27 C
Hubli
ಮೇ 25, 2024
eNews Land
ಸುದ್ದಿ

ಹುಬ್ಬಳ್ಳಿ ಎಪಿಎಮ್’ಸಿ ಮೂಲಭೂತ ಸೌಲಭ್ಯಗಳ ಸುಧಾರಣೆಗೆ ಸ್ಪಂದನೆ: ಸಚಿವ ಶಿವಾನಂದ ಪಾಟೀಲ

ಇಎನ್ಎಲ್ ಹುಬ್ಬಳ್ಳಿ:  ಶ್ರೀ ಜಗಜ್ಯೋತಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿಯ ಅಂಗಡಿ ವ ಗೋದಾಮು/ನಿವೇಶನಗಳ ಕೆ.ಜೆ.ಪಿ ಮಾಡುವುದು, ಇತರೆ ಮೂಲಭೂತ ಸೌಲಭ್ಯಗಳ ಸುಧಾರಣೆ ಮಾಡುವ ಕುರಿತು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಅವರ ಮನವಿಗೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

   ಈ ಕುರಿತು ರವಿವಾರ ದಿ.11 ರಂದು ರಾಜ್ಯದ ನೂತನ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹುಬ್ಬಳ್ಳಿ ಎಪಿಎಮ್’ಸಿ. ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಮಾರುಕಟ್ಟೆಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ಗೌರವ ಕಾರ್ಯದಶಿ ರಾಜಕಿರಣ ಮೆಣಸಿನಕಾಯಿ, ಸದಸ್ಯರು ಮಾನ್ಯ ಸಚಿವರನ್ನು ಭೇಟಿ ಮಾಡಿ ಹುಬ್ಬಳ್ಳಿ-ಧಾರವಾಡ ಮಧ್ಯದ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊoಡಿರುವ ಹುಬ್ಬಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ರಾಜ್ಯದ 2ನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ವಿಸ್ತಾರದಲ್ಲಿ 434 ಎಕರೆ ಪ್ರದೇಶವಿದ್ದು, ಏಷ್ಯಾದಲ್ಲಿಯೇ 2ನೇಯ ಅತಿದೊಡ್ಡದಾದ ಮಾದರಿಯ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿರುತ್ತದೆ.

   ಈ ಮಾರುಕಟ್ಟೆಗೆ 1994 ರಲ್ಲಿಯೇ ಎಲ್ಲ ವ್ಯಾಪಾರಸ್ಥರು ತಮ್ಮ ವ್ಯಾಪಾರ-ವಹಿವಾಟನ್ನು ಸ್ಥಳಾಂತರ ಮಾಡಿರುತ್ತಾರೆ. ಮಾರುಕಟ್ಟೆಯ 1ನೇ ಹಂತದಲ್ಲಿ ಅಂಗಡಿ ವ ಗೋದಾಮುಗಳ ನಿರ್ಮಾಣ ಮಾಡುವ ಕಾಲಕ್ಕೆ ಮೂಲಭೂತ ಸೌಲಭ್ಯಗಳಾದ ಚರಂಡಿ, ಬೀದಿ-ದೀಪ, ಕುಡಿಯುವ ನೀರು, ರಸ್ತೆಗಳನ್ನು ಮಾಡಿದ್ದು, ಸಮಿತಿಯು ಅವುಗಳ ಸುಧಾರಣೆಗೆ ಕ್ರಮ ವಹಿಸದೇ ಇರುವುದು ಬೇಸರದ ಸಂಗತಿ. ಅಲ್ಲದೇ ಇದುವರೆಗೂ ಮಾರುಕಟ್ಟೆಯಲ್ಲಿ ಒಳಚರಂಡಿ (ಯುಜಿಡಿ ಲೈನ್) ಮಾಡಿರುವುದಿಲ್ಲ. ಇದ್ದ ಚರಂಡಿ (ಗಟಾರ) ಗಳು ಹೂಳು ತುಂಬಿಕೊಡು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೇ ಅಂಗಡಿ ವ ಗೋದಾಮುಗಳ ಆವರಣದಲ್ಲಿ ತುಂಬಿ ನಿಲ್ಲತ್ತವೆ. ಸರಿಯಾಗಿ ಬೀದಿ-ದೀಪಗಳು ಇಲ್ಲದ ಕಾರಣ ಕಳ್ಳತನಕ್ಕೆ ಅವಕಾಶ ನೀಡಿದಂತಾಗಿದೆ. ರಸ್ತೆಗಳ ಹಂಪುಗಳಿಗೆ (ತಡೆಗಳಿಗೆ) ಜೋಡಿಸಿದ ವ್ಯವಸ್ಥೆಗಳೆಲ್ಲಾ ಕಿತ್ತುಹೋಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸುಲಭ ಶೌಚಾಲಯಗಳ ವ್ಯವಸ್ಥೆ ಇಲ್ಲದ ಕಾರಣ ಪರಊರು-ಪರರಾಜ್ಯಗಳಿಂದ ಕೃಷಿ ಹುಟ್ಟುವಳಿಗಳ ಮಾರಾಟಕ್ಕೆ ಬರುವಂತಹ ರೈತಬಾಂಧವರಿಗೆ ತೀವ್ರ ತೊಂದರೆಯಾಗುತ್ತಿದೆ. ಮಾರುಕಟ್ಟೆ ಸ್ವಚ್ಛತೆಯ ವ್ಯವಸ್ಥೆ ಇಲ್ಲದೇ ಸಂಪೂರ್ಣ ಹಾಳಾದಂತಾಗಿದೆ.

   ಕಳೆದ 4 ವರ್ಷಗಳಿಂದ ಮಾರುಕಟ್ಟೆಗೆ ಒಣಮೆಣಸಿನಕಾಯಿ ಆವಕು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ರೈತರಿಗೆ ಮಾರುಕಟ್ಟೆಯಲ್ಲಿ ತಂಗಲು ವಸತಿ ಗೃಹಗಳು, ಸುಲಭ ಶೌಚಾಲಯಗಳು, ಸ್ನಾನದ ಗೃಹಗಳು ಇಲ್ಲದೇ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ವ್ಯಾಪಾರಸ್ಥರ ಸಂಘದಿoದ ಮಾರುಕಟ್ಟೆ ಪ್ರಾಂಗಣದಲ್ಲಿ ರೈತ ಬಾಂಧವರಿಗೆ, ಪೇಟೆ ಕಾರ್ಯಕರ್ತರಿಗೆ ರಿಯಾಯಿತಿ ದರದಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಿ ಸಂಘಕ್ಕೆ 40 ಗುಂಟೆ ಜಾಗೆಯನ್ನು ನೀಡಬೇಕೆಂದು ಈ ಒಳಗಾಗಿ ಸಮಿತಿಗೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದಷ್ಟು ಬೇಗನೇ ನಿವೇಶನ ಮಂಜೂರು ಮಾಡಿದರೆ ಅನುಕೂಲವಾಗುತ್ತದೆ ಎಂದು ಎಲ್ಲ ವ್ಯಾಪರಸ್ಥರು ಸಚಿವರಿಗೆ ಮನವಿ ಮಾಡಿದರು. ವರ್ತಕರ ಈ ಎಲ್ಲ ಪ್ರಸ್ತಾವನೆಗೆ ಸಚಿವರು ಸ್ಪಂದಿಸಿ ಮಾರುಕಟ್ಟೆಗೆ ಮುಖ್ಯವಾಗಿ ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು ವ್ಯವಸ್ಥೆ ಮಾಡುವುದಕ್ಕೆ, ನಿವೇಶನಗಳ ಕೆಜೆಪಿ ರೈತರ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್ ಸ್ಟೋರೇಜ್, ವೇಬ್ರಿಡ್ಜ್ ಮುಂತಾದ ಸೌಲಭ್ಯ ಒದಗಿಸುವ ಭರವಸೆ ನೀಡಿದರಲ್ಲದೇ ಕೃಷಿ ಕಾಯ್ದೆಯನ್ನು ಮರು ಜಾರಿಗೊಳಿಸಲು ಚರ್ಚಿಸಿದರು.

   ಮಾರುಕಟ್ಟೆ ಪ್ರಾಂಗಣದಲ್ಲಿ ನಿವೇಶನ ಪಡೆದು ಅಂಗಡಿ ಗೋದಾಮು ನಿರ್ಮಿಸುತ್ತಿರುವವರಿಗೆ ನೀಲನಕ್ಷೆಯ ಪ್ರಕಾರ ಕಟ್ಟಡ ಅಳತೆ ಹೆಚ್ಚು ಕಡಿಮೆಯಾದಲ್ಲಿ ಸಮಿತಿ ವಿಧಿಸುತ್ತಿರುವ ಹೆಚ್ಚುವರಿ ದಂಡದ ಶುಲ್ಕವನ್ನು ಮರುಪರಿಶೀಲಿಸುವಂತೆ ಮತ್ತು ಈಗಾಗಲೇ ಹಂಚಿಕೆ ಮಾಡಿ ಉಳಿದಿರುವ ನಿವೇಶನಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  ಇದೇ ಸಂದರ್ಭದಲ್ಲಿ ಸಚಿವರಿಗೆ ವ್ಯಾಪಾರಸ್ಥರ ಸಂಘದಿoದ ಸ್ವಾಗತಿಸಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಭೆಯಲ್ಲಿ ಎಪಿಎಮ್’ಸಿ ಮಾಜಿ ಅಧ್ಯಕ್ಷ ಶ್ರೀ ಬಾಪುಗೌಡ ಪಾಟೀಲ, ಜಗನ್ನಾಥಗೌಡ್ರ ಸಿದ್ದನಗೌಡ್ರ, ಸದಸ್ಯರಾದ ಅಶೋಕ ಬಾಳಿಕಾಯಿ, ಗುಂಡಪ್ಪ ಸಾವುಕಾರ, ಪ್ರಭಣ್ಣ ಅಣ್ಣೆಪ್ಪನವರ, ಶಂಭುಲಿ೦ಗ ಅಂಗಡಿ, ಬಸವರಾಜ ಯಕಲಾಸಪೂರ, ಮೋಹನ ಸೋಳಂಕಿ, ರಮೇಶ ಕುರವಾ, ಆಲೂಗಡ್ಡಿ-ಉಳ್ಳಾಗಡ್ಡಿ ವರ್ತಕರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ, ಎಪಿಎಮ್’ಸಿ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.

Related posts

ಲಿಂಗಪತ್ತೆ ಹಾಗೂ ನಕಲಿ ವೈದ್ಯರ ಮೇಲೆ ಕಠಿಣ ಕ್ರಮಕೈಗೊಳ್ಳಿ ಆಸ್ಪತ್ರೆಗಳ ಸೇವೆಗಳ ಬಗ್ಗೆ ದರಪಟ್ಟಿ ಪ್ರದರ್ಶನ ಕಡ್ಡಾಯ: ಡಿಸಿ ಸಂಜಯ ಶೆಟ್ಟೆಣ್ಣವರ

eNEWS LAND Team

ಉರುಸು ಪ್ರಯುಕ್ತ ಸಾಮೂಹಿಕ ಪ್ರಸಾದ ಸೇವನೆ :ಗ್ರಾಮಸ್ಥರು ಅಸ್ವಸ್ಥ

eNEWS LAND Team

ನೇತಾಜಿ ಬೋಸ್ ಹಾಗೂ ಪ್ರಮೋದ ಮುತಾಲಿಕ: ಜನುಮ ದಿನ

eNEWS LAND Team