ಬೆಳಗಾವಿಯಲ್ಲಿ ಪ್ರತಿಮೆಗಳು* ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ಸೌಧದ ಮುಂದೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡುವುದಾಗಿ ಘೋಷಿಸಲಾಗಿದೆ. ಮೂರ್ತಿ ಮಾಡುವವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಆದಷ್ಟು ಶೀಘ್ರದಲ್ಲಿ ಈ ಮೂರ್ತಿಗಳು ಸ್ಥಾಪನೆಯಾಗಲಿವೆ ಎಂದರು.

ಕಾಗಿನೆಲೆ ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಆರ್.ಅಶೋಕ್, ಸಂಸದ ಪಿ.ಸಿ.ಮೋಹನ್,ಮಾಜಿ ಶಾಸಕರಾದ ವಾಟಾಳ್ ನಾಗರಾಜ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ  ಉಪಸ್ಥಿತರಿದ್ದರು.

Related posts

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team

ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

eNEWS LAND Team

ಚೆನ್ನವೀರ ಕಣವಿ ಅಂತ್ಯಕ್ರಿಯೆ: ಚೆಂಬೆಳಕಿನ ಕವಿಗೆ ಕನ್ನಡದಲ್ಲಿ ಕವಾಯತಿನ ಮೂಲಕ ಅಂತಿಮ ಗೌರವ

eNewsLand Team