28.6 C
Hubli
ಮೇ 15, 2024
eNews Land
ವಿದೇಶ ಸುದ್ದಿ

ಭೂಕಂಪ; ತಾಲಿಬಾನ್ ಅಫ್ಘಾನಿಸ್ತಾನ ಸ್ಮಶಾನ, ತುತ್ತು ಅನ್ನಕ್ಕೂ ತತ್ವಾರ!!

ಇಎನ್ಎಲ್ ಡೆಸ್ಕ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮ ದೇಶ ಸ್ಮಶಾನವಾಗಿದೆ. ಸಾಕಷ್ಟು ಮಕ್ಕಳು ಸೇರಿ ಸಾವಿರಾರು ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಅಲ್ಲೀಗ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಿದೆ.

ಸಾವಿರಾರು ಜನರು ಈ ಭೂಕಂಪದಲ್ಲಿ ಮೃತಪಟ್ಟಿದ್ದು, ಭೀಕರ ಮಳೆಗೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. 6.1 ಮ್ಯಾಗ್ನಿಟ್ಯೂಡ್ ದಾಖಲಾದ ಭೂಕಂಪದಿಂದಾಗಿ ಈ ಭಾಗದ ಮಣ್ಣಿನ ಮನೆಗಳೆಲ್ಲ ಧರಾಶಾಹಿಯಾಗಿದೆ.

ತಾಲಿಬಾನ್ ಆಡಳಿತ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯಕ್ಕೆ ವೈದ್ಯಕೀಯ ನೆರವು ಕೋರಿದೆ. ಸಂಪರ್ಕ ಮಾಧ್ಯಮಗಳು ಸಂಪೂರ್ಣವಾಗಿ ನಾಶವಾಗಿವೆ. ಹೀಗಾಗಿ ಸಂಕೀರ್ಣ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮತ್ತಷ್ಟು ಕಷ್ಟವಾಗಿದೆ ಎಂದು ರೈಟರ್ಸ್ ನ್ಯೂಸ್ ಏಜೆನ್ಸಿಗೆ ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.

ತೀವ್ರವಾಗಿ ಹಾನಿಯಾಗಿರುವ ಪೆಕ್ತಿಕಾ ಪ್ರದೇಶದಲ್ಲಿ ವಿಶ್ವಸಂಸ್ಥೆಯ ಪಡೆ ತುರ್ತಾಗಿ ಆಹಾರ ಹಾಗೂ ಬಟ್ಟೆಬರೆಗಳನ್ನು ಪೂರೈಸುತ್ತಿದೆ.

ಬಿಬಿಸಿ ಮಾಧ್ಯಮದ ಜೊತೆಗೆ ಮಾತನಾಡಿರುವ ರಕ್ಷಣಾ ಪಡೆ, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. 1500ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದಾರೆ. ಕೆಲ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ರಸ್ತೆ, ಮೊಬೈಲ್ ಟಾವರ್ ಗಳು ಪ್ರಯೋಜನಕ್ಕೆ ಬರುವಂತಿಲ್ಲ ಎಂದಿದ್ದಾರೆ.

ಪೂರ್ವದ ಪೆಕ್ತಿಕಾ ಪ್ರದೇಶದ ಗಯಾನ್, ಬಾರ್ಮಲ್ ಜಿಲ್ಲೆಗಳಲ್ಲಿ ಹಲವಾರು ಹಳ್ಳಿಗಳು ಕಾಣುತ್ತಲೇ ಇಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯೊಬ್ಬರು ಮಾತನಾಡಿ ಮನೆಯ 19 ಸದಸ್ಯರು ಕಾಣುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ವಿಶ್ವಸಂಸ್ಥೆಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಶೇ.93ರಷ್ಟು ಮನೆಗಳು ಆಹಾರದ ಕೊರತೆ ಎದುರಿಸುತ್ತಿವೆ. ರೆಡ್ ಕ್ರಾಸ್’ನ ಲೂಸಿಯಾನ್ ಕ್ರಿಶ್ಚನ್ ಮಾತನಾಡಿ ಒಂದು ಹೊತ್ತಿನ ಊಟಕ್ಕೂ ಇಲ್ಲಿನ ಜನತೆ ಪರದಾಡುತ್ತಿದ್ದಾರೆ ಎಂದು ಬಿಬಿಸಿ ಮಾಧ್ಯಮ ವರದಿ ಪ್ರಕಟಿಸಿದೆ.

ಕಳೆದ ದಶಕದಲ್ಲಿ ಭೂಕಂಪದ ಕಾರಣದಿಂದ 7ಸಾವಿರಕ್ಕೂ ಹೆಚ್ಚಿನ ಜನರು ಮೃತಪಟ್ಟಿದ್ದಾರೆ‌. ಒಂದು‌ ವರ್ಷಕ್ಕೆ ಸರಾಸರಿ 560ಜನರು ಈ ಪ್ರಕೃತಿ ವಿಕೋಪದಿಂದ ಸಾಯುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Related posts

ಮುಖ್ಯಮಂತ್ರಿಗಳಿಂದ “ಸಹಕಾರ ಸಮೃದ್ಧಿ ಸೌಧ” ಕಟ್ಟಡದ ಶಿಲಾನ್ಯಾಸ

eNewsLand Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಖಾಡಕ್ಕೆ ಆಮ್ ಆದ್ಮಿ- ಸಂತೋಷ ನರಗುಂದ

eNewsLand Team

ಬೆಳೆ ಹಾನಿ ಪರಿಹಾರವನ್ನು ನೀಡಲು ಒತ್ತಾಯಿಸಿ ಪ್ರತಿಭಟನೆ

eNEWS LAND Team