eNews Land
ಕ್ರೀಡೆ

ಸರಣಿ ವಶದ ತವಕದಲ್ಲಿ ರಾಹುಲ್‌ – ರೋಹಿತ್

Listen to this article

ಇಂದು ರಾಂಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 2ನೇ ಪಂದ್ಯ

ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸುಧಾರಣೆ ಅಗತ್ಯ

ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ-

ರಾಂಚಿ: ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ  ಮುಂದಾಳತ್ವದಲ್ಲಿ ಮೊದಲ ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿರುವ ಭಾರತ ತಂಡ ಶುಕ್ರವಾರ ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು ಗೆಲ್ಲುವ ಗುರಿ ಹೊಂದಿದೆ.

ಮೊದಲ ಪಂದ್ಯದಲ್ಲಿ ಭಾರತದ ಗೆಲುವಿನ ಪ್ರದರ್ಶನ ತೋರಿತಾದರೂ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತ ಚಿಂತೆಗೀಡು ಮಾಡಿತ್ತು.ಎರಡನೇ ಪಂದ್ಯದಲ್ಲಿ ಭಾರತ ಈ ವೀಕ್ ನೆಸ್ ಸುಧಾರಣೆ ಮಾಡಿಕೊಳ್ಳುತ್ತಾ ಕಾದು ನೋಡಬೇಕಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರು. ಆದರೆ ದೀರ್ಘ ಕಾಲದ ತಂಡಕ್ಕೆ ಮರಳಿರುವ ಶ್ರೇಯಸ್ ಅಯ್ಯರ್ ರನ್ ಗಳಿಸಲು ತಿಣುಕಾಡಿದರು. ಅವರಿಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದ್ದು, ಹೆಚ್ಚಿನ ಕೊಡುಗೆ ನಿರೀಕ್ಷೆ ಇದೆ.

ಇನ್ನು ಅಂ.ರಾ.ಕ್ರಿಕೆಟ್‌ನಲ್ಲಿ ಎದುರಿಸಿದ ಚೊಚ್ಚಲ ಎಸೆತವನ್ನೇ ಬೌಂಡರಿಗಟ್ಟಿ ಗಮನ ಸೆಳೆದ ವೆಂಕಟೇಶ್ ಅಯ್ಯರ್, 2ನೇ ಎಸೆತದಲ್ಲಿ ದುಬಾರಿ ಹೊಡೆತಕ್ಕೆ ಯತ್ನಿಸಿ ಕೈಸುಟ್ಟುಕೊಂಡರು. ನಿರ್ಭೀತ ಆಟಕ್ಕೆ ಹೆಸರುವಾಸಿಯಾಗಿರುವ ವೆಂಕಿ, 2022 ರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಳಿಸಬೇಕಿದ್ದರೆ ಒತ್ತಡದ ಪರಿಸ್ಥಿತಿ ನಿಭಾಯಿಸುವ, ಪರಿಸ್ಥಿತಿಗೆ ತಕ್ಕಂತೆ ಆಡುವ ಕಲೆಯನ್ನು ಆದಷ್ಟು ಬೇಗ ಕಲಿಯಬೇಕಿದೆ. ಬೌಲರ್‌ಗಳಿಂದ ನಾಯಕ ರೋಹಿತ್ ಮತ್ತಷ್ಟು ಶಿಸ್ತುಬದ್ಧ ಪ್ರದರ್ಶನ ನಿರೀಕ್ಷೆ ಮಾಡಲಿದ್ದಾರೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್‌ಗೆ ಅವಕಾಶ ಸಿಗಬಹುದು.

ಇನ್ನು ಸರಣಿಯಲ್ಲಿ ಸಮಬಲ ಸಾಧಿಸುವ ಗುರಿ ಹೊಂದಿರುವ ನ್ಯೂಜಿಲೆಂಡ್  ಆರಂಭಿಕ ಬ್ಯಾಟ್ಸ್ ಮನ್ ಮಾರ್ಟಿನ್ ಗಪ್ಟಿಲ್ ಮೇಲೆ ಹೆಚ್ಚು ಅವಲಂಬಿತಗೊಂಡಿದೆ. ಬೌಲಿಂಗ್‌ನಲ್ಲೂ ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಡ್ ಯಶಸ್ಸು ಸಾಧಿಸಿದರಷ್ಟೇ ತಂಡಕ್ಕೆ ಗೆಲುವು ಎನ್ನುವ ಪರಿಸ್ಥಿತಿ ಇದೆ. ಆದರೂ ಕಿವೀಸ್ ತಂಡವನ್ನು ಎಂದಿಗೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ.

ಒಟ್ಟಾರೆ ಹಿಂದೆ ಎಲ್ಲ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸತತ ಏಳು ಸೋಲು ಕಂಡ ಬಳಿಕ ಮೊದಲ ಗೆಲವು ಪಡೆದು ವಿಶ್ವಾಸ ಗಳಿಸಿಕೊಂಡ ಭಾರತ ತಂಡ ಎರಡನೇ ಪಂದ್ಯದಲ್ಲೆ ಸರಣಿಯಲ್ಲಿ ಗೆಲವು ಸಾಧಿಸುತ್ತಾ ಕಾದು ನೋಡಬೇಕಿದೆ.
——-
ಸಂಭವನೀಯ ಆಟಗಾರರ ಪಟ್ಟಿ

ಭಾರತ

ರೋಹಿತ್(ನಾಯಕ) ಕೆ.ಎಲ್.ರಾಹುಲ್ | ಸೂರ್ಯಕುಮಾರ್ ಶ್ರೇಯಸ್ | ಪಂತ್ | ವೆಂಕಟೇಶ್ | ಅಶ್ವಿನ್ | ಅಕ್ಷರ್ /ಚಹಲ್ | ಭುವನೇಶ್ವರ್ | ದೀಪಕ್ | ಸಿರಾಜ್

ನ್ಯೂಜಿಲೆಂಡ್

ಗಪ್ಟಿಲ್ | ಮಿಚೆಲ್ | ಚ್ಯಾಪ್ಟನ್ | ಫಿಲಿಪ್ಸ್ | ಸೀಫರ್ಟ್ / ರಚಿನ್ ರವೀಂದ್ರ / ಟಾಡ್ ಆ್ಯಸ್ಟಲ್/ ಸ್ಯಾಂಟ್ನರ್ | ಸೌಥಿ(ನಾಯಕ) | ಫರ್ಗ್ಯೂಸನ್ ಟ್ರೆಂಟ್ ಬೌಲ್ಡ್

ಪಂದ್ಯ ಆರಂಭ:
ಸಂಜೆ 7 ಗಂಟೆಗೆ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

Related posts

ಐಎಸ್ಎಲ್ : ಮುಂಬೈ ಗೋಲ್, ಗೋವಾ ಫೇಲ್!

eNewsLand Team

ಎಬಿಡಿ ನಿವೃತ್ತಿ ಘೋಷಣೆ: ಕೊಹ್ಲಿ ಭಾವುಕ ಸಂದೇಶ

eNewsLand Team

ಬೃಹತ್ ಮುನ್ನಡೆಯತ್ತ ಭಾರತ; 62 ಕ್ಕೆ ‌ಆಲೌಟ್ ಆಗಿ ಕೆಟ್ಟ ದಾಖಲೆ ಬರೆದ ನ್ಯೂಜಿಲೆಂಡ್

eNewsLand Team