24 C
Hubli
ಏಪ್ರಿಲ್ 26, 2024
eNews Land
ದೇಶ

100 ಕೋಟಿ ಲಸಿಕೆ ಸಂಭ್ರಮದಲ್ಲಿ ಭಾರತ !!

ಸಾಧನೆಗೆ ಹೆಮ್ಮೆ ಪಡೋಣ ವಿಶ್ರಮಿಸುವುದು ಬೇಡ

ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದಲ್ಲಿಯೂ ಶೇ.90 ರಷ್ಟು ಲಸಿಕಾಕರಣ ಗುರಿ

-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

 

ಹುಬ್ಬಳ್ಳಿ. ಅ.22:

ಕೋವಿಡ್ ಅಲೆ ಎದುರಿಸುವ ಕಾರ್ಯವು ರಾಜ್ಯ ಮತ್ತು ದೇಶದ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯ ಮತ್ತು ಕೊರತೆಗಳೆರಡನ್ನೂ ಪರಿಚಯಿಸಿದೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳಲ್ಲಿ ಗುಣಾತ್ಮಕ ಮತ್ತು ಗಮನಾರ್ಹ ಅಭಿವೃದ್ಧಿ ತರಲು ಕಾರಣವಾಗಿದೆ.ಭಾರತ ದೇಶದಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ನೂರು ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ ಇದಕ್ಕಾಗಿ ಹೆಮ್ಮೆ ಪಡೋಣ ಆದರೆ ವಿಶ್ರಮಿಸುವುದು ಬೇಡ, ಬರುವ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಅರ್ಹರೆಲ್ಲರಿಗೂ ಶೇ.90 ರಷ್ಟು ಕೋವಿಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ಕಿಮ್ಸ್ ಆವರಣದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 100 ಕೋಟಿ ಲಸಿಕಾಕರಣ ಭಾರತ ದೇಶದ ಪಯಣ ಕಾರ್ಯಕ್ರಮ ಹಾಗೂ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಸಮರ್ಪಣೆ ಮಾಡಿ ಅವರು ಮಾತನಾಡಿದರು.

ವಿಪತ್ತನ್ನು ಕೂಡ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳಬೇಕು (Convert calamity into opportunity) ಎಂಬ ಮಾತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ನಿಜ ಮಾಡಿ ತೋರಿಸಿದೆ.ಕೋವಿಡ್ ವೈರಾಣು ಕಾಲಿಟ್ಟಾಗ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಪಿಇ ಕಿಟ್,ಮಾಸ್ಕ್,ಕೈಗವಸುಗಳಿರಲಿಲ್ಲ ಇಂದು ಈ ಉತ್ಪನ್ನಗಳನ್ನಷ್ಟೇ ಅಲ್ಲ, ಕೋವಿಡ್ ಲಸಿಕೆಯನ್ನು ಕೂಡ ರಫ್ತು ಮಾಡುವ ಸಾಮರ್ಥ್ಯ ಗಳಿಸಿಕೊಂಡಿದ್ದೇವೆ.ಭಾರತದ ಈ ಸಾಧನೆಗೆ ವಿಶ್ವವೇ ಬೆರಗಾಗಿದೆ.ಕಳೆದ ಜನವರಿ 16 ರಿಂದ ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಪ್ರಾರಂಭಿಸಲಾಯಿತು.ಹಂತ ಹಂತವಾಗಿ ಹೆಚ್ಚಳ ಮಾಡುತ್ತ ಇದೀಗ ಕೇವಲ ಹತ್ತು ತಿಂಗಳ ಅವಧಿಯಲ್ಲಿ ನೂರು ಕೋಟಿ ಲಸಿಕೆ ನೀಡಿರುವುದು ಸಾಮಾನ್ಯ ಸಾಧನೆಯಲ್ಲ ಇದರ ಹಿಂದೆ ವೈದ್ಯರು,ಅರೆವೈದ್ಯಕೀಯ,ಆರೋಗ್ಯ ಕಾರ್ಯಕರ್ತರ ,ವಿವಿಧ ಇಲಾಖೆಗಳ ಅಧಿಕಾರಿ,ಸಿಬ್ಬಂದಿಯ ಶ್ರಮವಿದೆ.ಈ ಸಂದರ್ಭದಲ್ಲಿ ಅವರೆಲ್ಲರನ್ನೂ ಅಭಿನಂದಿಸುತ್ತೇನೆ.ಇನ್ನು 3-4 ತಿಂಗಳ ಅವಧಿಯಲ್ಲಿ ಮತ್ತೆ ನೂರು ಕೋಟಿ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ.ರಾಜ್ಯದಲ್ಲಿಯೂ ಡಿಸೆಂಬರ್ ಅಂತ್ಯದ ವೇಳೆಗೆ ಶೇ.90 ರಷ್ಟು ಜನರಿಗೆ ಮೊದಲ ಡೋಸ್ ಹಾಗೂ ಶೇ.70 ರಷ್ಟು ಎರಡನೇ ಡೋಸ್ ಲಸಿಕೆ ನೀಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.

ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುವಾಗ ಲಸಿಕಾಕರಣವೇ ಮದ್ದು ಎಂಬುದು ನೂರು ವರ್ಷಗಳ ಹಿಂದೆಯೇ ಸಾಬೀತಾಗಿದೆ.ಪೆನ್ಸಿಲಿನ್‌ಲಿಂದ ಪೊಲಿಯೋವರೆಗೆ ಅನೇಕ ಲಸಿಕೆಗಳು ಮನುಷ್ಯನಿಗೆ ಬಾಹ್ಯವಾಗಿ ಶಕ್ತಿ ತುಂಬಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗಿದೆ.ವೈರಾಣುಗಳಿಗೆ ಭೌಗೋಳಿಕ ಮತ್ತು ಖಗೋಳಿಯ ಗಡಿಗಳು ಇರುವುದಿಲ್ಲ.ಅಣುಸ್ಫೋಟದಂತೆ ಅದು ವೇಗವಾಗಿ ಹರಡಬಲ್ಲದು.ವೈರಾಣು ರೂಪಾಂತರಗೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ.ವಿಜ್ಞಾನಿಗಳು ಈ ನಿಟ್ಟಿನಲ್ಲಿ ಸಂಶೋಧನೆಗಳಲ್ಲಿ ಕಾರ್ಯತತ್ಪರರಾಗಿದ್ದಾರೆ.ಕೋವಿಡ್‌ನಿಂದಾಗಿ ದೇಶ ಮಾತ್ರವಲ್ಲ ಇಡೀ ವಿಶ್ವ ಸಮುದಾಯದ ಒಟ್ಟು ಆರೋಗ್ಯ ಸದೃಢವಾಗಿರಬೇಕು ಎಂಬ ಪಾಠ ಕಲಿತಿದ್ದೇವೆ. ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಿದೆ.ನಮ್ಮ ರಾಜ್ಯದ ಆಸ್ಪತ್ರೆಗಳಲ್ಲಿ ಒಂದೇ ವರ್ಷದಲ್ಲಿ 1 ಲಕ್ಷ 25 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೆಚ್ಚಾಗಿದೆ.4 ಸಾವಿರ ವೈದ್ಯಾಧಿಕಾರಿಗಳ ನೇಮಕ ಮಾಡಿಕೊಳ್ಳಲಾಗಿದೆ.ತಾಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಬೆಡ್‌ಗಳ ಸೌಲಭ್ಯ ಸ್ಥಾಪನೆಯಾಗಿವೆ.ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹಾಗೂ ಪೂರೈಕೆ ಸಮರ್ಪಕ ಮತ್ತು ಸಶಕ್ತವಾಗಿದೆ ಎಂದು ವಿವರಿಸಿದರು.

 

 

ಕಿಮ್ಸ್ ಸೇವೆ ಶ್ಲಾಘನೆ

ಉತ್ತರ ಕರ್ನಾಟಕದ ಹೆಮ್ಮೆಯ ಹಾಗೂ ಬಡವರ ಪಾಲಿನ ಸಂಜೀವಿನಿ ಎಂದೇ ಹೆಸರಾಗಿರುವ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್)ಯನ್ನು ಈ ಪ್ರದೇಶದ 6 ರಿಂದ 7 ಜಿಲ್ಲೆಗಳು ಅವಲಂಬಿಸಿವೆ.ಕೋವಿಡ್ ಮೊದಲ ಮತ್ತು ಎರಡನೇ ಅವಧಿಯಲ್ಲಿ ಕಿಮ್ಸ್ ನೀಡಿದ ಸೇವೆ ಶ್ಲಾಘನೀಯವಾಗಿದೆ.ಈ ಸಂಸ್ಥೆ ತನ್ನ ಒಟ್ಟು ಸಾಮರ್ಥ್ಯವನ್ನು ಕ್ರೋಢೀಕರಿಸಿ ಸೇವೆ ನೀಡಿದ ಪರಿಣಾಮ ಸಾವಿರಾರು ಜನರ ಪ್ರಾಣ ಉಳಿದಿದೆ.ಬ್ಲ್ಯಾಕ್ ಫಂಗಸ್ ಖಾಯಿಲೆಗೂ ಕೂಡ ಕಿಮ್ಸ್‌ನಲ್ಲಿ ಪರಿಣಾಮಕಾರಿ ಚಿಕಿತ್ಸೆ ದೊರೆತಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಕ್ತಕಂಠದಿಂದ ಶ್ಲಾಘನೆ ಮಾಡಿದರು.

ಆರೋಗ್ಯ ,ಕುಟುಂಬ ಕಲ್ಯಾಣ ಹಾಗೂ ವೈದ್ಯ ಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ದೇಶದಲ್ಲಿ ನೂರು ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ.ವೈದ್ಯರು,ದಾದಿಯರು,ನರ್ಸ್,ಅರೆವೈದ್ಯಕೀಯ ಸಿಬ್ಬಂದಿ ಇದಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಹಗಲಿರುಳು ಶ್ರಮಿಸಿದ್ದಾರೆ.ರಾಜ್ಯದ ಜನತೆ ಸಹಕಾರ ನೀಡಿದ್ದಾರೆ.ಅತಿಹೆಚ್ಚು ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.ಗಡಿ,ಬೆಟ್ಟ,ಗುಡ್ಡ,ನದಿ,ಸರೋವರಗಳನ್ನು ದಾಟಿ ಲಸಿಕೆಗಳನ್ನು ನೀಡಿದ ಉದಾಹರಣೆಗಳಿವೆ.ಚೀನಾದ ನಂತರ ಅತಿಹೆಚ್ಚು ಲಸಿಕೆ ನೀಡಿದ ದೇಶ ಭಾರತವಾಗಿದೆ. ಮಕ್ಕಳಿಗೆ ನೀಡುತ್ತಿರುವ ಲಸಿಕೆಗಳ ಜೊತೆಗೆ ನ್ಯುಮೋನಿಯಾ ತಡೆಯಲು ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ನೀಡಿಕೆಗೆ ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಚಾಲನೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.ಮಕ್ಕಳು ದೇಶದ ಹಾಗೂ ಸಮಾಜದ ಆಸ್ತಿ ,ಅವರ ಆರೋಗ್ಯ ಸುರಕ್ಷತೆಗೆ ಈ ಲಸಿಕೆ ಪೂರಕವಾಗಲಿದೆ.ಮಗುವಿನ ಒಂದೂವರೆ,ಮೂರುವರೆ ಹಾಗೂ ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಈ ಲಸಿಕೆ ಹಾಕಿಸಬೇಕು ಎಂದರು.

ಲಸಿಕಾಕರಣಕ್ಕೆ ಶ್ರಮಿಸಿದ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಹಂತಗಳ ಅಧಿಕಾರಿಗಳು,ಸಿಬ್ಬಂದಿಯನ್ನು ಗೌರವಿಸುವದರ ಸಂಕೇತವಾಗಿ ಎಲ್ಲಾ ದರ್ಜೆಗಳ ಅಧಿಕಾರಿ ಹಾಗೂ ಸಿಬ್ಬಂದಿಯ ಪ್ರತಿನಿಧಿಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿ,ಗೌರವಿಸಿದರು.

ಕೈಮಗ್ಗ ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ,
ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ರಾಜ್ಯ ರೇಷ್ಮೇ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ,ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನರಾಜ್‌ಸಿಂಗ್,ಆರೋಗ್ಯ ಇಲಾಖೆಯ ಆಯುಕ್ತ ಡಾ.ರಂದೀಪ್ , ರಾಷ್ಟ್ರೀಯ ಆರೋಗ್ಯ ಮಿಷನ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಅರುಂಧತಿ,ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ,ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್,ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ,ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ಎಸ್.ಎಂ.ಹೊನಕೇರಿ ಮತ್ತಿತರರು ಉಪಸ್ಥಿತರಿದ್ದರು.

ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಸ್ವಾಗತಿಸಿದರು.ಡಾ.ರಾಜಶೇಖರ ದ್ಯಾಬೇರಿ ಕಾರ್ಯಕ್ರಮ ನಿರೂಪಿಸಿದರು.

 

Related posts

ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

eNewsLand Team

ಕೃಷಿ ಕಾಯಿದೆ ಹಿಂಪಡೆತದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

eNEWS LAND Team

AC cabin mandatory in trucks from 2025: Decision

eNEWS LAND Team