30 C
Hubli
ನವೆಂಬರ್ 30, 2022
eNews Land
ದೇಶ ಸುದ್ದಿ

ಮೂರು ಕೃಷಿ ಕಾಯಿದೆ ವಾಪಸ್: ಪ್ರಧಾನಿ ಮೋದಿ ಘೋಷಣೆ

Listen to this article

ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ವಿರೋಧಕ್ಕೆ ಕಾರಣವಾಗಿದ್ದವು.

ಇಎನ್ಎಲ್ ಬ್ಯೂರೋ
ದೆಹಲಿ: ದೇಶಾದ್ಯಂತ ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯಿದೆಗಳನ್ನು ವಾಪಸ್ ಪಡೆದಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

ಇದಕ್ಕೆ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಹೋರಾಟದ ರೂವಾರಿ ಭಾರತದ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಚಳಿಗಾಲದ ಅಧಿವೇಶನದಲ್ಲಿ ಅಧಿಕೃತವಾಗಿ ಕಾಯಿದೆ ಹಿಂಪಡೆಯುವ ವರೆಗೂ ಹೋರಾಟ ಮುಂದುವರೆಸಲು ನಿರ್ಧಾರಿಸಿರುವುದಾಗಿ ಹೇಳಿದ್ದಾರೆ. ಜತೆಗೆ ಎಂ ಎಸ್ ಪಿ ಸೇರಿ ಇತರೆ ಬೇಡಿಕಗಳ ಕುರಿತು ರೈತರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅನ್ಯಾಯದ ವಿರುದ್ಧದ ಜಯ ಎಂದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈತರ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ಕೇಂದ್ರ ಮಾಜಿ ಅರ್ಥ ಸಚಿವ ಪಿ.ಚಿದಂಬರಂ ಚುನಾವಣೆ ಸೋಲಿನ ಭಯದಿಂದಾಗಿ ಕೇಂದ್ರ ಸರ್ಕಾರ ಕಾಯಿದೆ ಹಿಂಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡ ಪ್ರಧಾನಿ, ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿರ್ಣಯ ಸ್ವಾಗತಿಸಿದ್ದಾರೆ.

ಬೆಳಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಈ ಮೂರು ಕಾಯಿದೆಯನ್ನು ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಜಾರಿ ಮಾಡಲಾಗಿತ್ತು. ಆದರೆ, ರೈತರಿಗೆ ಅದನ್ನು ಅರ್ಥ ಮಾಡಿಸಿವಲ್ಲಿ ಎಡವಿದ್ದೇವೆ. ಕಾಯಿದೆ ವಿರುದ್ಧ ಕೋಟ್ಯಂತರ ರೈತರು ಹೋರಾಟ ನಡೆಸಿದರು. ಕೋಟ್ಯಂತರ ರೈತರು ಬೆಂಬಲಿಸಿದರು. ಅವರಿಗೆಲ್ಲ ನಮ್ಮ ಧನ್ಯವಾದ ಎಂದರು.

ಮುಂದುವರಿದು, ಎಂಎಸ್‌ಪಿ ಹೆಚ್ಚಳ ಸಾವಿರ ಮಂಡಿಯನ್ನು ಇ-ಮಂಡಿಗಳೊಂದಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇವೆ. ಹಾಗೆಯೇ ತಮ್ಮ ಬೆಳೆಯನ್ನು ದೇಶಾದ್ಯಂತ ಎಲ್ಲಿ ಬೇಕಾದರೂ ಮಾರಾಟ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ.

ಕೃಷಿ ಕಾನೂನನ್ನು ಒಳ್ಳೆಯ ದೃಷ್ಟಿಯಿಂದಲೇ ಜಾರಿಗೆ ತಂದಿದ್ದೆವು, ಬೆಳೆ ಸಾಲವನ್ನು ಕೂಡ ದ್ವಿಗುಣ ಮಾಡಿದ್ದೆವು, ವಾರ್ಷಿಕ ಬಜೆಟ್ ಪ್ರಮಾಣವನ್ನು ಕೂಡ ಏರಿಕೆ ಮಾಡಿದ್ದೆವು.

ನಾವು ಸಣ್ಣ ಕೃಷಿಕರಿಗೆ ಹೆಚ್ಚು ಒತ್ತು ನೀಡಿದ್ದೇವೆ ಇವುಗಳನ್ನು ರೈತರಿಗೆ ಅರ್ಥಮಾಡಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಈ ವಿಷಯ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ. ಇದೆಲ್ಲಾ ಕಾರಣಗಳಿಂದ ಈ ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ ಎಂದರು.

ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ ಶೇ.80ರಷ್ಟು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ.

ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುವುದು. ರೈತರ ಸ್ಥಿತಿ ಸುಧಾರಿಸಲು 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆ ಜಾರಿ ಮಾಡಲಾಗಿತ್ತು. ಸಣ್ಣ ರೈತರ ಒಳಿತಿಗಾಗಿಯೇ ಕಾಯ್ದೆ ಜಾರಿ ಮಾಡಲಾಗಿತ್ತು. ಆದರೆ ಏನೆ ಮಾಡಿದರೂ ರೈತರಿಗೆ ಕಾನೂನುಗಳ ಬಗ್ಗೆ ಅರ್ಥೈಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೀಗಾಗಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವ ಪ್ರಕ್ರಿಯೆ ನಡೆಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದರು.

ಆದರೆ, ಉತ್ತರ ಪ್ರದೇಶ, ಪಂಜಾಬ್ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರವ ವಿವಾದಿತ ಕಾಯಿದೆಗಳನ್ನು ಹಿಂಪಡೆದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 

Related posts

ರೈತರ ಸಮಸ್ಯೆ ನೀಗಿಸಲು ಒಂದಾಗೋಣ: ಸಿಎಂ ಕರೆ

eNewsLand Team

ಹುರಕಡ್ಲಿ ಅಜ್ಜನವರ ಸಂದೇಶ ಜೀವನದಲ್ಲಿ ಅಳವಡಿಸಿಕೊಂಡು ಪಾವನರಾಗಿ: ಡಾ.ಅಲ್ಲಮ ಪ್ರಭು ಸ್ವಾಮೀಜಿ

eNEWS LAND Team

ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ: ಗ್ರಾಪಂ ಅಧ್ಯಕ್ಷೆ ಶಿವಕ್ಕ ಮಾರುತಿ ಗೌಡ್ರ

eNEWS LAND Team