25.5 C
Hubli
ಏಪ್ರಿಲ್ 27, 2024
eNews Land
ಜನಪದ ರಾಜ್ಯ ಸುದ್ದಿ

ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ

ಇಎನ್ಎಲ್ ಬೆಂಗಳೂರು : ತೊಗಲು ಗೊಂಬೆಯಾಟದ ಮೂಲಕ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕಲಾವಿದ ಹಾಗೂ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್‌ ರಾಯಭಾರಿಯಾಗಿದ್ದ ನಾಡೋಜ ಬೆಳಗಲ್ಲು ವೀರಣ್ಣ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸಂಗತಿ ಆಘಾತವನ್ನು ತಂದಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ ಮಿಡಿದಿದ್ದಾರೆ.

ಚೆಳ್ಳಕೇರಿಯಿಂದ ಚಿಕ್ಕಮಗಳೂರಿಗೆ ಪುತ್ರನೊಂದಿಗೆ ಕಾರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ವಾಹನ ನಿಯಂತ್ರಣ ತಪ್ಪಿ ಸಂಭವಿಸಿದ ಅಫಘಾತದಲ್ಲಿ ಹಿರಿಯ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯ ಬೆಳಗಲ್ಲಿನಲ್ಲಿ 1936ರ ಜುಲೈ 6 ರಂದು ಹನುಮಂತಪ್ಪ ಹಾಗೂ ವೀರಮ್ಮ ದಂಪತಿಯ ಪುತ್ರನಾಗಿ ಜನಿಸಿರುವ ಬೆಳಗಲ್ಲು ವೀರಣ್ಣ ಅವರು ತಂದೆಯ ಹಾದಿಯಲ್ಲಿ ರಂಗಭೂಮಿಯನ್ನು ಪ್ರವೇಶಿಸಿದ್ದರು. ಸಿಳ್ಳೇಕ್ಯಾತ ಜನಾಂಗದಲ್ಲಿ ಹುಟ್ಟಿದ ಅವರು ತಮ್ಮ ಸಮುದಾಯ ಆಚರಿಸುವ ಕೆಲವು ಜಾನಪದಿಯ ಕಲೆಗಳನ್ನು ತನ್ನ ಕಲಾವಂತಿಕೆಯಲ್ಲಿ ಅಳವಡಿಸಿಕೊಂಡಿದ್ದರು. ವೀರಣ್ಣನವರು ಹಲವು ನಾಟಕ ಕಂಪನಿಗಳಲ್ಲಿ ನಟರಾಗಿ ಗಾಯಕರಾಗಿ, ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಬಾಲ ನಟರಾಗಿ, ಸ್ತ್ರೀ ಪಾತ್ರಧಾರಿಯಾಗಿ, ಖಳನಾಯಕರಾಗಿ, ಹಾಸ್ಯನಟರಾಗಿ ನೂರಾರು ಪಾತ್ರಗಳಲ್ಲಿ ಎಲ್ಲಾ ಬಗೆಯ ಪಾತ್ರಗಳನ್ನು ನಿರ್ವಹಿಸಿ ಗಮನಸೆಳೆದಿದ್ದರು. ವೀರಣ್ಣ ಅವರಿಗೆ ರಕ್ತರಾತ್ರಿ ನಾಟಕದ ಶಕುನಿ ಪಾತ್ರದ ಮೂಲಕ ಅಪಾರ ಯಶಸ್ಸು ಗಳಿಸಿದ್ದರು ಎಂದು ಬೆಳಗಲ್ಲು ವೀರಣ್ಣ ಅವರ ಕುರಿತ ನೆನಪುಗಳ ಬುತ್ತಿಯನ್ನು ನಾಡೋಜ ಡಾ.ಮಹೇಶ ಜೋಶಿ ಬಿಚ್ಚಿಟ್ಟರು.
ತನ್ನನು ತಾನು ರಂಗ ಭೂಮಿಯಲ್ಲಿ ತೊಡಗಿಸಿಕೊಂಡು ಒಂದು ಹಂತಕ್ಕೆ ಬೆಳೆದ ನಂತರ ರಂಗ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣನವರು ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳವನ್ನು ಕಟ್ಟಿ, ನಾಡಿನಾದ್ಯಂತ ಗೊಂಬೆಯಾಟದ ಕಲೆಯನ್ನು ಪಸರಿಸಿ, ಮತ್ತೊಂದು ಹೆಜ್ಜೆ ಮುಂದಿಟ್ಟು ಸ್ವಿಟ್ಜರ್‌ಲ್ಯಾಂಡ್‌, ಜರ್ಮನಿ ಹಾಗೂ ಇಂಡೊನೇಶ್ಯಯಾದಲ್ಲಿ ಸೀತಾ ಅಪಹರಣ ಕುರಿತು, ಬರ್ಮಾದಲ್ಲಿ 9 ಕಡೆಗಳಲ್ಲಿ ತನ್ನ ಕಲಾತಂಡಗಳೊಂದಿಗೆ ಭಾರತ ದೇಶವನ್ನು ಪ್ರತಿನಿಧಿಸಿ ಬಾಪು ತೊಗಲು ಗೊಂಬೆಯಾಟವನ್ನು ಪ್ರದರ್ಶಿಸುವ ಮೂಲಕ ನಮ್ಮ ರಾಜ್ಯದ ಕಲೆಯ ಅಂತಸ್ವತ್ವವನ್ನು ಗಮನಸೆಳೆದಿದ್ದರು. ನಾಡೋಜ ಬೆಳಗಲ್ಲು ವೀರಣ್ಣ ಅವರ ದಿಢೀರ್‌ ಅಗಲಿಕೆ, ಕನ್ನಡ ನಾಡಿಗೆ, ಕನ್ನಡಿಗರಿಗೆ, ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಬಹುಮುಖ ಪ್ರತಿಭೆಯ ವೀರಣ್ಣ ಆವರ ಕಲಾ ಸಾಧನೆಯನ್ನು ಮನಗಂಡು ದೂರದರ್ಶನದಲ್ಲಿ ಕಾರ್ಯನಿರ್ವಹಿಸುವಾಗ ಚಂದನ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿತ್ತು. ಜೊತೆಗೆ ಅವರ ಪ್ರದರ್ಶನ ಮಾಡುವ ಅಪರೂಪದ ತೊಗಲು ಗೊಂಬೆಯಾಟವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ತಮಗೆ ಅವರ ಧಿಡಿರ್‌ ಸಾವು ಆಘಾತ ತಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.

Related posts

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

eNEWS LAND Team

ಕುಂದಗೋಳ; ಕಾರ್ಯಕ್ರಮಕ್ಕೆ ಗೈರಾಗಿ ಸಣ್ಣತನ ಪ್ರದರ್ಶಿಸಿದರಾ ಶಾಸಕಿ ಕುಸುಮಾವತಿ?

eNEWS LAND Team

ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

eNEWS LAND Team