27 C
Hubli
ಮಾರ್ಚ್ 4, 2024
eNews Land
ರಾಜ್ಯ

ಡಿ.ಕೆ. ಶಿವಕುಮಾರ್ ಪ್ರಶ್ನೆ ! : ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರೀ..?

ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರೀ..

ಬಿಜೆಪಿ ಮುಖಂಡರಿಗೆ ಡಿ.ಕೆ. ಶಿವಕುಮಾರ್ ಪ್ರಶ್ನೆ.

ಇಎನ್ಎಲ್

ಹಾನಗಲ್:ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಯಡಿಯೂರಪ್ಪ ಅವರನ್ನು ಈಗ ಯಾವ ನದಿ, ಯಾವ ಡ್ಯಾಂ, ಯಾವ ಸಮುದ್ರಕ್ಕೆ ಎಸೆದಿದ್ದೀರಿ’ ಎಂದು ಬಿಜೆಪಿ ಮುಖಂಡರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಮತದಾರರು ಕಟ್ಟಿ ಕೆಆರೆಸ್ ಡ್ಯಾಂಗೆ ಎಸೆದಿದ್ದಾರೆ ಎಂದು ಅಭ್ಯರ್ಥಿ ಶಿವರಾಜ್ ಸಜ್ಜನ ಸೇರಿದಂತೆ ಬಿಜೆಪಿ ಮುಖಂಡರು ಟೀಕೆ ಮಾಡಿದ್ದ ಹಾನಗಲ್ ವಿಧಾನಸಭೆ ಕ್ಷೇತ್ರದಲ್ಲೇ ಅವರಿಗೆ ಡಿ.ಕೆ. ಶಿವಕುಮಾರ್ ಅವರು ಸೋಮವಾರ ತಿರುಗೇಟು ನೀಡಿದ್ದಾರೆ.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಸರಕಾರದ ಹೆಬ್ಬಾಗಿಲು ತೆರೆದಿದ್ದೇ ಯಡಿಯೂರಪ್ಪನವರು ಎಂದು ಹೇಳುತ್ತಿದ್ದ ಬಿಜೆಪಿಯವರು ಅವರನ್ನು ಈಗೇಕೆ ಹೀನಾಯವಾಗಿ ನಡೆಸಿಕೊಂಡರು? ಅವರನ್ಯಾಕೆ ಮೂಲೆಗುಂಪು ಮಾಡಿದರು? ಅವರು ಕಣ್ಣೀರು ಹಾಕಿಕೊಂಡು ಮನೆಗೆ ಹೋಗುವಂತೆ ಮಾಡಿದರು’ ಎಂದು ಕೆಲವರಕೊಪ್ಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಶ್ನಿಸಿದರು.

‘ಯಡಿಯೂರಪ್ಪ ಅವರ ಕಣ್ಣೀರು ಬಿಜೆಪಿಯವರನ್ನು ಸುಮ್ಮನೆ ಬಿಡುವುದಿಲ್ಲ. ಈ ಸರಕಾರ ಅವರ ಕಣ್ಣೀರಿನಲ್ಲೇ ಕೊಚ್ಚಿಕೊಂಡು ಹೋಗುತ್ತದೆ’ ಎಂದೂ ಶಿವಕುಮಾರ್ ಹೇಳಿದರು. ಒಟ್ಟಾರೆ ಅವರು ಹೇಳಿದ್ದಿಷ್ಟು:

‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ನಾಡಿಗೆ ಒಂದು ಶಾಪ. ಕರ್ನಾಟಕದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿ. ಆದರೆ ಇಲ್ಲಿ ಕಲ್ಲಿದ್ದಲ ಕೊರತೆ ಇದೆ. ಕರ್ನಾಟಕದವರೇ ಕೇಂದ್ರದಲ್ಲಿ ಗೊಬ್ಬರದ ಮಂತ್ರಿ. ಆದರೆ ಕರ್ನಾಟಕದಲ್ಲಿ ಗೊಬ್ಬರದ ಕೊರತೆ ಇದೆ. ಜತೆಗೆ ಬೆಲೆಯೂ ಹೆಚ್ಚಳವಾಗಿದೆ. ಕರ್ನಾಟಕದಿಂದ ರಾಜ್ಯಸಭೆಗೆ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರು. ಆದರೆ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಪಾಲಾಗಲಿ, ಆರ್ಥಿಕ ಅನುದಾನವಾಗಲಿ, ನೆರೆ ಪರಿಹಾರವಾಗಲಿ ಬರಲಿಲ್ಲ. ಇದು ನಮ್ಮ ರಾಜ್ಯದ ಹಣೆಬರಹ.

ಸಿಎಂ ಬಸವರಾಜ ಬೊಮ್ಮಾಯಿ ಅವರು ವೀರಾವೇಶದಿಂದ ಮಾತಾಡಿದ್ದಾರೆ. ಕ್ಷೇತ್ರದಲ್ಲಾಗಿರೋ ಅಭಿವೃದ್ಧಿ ಕೆಲಸ ನೋಡಿ ಎಂದು ಸವಾಲು ಹಾಕಿದ್ದಾರೆ. ನೋಡೋಣ ಎಂದು ಈಗ ನಿಮ್ಮೂರಿಗೆ ಕಾರಿಳಿದು ನಡೆದುಕೊಂಡೇ ಬಂದೆ. ರೋಡ್ ಕಣಿವೆ ಇದ್ದಂತಿದೆ. ಅದಕ್ಕೆ ನೀವೇ ಸಾಕ್ಷಿ. ಇದೇನಾ ಅಭಿವೃದ್ಧಿ ಕೆಲಸ ಅಂದ್ರೆ..?

ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ, ಹಿಂದಿನ ಸಿಎಂ ಯಡಿಯೂರಪ್ಪನವರು 1800 ಕೋಟಿ ರುಪಾಯಿ ಕೊರೋನಾ ಪ್ಯಾಕೇಜ್ ಅನೌನ್ಸ್ ಮಾಡಿದ್ರು. ನಿಮ್ಮ ಅಕೌಂಟ್ ಗೇನಾದರೂ ಪರಿಹಾರದ ಹಣ ಬಂತಾ? ಸತ್ತವರ ಕುಟುಂಬಗಳಿಗೇನಾದರೂ ಪರಿಹಾರ ಬಂತಾ? ರೈತರಿಗೆ ಬೆಳೆ ಹಾನಿ ಹಣ ಬಂತಾ? ಹೆಕ್ಟೇರಿಗೆ 10 ಸಾವಿರ ರು ಪರಿಹಾರ ಘೋಷಣೆ ಮಾಡಿದ್ರು. ಅಂದರೆ ಕುಂಟೆಗೆ 100 ರುಪಾಯಿ. ಇದಕ್ಕೆ ಯಾರಾದರೂ ಆನ್ ಲೈನ್ ನಲ್ಲಿ ಅರ್ಜಿ ಹಾಕ್ತಾರಾ? ಎಂಜಿನಿಯರಿಂಗ್ ಪದವೀಧರ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಬೇಕು.

ದೇವರು ಸಿ.ಎಂ. ಉದಾಸಿ ಅವರನ್ನು ಬೇಗನೆ ಕರೆಸಿಕೊಂಡಿದ್ದಾನೆ. ನಾನು ಅವರನ್ನು ತಕ್ಕಮಟ್ಟಿಗೆ ಬಲ್ಲೆ. ಅವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದೆ. ಬಹಳ ಸಜ್ಜನ ವ್ಯಕ್ತಿತ್ವ ಅವರದು. ಅವರ ಮೇಲೆ ದೂಷಣೆ ಮಾಡಲು ನಾನಿಲ್ಲಿಗೆ ಬಂದಿಲ್ಲ. ಅವರ ವಿರುದ್ಧ ನಮ್ಮ ಶ್ರೀನಿವಾಸ ಮಾನೆ ಅವರು ಸೋತಿದ್ದರೂ ಸಹ ಆಗಾಗ್ಗೆ ಅವರ ಆರೋಗ್ಯ ವಿಚಾರಿಸುತ್ತಿದ್ದೆ. ಅವರೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ನಮ್ಮ ಉದಾಸಿ ಅವರ ಮನಸಿಗೆ ಇದ್ದ ನೋವೇನೆಂದರೆ, ಅಷ್ಟು ಹಿರಿಯ ನಾಯಕರಾದರೂ ತಮ್ಮನ್ನು ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲವಲ್ಲಾ ಅಂತಾ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಬೊಮ್ಮಾಯಿ ಅವರನ್ನು ಕೇಳಲು ಬಯಸುತ್ತೇನೆ. ಇದೇ ಕೊರಗಿನಲ್ಲಿ ಉದಾಸಿ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ ಎಂಬುದು ನನ್ನ ಭಾವನೆ. ವ್ಯಕ್ತಿ ಸತ್ತಮೇಲೆ ಅವರನ್ನು ಹೊಗಳುವುದಲ್ಲ, ಆತ ಬದುಕಿದ್ದಾಗ ನೀವು ಅವರನ್ನು ಯಾವ ರೀತಿ ಗೌರವಿಸಿದಿರಿ ಎಂಬುದು ಮುಖ್ಯ.

ನಿನ್ನೆ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಬಂದು ಉದ್ದುದ್ದ ಭಾಷಣ ಮಾಡಿ ಹೋಗಿದ್ದಾರೆ. ಬೊಮ್ಮಾಯಿ ಅವರು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಏನೇನೋ ಮಾತನಾಡುತ್ತಿದ್ದಾರೆ. ಅವುಗಳಿಗೆ ಬೇರೆ ಸಮಯದಲ್ಲಿ ಉತ್ತರ ನೀಡುತ್ತೇನೆ.

ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ ಕೊಟ್ಟರಾ? ಬೀದಿ ವ್ಯಾಪಾರಿಗಳಿಗೆ ಪರಿಹಾರ ಕೊಟ್ಟರಾ? ಚಿಕಿತ್ಸೆಯಿಂದ ಆಕ್ಸಿಜನ್ ವರೆಗೂ ಎಲ್ಲದಕ್ಕೂ ಕ್ಯೂ ನಿಲ್ಲುವಂತೆ ಮಾಡಿದರು. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಇಲಿಗಳಂತೆ ವಿಲ, ವಿಲ ಒದ್ದಾಡಿ ಪ್ರಾಣ ಬಿಟ್ಟರು. ಒಬ್ಬ ಶಾಸಕ, ಮಂತ್ರಿ ಅವರನ್ನು ಭೇಟಿ ಮಾಡಿ ಸಹಾಯ ಮಾಡಲಿಲ್ಲ. ನಾನು, ಸಿದ್ದರಾಮಯ್ಯ ಹಾಗೂ ಧೃವನಾರಾಯಣ್ ಅವರು ಹೋಗಿ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ರಾಜ್ಯ ಸರಕಾರದವರು ಕೇಂದ್ರಕ್ಕೆ ಆಕ್ಸಿಜನ್ ಸಮಸ್ಯೆಯಿಂದ ಒಬ್ಬರೂ ಸತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ. ನಾವು ನಿಮ್ಮ ಪರವಾಗಿ ಮನೆ, ಮನೆಗೂ ಹೋಗಿ ಅವರಿಗೆ 1 ಲಕ್ಷ ರು. ನೆರವು ನೀಡಿ, ಸಾಂತ್ವನ ಹೇಳಿದ್ದೇವೆ. ರಾಜ್ಯದುದ್ದಗಲಕ್ಕೂ ನಮ್ಮ ಪಕ್ಷದ ಕಾರ್ಯಕರ್ತರು ಸತ್ತವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ.

ಬಿಜೆಪಿಯವರು ಕೇವಲ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ. ಸರ್ಕಾರ ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳಬೇಕು. ಅವರು ರೈತ, ಕಾರ್ಮಿಕ, ಕೋವಿಡ್ ಸೋಂಕಿತರು, ಸತ್ತವರ ಕುಟುಂಬಕ್ಕೆ ಸಹಾಯ ಮಾಡಲಿಲ್ಲ. ಆದರೂ ಅದ್ಯಾವ ಮುಖ ಇಟ್ಟುಕೊಂಡು ಬಂದು ಮತ ಕೇಳುತ್ತಿದ್ದಾರೋ ಗೊತ್ತಿಲ್ಲ. ಶ್ರೀನಿವಾಸ ಮಾನೆ ಅವರು ಆಪದ್ಭಾಂದವ ಎಂಬ ಕಾರ್ಯಕ್ರಮ ಹಮ್ಮಿಕೊಂಡು, ವೃತ್ತಿ ಉಳಿಸಿಕೊಂಡು ಬಂದವರಿಗೆ, ಉದ್ಯೋಗ ಕಳೆದುಕೊಂಡವರ ಮನೆಗೆ ಹೋಗಿ ತಲಾ 2 ಸಾವಿರ ರೂಪಾಯಿ ಚೆಕ್ ಕೊಟ್ಟು ಬಂದಿದ್ದಾರೆ. ಮಾನೆ ಅವರು ಕೊಟ್ಟಿದ್ದು ನಿಜಾನೋ, ಸುಳ್ಳೋ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಮಾಲೀಕ. ಅವನ ತೀರ್ಮಾನವೇ ಮುಖ್ಯ. ಯಾವುದೇ ಸರ್ಕಾರವಾಗಲಿ ಅವನ ಕಷ್ಟಕ್ಕೆ ಸ್ಪಂದಿಸಬೇಕು.

ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಜನರ ಹಿತಕಾಯಲು ಕೃಷ್ಣ, ಮಹದಾಯಿ, ಮೇಕೆದಾಟು ಯೋಜನೆ ವಿಚಾರವಾಗಿ ಏನಾದರೂ ಮನವಿ ಪತ್ರ ನೀಡಿದ್ದಾರಾ? ಹಾಗಾದ್ರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಸಾಧನೆ ಏನು? ನಿಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಧ್ವನಿ ಅಡಗಿಸಿದ್ದೀರಿ. ಮೊನ್ನೆ ಬಿಜೆಪಿ ಶಾಸಕ ರಾಯಚೂರಿನ ಭಾಗವನ್ನು ತೆಲಂಗಾಣಕ್ಕೆ ಸೇರಿಸಬೇಕು ಅಂದಿದ್ದಾರೆ. ಬಿಜೆಪಿಯ ಮತ್ತೊಬ್ಬ ಮಂತ್ರಿ ಹಿಂದೆ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ಹೇಳಿದ್ದರು. ಆದರೂ ಬಿಜೆಪಿಯವರು ಅಖಂಡ ಕರ್ನಾಟಕದ ಬಗ್ಗೆ ಮಾತನಾಡಿಲ್ಲ. ಈ ರೀತಿ ಮಾತನಾಡುತ್ತಿರುವುದು ತಪ್ಪು ಎಂದು ಮುಖ್ಯಮಂತ್ರಿಗಳೂ ಹೇಳುತ್ತಿಲ್ಲ.

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದರು. ಯಾರಿಗಾದರೂ ಸರ್ಕಾರಿ ಕೆಲಸ ಅಲ್ಲ ಖಾಸಗಿ ಕೆಲಸ ಸಿಕ್ಕಿತಾ? ಯುವಕರು ತಮ್ಮ ಪದವಿ ಪ್ರಮಾಣಪತ್ರವನ್ನು ಬೊಮ್ಮಾಯಿ ಅವರಿಗೆ ಕಳುಹಿಸಿ ಕೊಡಿ. ಕಳೆದ 7 ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡುವುದಿರಲಿ, ಇದ್ದ 4 ಕೋಟಿ ಕೆಲಸ ಕೂಡ ನಾಶವಾಗಿದೆ. ಇನ್ಯಾವ ಕಾರಣಕ್ಕೆ ನೀವು ಅವರಿಗೆ ಮತ ಹಾಕಬೇಕು. ಇಲ್ಲಿ ಕೇವಲ ಶ್ರೀನಿವಾಸ ಮಾನೆ ಮಾತ್ರ ಅಭ್ಯರ್ಥಿಯಲ್ಲ. ಇಲ್ಲಿರುವ ಪ್ರತಿಯೊಬ್ಬ ಮತದಾರನೂ ಅಭ್ಯರ್ಥಿಯೇ. ಕೇವಲ ನೀವು ಮಾತ್ರ ಮಾನೆ ಅವರಿಗೆ ಮತ ಹಾಕಿದರೆ ಸಾಲದು. ನಿಮ್ಮ ಜತೆ ಇನ್ನೂ ಐದು ಜನ ಮತಹಾಕುವಂತೆ ಮಾಡಬೇಕು. ಆಗ ಮಾನೆ ಅವರು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ಸಾಧ್ಯ.

ಬಿಜೆಪಿ ಸರ್ಕಾರ ಏನಾದರೂ ಸಾಧನೆ ಮಾಡಿದೆಯಾ? ಬಡವರಿಗೆ, ರೈತರಿಗೆ ಸಹಾಯ ಮಾಡಲು ಆಗಲಿಲ್ಲ. ಉದ್ಯೋಗ ನೀಡಲಿಲ್ಲ. ಆದರೂ ಅಚ್ಛೇದಿನ್ ಬಂತು ಅಂತಾರೆ? ಯಾರಿಗೆ ಬಂತು ಅಚ್ಛೇ ದಿನ? ನಿಮಗೇನಾದರೂ ಅಚ್ಛೇದಿನ ಬಂತಾ? ನಿಮ್ಮ ಖಾತೆಗೆ ಹಣ ಬಂತಾ? ಖಾತೆಗೆ ಹಣ ಹಾಕುತ್ತೇವೆ ಎಂದರಲ್ಲ ಎಲ್ಲಿ ಅಂತಾ ಬೊಮ್ಮಾಯಿ ಅವರನ್ನು ಕೇಳಬೇಕು. ಈ ರೀತಿ ಕೇಳಲು ಇದೇ 30ರಂದು ನಿಮಗೆ ಅವಕಾಶ, ಅಧಿಕಾರ ಕೊಟ್ಟಿದ್ದಾರೆ.

ಈ ಚುನಾವಣೆಯನ್ನು ಇಡೀ ರಾಷ್ಟ್ರ ನೋಡುತ್ತಿದೆ. ಇತ್ತೀಚೆಗೆ ನಡೆದ ಮಸ್ಕಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 31 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಎಲ್ಲರೂ ಇದನ್ನು ಮೆಚ್ಚಿದರು. ಬೆಳಗಾವಿಯಲ್ಲಿ ಸ್ವಲ್ಪ ಅಂತರದಲ್ಲಿ ಸೋತೆವು. ಹೀಗಾಗಿ ನಮಗೆ ಒಂದೊಂದು ವೋಟೂ ಮುಖ್ಯ. ನಿಮ್ಮ ಪರಿಸ್ಥಿತಿ, ನಿಮ್ಮ ಬ್ಯಾಂಕ್ ಖಾತೆಯನ್ನು ನೋಡಿ ನಿರ್ಧಾರ ಮಾಡಿ. ನೀವು ಮಾತ್ರವಲ್ಲ, ನಿಮ್ಮ ಜತೆ ಇನ್ನು ಐದು ಜನ ಹಸ್ತದ ಗುರುತಿಗೆ ಮತ ಹಾಕುವಂತೆ ಮಾಡಿ. ನೀವು ಮತಯಂತ್ರದಲ್ಲಿ ಮತ ಚಲಾಯಿಸಿದಾಗ ಬರುವ ಶಬ್ಧ ಮೋದಿ ಹಾಗೂ ಬೊಮ್ಮಾಯಿ ಅವರಿಗೆ ಕೇಳಬೇಕು. ಆ ರೀತಿ ನೀವು ಮತದಾನ ಮಾಡಬೇಕು.’

ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದ ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎ.ಎಂ. ಹಿಂಡಸಗೇರಿ, ಅಲ್ಲಂ ವೀರಭದ್ರಪ್ಪ, ಮನೋಹರ್ ತಹಶೀಲ್ದಾರ್, ಪಿ.ಟಿ. ಪರಮೇಶ್ವರ ನಾಯಕ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಅಭ್ಯರ್ಥಿ ಶ್ರೀನಿವಾಸ ಮಾನೆ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಅನಿಲ್ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.

 

Related posts

ಲೌಡ್’ಸ್ಪೀಕರ್ ಆದೇಶ ಪಾಲಿಸದಿದ್ದರೆ ಗುಂಡು ಹೊಡೆಯುತ್ತೇನೆ : ಪ್ರಮೋದ್ ಮುತಾಲಿಕ್

eNEWS LAND Team

ಪುನೀತ್ ಪುತ್ಥಳಿ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ

eNewsLand Team

ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ‘ಗೃಹಜ್ಯೋತಿ’ ಯೋಜನೆ ಅರ್ಜಿ ಸ್ವೀಕಾರ ಆರಂಭ… ಅರ್ಜಿ ಹಾಕುವುದು ಹೇಗೆ ನೋಡಿ

eNEWS LAND Team