eNews Land
ಸುದ್ದಿ

ಹೊಸಪೇಟೆ ಯಾರ್ಡಲ್ಲಿ ರೈಲು ಅಪಘಾತವಾಯ್ತಾ? ಆಗಿದ್ದೇನು? ಅಷ್ಟೊಂದು ಸಿಬ್ಬಂದಿಯ ಕಾರ್ಯಾಚರಣೆ!

Listen to this article

ಇಎನ್ಎಲ್ ಹುಬ್ಬಳ್ಳಿ

ಹೊಸಪೇಟೆ ಯಾರ್ಡನಲ್ಲಿ ನೈರುತ್ಯ ರೈಲ್ವೆಯ ರೈಲು ಅಪಘಾತವಾಯ್ತು. 200 ರೈಲ್ವೆ ಸಿಬ್ಬಂದಿ, ಎನ್.ಡಿ.ಆರ್.ಎಫ್.ನ 21 ಸದಸ್ಯರೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಕಂಗಾಲಗಬೇಡಿ! ಇದು ಕೇವಲ ಅಣಕು ಕಾರ್ಯಾಚರಣೆ ಅಷ್ಟೇ. ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್.ಡಿ.ಆರ್.ಎಫ್.), ರಾಜ್ಯ ಪೋಲೀಸ್, ಅಗ್ನಿಶಾಮಕ ದಳ, ಹೋಮ್ ಗಾರ್ಡ್, ರೆಡ್ ಕ್ರಾಸ್ ಮತ್ತು ರೈಲ್ವೆ ನಾಗರಿಕ ರಕ್ಷಣಾ ಸಂಘಟನೆಯೊಂದಿಗೆ ಜಂಟಿಯಾಗಿ ಪೂರ್ಣ ಪ್ರಮಾಣದ ಅಣಕು ಅಭ್ಯಾಸವನ್ನು ಇಂದು ನಡೆಸಿತು. ವಿಪತ್ತು ಎದುರಿಸಲು ಹೇಗೆ ಸಿದ್ಧವಿದೆ ಎನ್ನುವುದನ್ನು ತಿಳಿಯಲು ಈ ಅಣಕು ಅಭ್ಯಾಸವನ್ನು ನಡೆಸಲಾಯಿತು.

ಸುಮಾರು 200 ರೈಲ್ವೆ ಸಿಬ್ಬಂದಿ ಎನ್.ಡಿ.ಆರ್.ಎಫ್ 21 ಸದಸ್ಯರೊಂದಿಗೆ ಮತ್ತು ಇತರ ಘಟಕಗಳೊಂದಿಗೆ ರೈಲು ಹಳಿ ತಪ್ಪಿದ ವೇಳೆ ಗಾಯಗೊಂಡವರಿಗೆ ಶೀಘ್ರದಲ್ಲಿ ಚಿಕಿತ್ಸೆ ನೀಡುವುದರ ಮಹತ್ವ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಹೇಗಿರುತ್ತವೆ ಎನ್ನುವುದರ ಅಭ್ಯಾಸ ಮಾಡಿದರು.

ಒಂದು ಬೋಗಿಯ ಮೇಲೆ ಮತ್ತೊಂದು ಬೋಗಿ ಅಡ್ಡವಾಗಿ ಇರಿಸಿ ರೈಲು ಹಳಿ ತಪ್ಪಿದ ಸನ್ನಿವೇಶ ಸೃಷ್ಟಿಸಲಾಯಿತು. ಸಂದೇಶ ದೊರೆತ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ಹಾನಿಗೊಂಡ ಬೋಗಿಯ ಕಿಟಕಿಗಳ ಸರಳು ಮತ್ತು ಬೋಗಿಯ ಛಾವಣಿ ಕತ್ತರಿಸಿ ಒಳ ಪ್ರವೇಶಿಸಿ ಬೋಗಿಯೊಳಗೆ ಸಿಲುಕಿರುವ ಪ್ರಯಾಣಿಕರನ್ನು ಹೊರತರುವ ವಿಧಾನ, ಅವರಿಗೆ ವೈದ್ಯಕೀಯ ನೆರವು ನೀಡುವುದು, ಗಾಯಾಳುಗಳಿಂದ ವಿವರ ಪಡೆದು ಅವರ ಸಂಬಂಧಿಕರಿಗೆ ವಿಷಯ ತಿಳಿಸುವುದು ಸೇರಿ ಮೊದಲಾದ ಪರಿಹಾರ ಕಾರ್ಯಾಚರಣೆ ಮಾಡಿ ತೋರಿಸಿದರು.

ಹುಬ್ಬಳ್ಳಿ ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಜೋಗೇಂದ್ರ ಯಾದವೇಂದು ಮಾರ್ಗದರ್ಶನದಲ್ಲಿ ಮುಖ್ಯ ವೈದ್ಯಕೀಯ ಅಧೀಕ್ಷಕ ಸಿ.ಎಂ. ರವಿ, ವರಿಷ್ಠ ವಿಭಾಗೀಯ ಸುರಕ್ಷತಾ ಅಧಿಕಾರಿ ಜೆ.ಎಸ್.ರುದ್ರಸ್ವಾಮಿ, ವರಿಷ್ಠ ವಿಭಾಗೀಯ ಯಾಂತ್ರಿಕ ಎಂಜಿನಿಯರ್ (ಸಮನ್ವಯ) ಬಿ. ಆಂಜನೇಯುಲು, ವರಿಷ್ಠ ವಿಭಾಗೀಯ ಇಂಜಿನಿಯರ್ (ಪೂರ್ವ) ಕೃತ್ಯಾನಂದ ಝಾ, ಎನ್.ಡಿ.ಆರ್.ಎಫ್.ಬೆಂಗಳೂರಿನ 10 ನೇ ಬೆಟ್ಯಾಲಿಯನ್ನ ನಿರೀಕ್ಷಕರಾದ ಹರಿಶ್ಚಂದ್ರ ಪಾಂಡೆ, ಹೊಸಪೇಟೆಯ ಅಗ್ನಿಶಾಮಕ ದಳದ ಎಫ್.ಟಿ.ಎಸ್.ಓ ಕೆ.ಎಂ.ಕೃಷ್ಣ ಮೇಲ್ವಿಚಾರಣೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ನಡೆಸಲಾಯಿತು.

ರಕ್ಷಣಾ ಕಾರ್ಯಾಚರಣೆಯ ಅಭ್ಯಾಸವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಬಗ್ಗೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅರವಿಂದ ಮಾಲಖೇಡೆ ತೃಪ್ತಿ ವ್ಯಕ್ತಪಡಿಸಿದರು.

Related posts

ಕನ್ನಡದಲ್ಲಿ ’83’ ಗೆ ಆಸರೆ ಆಗ್ತಿರೋದು ಯಾರು?

eNewsLand Team

ಗೂಗಲ್ ನಲ್ಲಿ ಯಂತ್ರ ಖರೀದಿ ಮಾಡಕ ಹೋದ ಹುಬ್ಳಿಂವ ನಾಮ ಹಾಕ್ಸಗೊಂಡಾನ!!

eNEWS LAND Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team