ಇಎನ್ಎಲ್ ಧಾರವಾಡ: ಹಳೇ ಪಿ.ಬಿ. ರಸ್ತೆಯಲ್ಲಿ ಹೊಸದಾಗಿ ನಿರ್ಮಾಣ ಆಗುತ್ತಿರುವ ಕೆ.ಎಲ್.ಇ ಮೆಡಿಕಲ್ ಕಾಲೇಜ್ ಕಟ್ಟಡದ ಕೆಲಸಕ್ಕೆ ಬಂದ ಪಶ್ಚಿಮ ಬಂಗಾಳದ ಕಟ್ಟಡ ಕಾರ್ಮಿಕರು ತಮ್ಮ ವಾಸ್ತವ್ಯದ ಶೆಡ್ ಎದುರು ಗಾಂಜಾ ಸಸಿಗಳನ್ನು ಬೆಳೆದಿರುವುದು ಪತ್ತೆಯಾಗಿದ್ದು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಕೂಲಿ ಕಾರ್ಮಿಕರು ತಗಡಿನ ಶೆಡ್ಡಿನ ಮುಂಭಾಗದಲ್ಲಿ ಮಾದಕ ವಸ್ತು ಗಾಂಜಾ ಸಸಿಗಳನ್ನು ಬೆಳಸಿ, ಅದನ್ನು ಉಪಯೋಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಸಬಾಪೇಟೆ ಪೊಲೀಸ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಅಡೆಪ್ಪ ಎಂ. ಬನ್ನಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಈ ವೇಳೆ ಐವರು ಆರೋಪಿತರನ್ನು ಬಂಧಿಸಿ ಅವರಿಂದ 38,200 ರು. ಮೌಲ್ಯದ ಒಟ್ಟು 3 ಕೆ.ಜಿ 830 ಗ್ರಾಂ ತೂಕದ ಹಸಿ ಗಾಂಜಾ ಸಸಿಗಳನ್ನು ಜಪ್ತು ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.