ಇಎನ್ಎಲ್ ಹುಬ್ಬಳ್ಳಿ:
ವರದಕ್ಷಿಣೆ ತರುವಂತೆ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ತಲಾಖ್ ನೀಡಲು ಒತ್ತಾಯಿಸಿ ಹಲ್ಲೆ ನಡೆಸಿದ ಪ್ರಕರಣ ನವಲಗುಂದದ ಬಸವೇಶ್ವರ ನಗರದಲ್ಲಿ ನಡೆದಿದೆ. ಈ ಕುರಿತು ಸ್ಥಳೀಯ ನಿವಾಸಿಯಾದ ಮಹಿಳೆ ಪತಿ ಮಹ್ಮದ್ ಇಮಾಮ್‌ಸಾಬ್ ಸೇರಿ ಒಂಬತ್ತು ಮಂದಿ ವಿರುದ್ಧ ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಪತಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಮಹಿಳೆ ಕುಟುಂಬದವರು ನವಲಗುಂದಕ್ಕೆ ತೆರಳಿ ಜಗಳ ಮಾಡಿಕೊಳ್ಳದೆ ಬುದ್ಧಿ ಹೇಳಿ ಬಂದಿದ್ದರು. ನಂತರ ಗಂಡನ ಕುಟುಂಬದವರು ಸೇರಿ, ವರದಕ್ಷಿಣೆ ತರಬೇಕು ಇಲ್ಲದಿದ್ದರೆ ತಲಾಖ್ ನೀಡಬೇಕು ಎಂದು ಮಾನಸಿಕ ಹಿಂಸೆ ನೀಡಿ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು.
ಪತ್ನಿ ತನ್ನ ಜೊತೆ ನಗ್ನವಾಗಿದ್ದ ಸಂದರ್ಭದ ಫೊಟೊ ಮೊಬೈಲ್‌ಲ್ಲಿ ತೆಗೆದುಕೊಂಡು, ವರದಕ್ಷಿಣೆ ತರದಿದ್ದರೆ ವೈರಲ್ ಮಾಡುವುದಾಗಿ ಬೆದರಿಸಿದ್ದ. ಇದನ್ನು ತವರು ಮನೆಗೆ ತಿಳಿಸಿದ್ದಾಳೆ ಎಂದು ಮನೆಯವರೆಲ್ಲ ಸೇರಿಕೊಂಡು, ಅವಾಚ್ಯವಾಗಿ ನಿಂದಿಸಿ ಮನೆಯಿಂದ ಹೊರ ಹಾಕಿದ್ದಾರೆ. ಅಲ್ಲದೆ, ತಲಾಖ್ ನೀಡದಿದ್ದರೆ ತವರಿಗೆ ಬಂದು ಇಬ್ಬರು ಮಕ್ಕಳ ಸಮೇತ ಜೀವ ತೆಗೆಯುವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.