27 C
Hubli
ಮಾರ್ಚ್ 4, 2024
eNews Land
ರಾಜ್ಯ

ಒಂದಾದರೂ ಬಸವಣ್ಣನ ವಚನ ಪಾಲಿಸಿ: ಸಿಎಂ

16ನೇ ವರ್ಷದ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಇಎನ್ಎಲ್  ಬೆಂಗಳೂರು

ಬಸವಾದಿ ಶರಣರ ವಿಚಾರದಲ್ಲಿ ನಂಬಿಕೆ ಇದ್ದರೆ ಲಭ್ಯವಿರುವ 21 ಸಾವಿರ ವಚನಗಳ ಪೈಕಿ ಒಂದು ವಚನವನ್ನಾದರೂ ನಮ್ಮ ಬದುಕನಲ್ಲಿ ಅಳವಡಿಸಿಕೊಂಡು ಪರಿಪಾಲಿಸಿದರೆ, ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ 16 ನೇ ವರ್ಷದ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಬಸವಣ್ಣ ಹಿಂದೆಂದಿಗಿಂತಲೂ ಪ್ರಸ್ತುತ ಎಂದು ನಾವು ಹೇಳುತ್ತೇವೆ. ಹಾಗೆಂದರೆ, ಬಸವಣ್ಣನ ಕಾಲದಲ್ಲಿದ್ದ ಅಸ್ಪುಶ್ಯತೆ, ಅಸಮಾನತೆ, ಲಿಂಗಬೇಧ, ಮೂಢನಂಬಿಕೆಗಳು ಇಂದಿಗೂ ಇವೆ ಎಂದರ್ಥವಲ್ಲವೇ. ಅವರ ವಚನ ಕೇಳಿ ನಮ್ಮ ಬದುಕಿನಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕು. ವಚನಗಳು ಇರುವುದು ಆಚರಿಸಲು ಕೇಳುವುದಕ್ಕಲ್ಲ. ಆದರೆ ನಾವು ವಚನಗಳನ್ನು ವಾಚಿಸುತ್ತೇವೆ. ದಯವೇ ಧರ್ಮದ ಮೂಲ, ಕಾಯಕವೇ ಕೈಲಾಸ ಎಂದು ಸರಳ ವ್ಯಾಖ್ಯಾನದಲ್ಲಿ ದೊಡ್ಡ ತಿರುಳು ತಿಳಿಸುವಂಥವು ಇನ್ನೆಲ್ಲೂ ಇಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ರಮಣಶ್ರೀ ಅವರ ಆದರ್ಶದಲ್ಲಿ ಬದುಕುತ್ತಿರುವ ಹಿರಿಯರಾದ ಎಸ್. ಷಡಕ್ಷರಿ ಅವರ ಹುಟ್ಟುಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮನಕ್ಕೆ ಔತಣವನ್ನು ಉಣಬಡಿಸುತ್ತಿದ್ದಾರೆ. ಷಡಕ್ಷರಿಯವರು ಸಕಾರಾತ್ಮಕ ಶಕ್ತಿಯ ಕೇಂದ್ರ. ಉದ್ಯಮ, ಸಾಹಿತ್ಯ, ಪರೋಪಕಾರ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನುಷ್ಯನ ಒಂದು ಬದುಕನ್ನು ಎಷ್ಟು ಆಯಾಮಗಳಲ್ಲಿ ಬದುಕಬಹುದೆನ್ನುವುದನ್ನು ಷಡಕ್ಷರಿಯವರನ್ನು ಕಂಡು ಕಲಿಯಬೇಕಿದೆ. ಕನ್ನಡ ನಾಡಿನ ಚಿಂತನಶೀಲ ವ್ಯಕ್ತಿಯಲ್ಲ ಶಕ್ತಿ ಎಂದರು.

ಪತಂಜಲಿ ಯೋಗದಿಂದ ಹಿಡಿದು, ವಚನಸಾಹಿತ್ಯ, ಶರಣ ಸಂಸ್ಕøತಿಯ ಪ್ರಸಾರ ವಚನ ಸಂಗೀತ, ಶರಣ ಸಾಹಿತ್ಯ ಸಂಶೋಧನೆ ಮತ್ತು ಜೀವಮಾನ ಸಾಧಕ – ಇಷ್ಟು ಪ್ರಕಾರಗಳಲ್ಲಿ ಆಯ್ಕೆ ನಡೆಸಿ ಪ್ರಶಸ್ತಿ ನೀಡಿರುವುದನ್ನು ಗಮನಿಸಿದಾಗ, ಇದು ಬಹಳ ಶ್ರೇಷ್ಠವಾದ ಪ್ರಶಸ್ತಿ ಎಂದು ಬಣ್ಣಿಸಿದರು.

ಗುರುರಾಜ ಕರಜಗಿ ಸೌಜನ್ಯ ಶೀಲ ಚಿಂತಕರು
ಗುರುರಾಜ ಕರಜಗಿ ಅವರು ಶರಣ ಸಾಹಿತ್ಯದ ತಿರುಳನ್ನು ತಿಳಿಸಿದ್ದಾರೆ. ಅಧುನಿಕ ಕರ್ನಾಟಕದಲ್ಲಿ ಅತ್ಯಂತ ಸೌಜನ್ಯ ಶೀಲ ಚಿಂತಕರು, ಶಿಕ್ಷಣ ಕ್ಷೇತ್ರದಲ್ಲಿ ನೈತಿಕತೆಯನ್ನು ತುಂಬುವ ಕೆಲಸವನ್ನು ಗುರುರಾಜ ಕರಜಗಿಯವರು ಮಾಡುತ್ತಿದ್ದಾರೆ. ಅವರ ಬಗ್ಗೆ ಹಾಗೂ ಅವರ ವಿಚಾರಗಳ ಬಗ್ಗೆ ತಮಗೆ ಅಪಾರ ಗೌರವವಿದೆ.

ವಚನ ಸಾಹಿತ್ಯದಲ್ಲಿ ಗೊ.ರು.ಅವರ ಬದ್ಧತೆ ಉತ್ಕ್ರಷ್ಟವಾದದ್ದು

ಗೊ.ರು. ಚನ್ನಬಸಪ್ಪನವರಿಗೆ ವಚನ ಸಾಹಿತ್ಯದಲ್ಲಿ ಇರುವ ಬದ್ಧತೆ, ಅವರಿಗೆ ವಚನ ಸಾಹಿತ್ಯದ ವಿಶ್ಲೇಷಣೆ ಬಹಳ ಉತ್ಕøಷ್ಟವಾಗಿವೆ. ಜಾನಪದದ ಬಗ್ಗೆ ಅವರಿಗೆ ಅಪಾರವಾದ ಕಳಕಳಿಯಿದೆ. ವಿಶ್ವದ ಏಕಮೇವ ಜಾನಪದ ವಿಶ್ವವಿದ್ಯಾಲಯ ಗೊ.ರು.ಚನ್ನಬಸಪ್ಪ ಅವರ ಕಾರಣದಿಂದ ಶಿಗ್ಗಾವಿಯಲ್ಲಿದೆ. ಜಾನಪದದಲ್ಲಿ ವೈವಿಧ್ಯತೆ ಅಗಾಧವಾಗಿದೆ. ಜೀವನದ ಎಲ್ಲ ಮುಖಗಳನ್ನು ತೋರುವ ಕೆಲಸವನ್ನು ಗೊ.ರು.ಚನ್ನಬಸಪ್ಪ ಮಾಡಿದ್ದಾರೆ.

*ದಿಗ್ಗಜರ ಸಂಗಮ*: ಎಲ್ಲಾ ಕ್ಷೇತ್ರಗಳ ದಿಗ್ಗಜರನ್ನು ಒಂದೆಡೆ ಸೇರಿಸುವ ಕೆಲಸವನ್ನು ಷಡಕ್ಷರಿ ಮಾಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದು, ಸಜ್ಜನರ ಸಂಗವನ್ನು ಮಾಡದಂತಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಎಸ್ ಷಡಕ್ಷರಿ ಅವರು ಬರೆದಿರುವ ಕ್ಷಣ ಹೊತ್ತು ಆಣಿ ಮುತ್ತು ಭಾಗ ೯ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.

ಸಮಾರಂಭದಲ್ಲಿ ಡಾ. ಗುರುರಾಜ ಕರಜಗಿ ಅವರಿಗೆ ರಮಣಶ್ರೀ ಶರಣ ಜೀವಮಾನ ಸಾಧಕ ಪ್ರಶಸ್ತಿಯನ್ನು ಸಿಎಂ ಬೊಮ್ಮಾಯಿ ಪ್ರದಾನ ಮಾಡಿದರು. ಡಾ. ಶಾಂತಾ ಇಮ್ರಾಪೂರ, ಡಾ. ಪ್ರದೀಪ ಕುಮಾರ ಹೆಬ್ರಿ, ಡಾ. ನಂದಾ ಪಾಟೀಲ್, ಸ್ವಾಮಿ ವಿವೇಕಾನಂದ ಇಂಟಿಗ್ರೇಟೆಡ್‌ ಗ್ರಾಮೀಣ ಆರೋಗ್ಯ ಕೇಂದ್ರ, ಡಾ. ಭಾಗ್ಯಮ್ಮ ಜಿ. ಸ್ಮಿತಾರಾವ್ ಬೆಳ್ಳೂರ, ಪತಂಜಲಿ ಯೋಗ ಶಿಕ್ಷಣ ಸಮೀತಿ ಗೆ ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಹಿರಿಯ ಸಾಹಿತಿ ಗೊ. ರು. ಚನ್ನಬಸಪ್ಪ, ಎಸ್ ಷಡಕ್ಷರಿ, ಹಿರಿಯ ಪತ್ರಕರ್ತ ರವಿ ಹೆಗಡೆ, ಸಾಹಿತಿ ಮನು ಬಳಿಗಾರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Related posts

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟ

eNEWS LAND Team

ಕರ್ನಾಟಕದಲ್ಲಿಂದು ಕೊರೊನಾ ಪ್ರಕರಣಗಳು ಎಷ್ಟು?

eNEWS LAND Team

ಚಂಬೆಳಕಲ್ಲಿ ಒಂದಾದ ಚನ್ನವೀರ ಕಣವಿ

eNewsLand Team