26.2 C
Hubli
ಮೇ 4, 2024
eNews Land
ಜಿಲ್ಲೆ ಸುದ್ದಿ

ಬಿಜೆಪಿ ಯೋಜನೆಗಳೇ ಕಾಂಗ್ರೆಸ್’ನ ಪ್ರಣಾಳಿಕೆ; ಇದೊಂದು ದಗಾಬಾಜಿ ಪ್ರಣಾಳಿಕೆ: ಬೊಮ್ಮಾಯಿ ವ್ಯಂಗ್ಯ

ಇಎನ್ಎಲ್ ಧಾರವಾಡ : ಕಾಂಗ್ರೆಸ್ ಇವತ್ತು ಪ್ರಣಾಳಿಕೆ ಬಿಡುಗಡೆ ಮಾಡಿದೆ. ನಾವು ಘೋಷಣೆ ಮಾಡಿರುವ ಯೊಜನೆಗಳನ್ನೇ ಅವರು ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ನವರು ಘೋಷಣೆ ಮಾಡಿರುವ ದಗಾಬಾಜಿ ಪ್ರಣಾಳಿಕೆ ಇದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಕುಂದಗೋಳದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್ ಪಾಟೀಲ ಪರ ಪ್ರಚಾರ ನಡೆಸಿ ಅವರು ಮಾತನಾಡಿದರು.

ಕುಂದಗೋಳ ತಾಲೂಕಿಗೆ ನಾನು ಬಂದಾಗ ಭಾವನಾತ್ಮಕವಾಗುತ್ತೇನೆ . ನನ್ನ ಬಹುತೇಕ ಬಾಲ್ಯವನ್ನು ಇಲ್ಲೆ ಕಳೆದಿದ್ದೇನೆ. ಕಮಡೊಳ್ಳಿ, ಸಂಶಿ, ಗುಡಗೇರಿ ಇಲ್ಲಿಯೇ ತಿರುಗಾಡುತ್ತಿದ್ದೇವು. ನಮ್ಮ ತಂದೆ ಇಲ್ಲಿನ ರೈತರ ಸುಮಾರು 30 ಸಾವಿರ ಎಕರೆ ಜಮೀನು ಬಿಡಿಸಿ ಕೊಟ್ಟಿದ್ದರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿದ್ದರು ಎಂದರು.

ಕುಂದಗೋಳದಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ, ಬ್ಯಾಡಗಿ ಮೆಣಸಿನಕಾಯಿಗೆ ಹೆಸರುವಾಸಿಯಾಗಿದೆ. ಮುಂದಿನ ವರ್ಷದಿಂದ ಕುಂದಗೋಳದಲ್ಲಿಯೇ ಮೆಣಸಿನಕಾಯಿ ಖರೀದಿ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಒಂದು ಕಡೆ ದೇಶಭಕ್ತಿ, ದೇಶದ ಅಭಿವೃದ್ಧಿ ಭದ್ರತೆಯ ಆಧಾರದಲ್ಲಿ ನಾವು ಮತ ಕೇಳುತ್ತಿದ್ದೇವೆ. ಇನ್ನೊಂದೆಡೆ ದೇಶ ವಿರೋಧಿಗಳ ಜೊತೆ ಕೈ ಜೋಡಿಸಿ, ದೇಶ ವಿಭಜನೆ ಮಾಡುವ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಇನ್ನೊಂದು ಕಡೆ ಇದೆ. ಕಿಸಾನ್ ಸಮ್ಮಾನ ಯೋಜನೆ ಅಡಿಯಲ್ಲಿ ರಾಜ್ಯದ 54 ಲಕ್ಷ ರೈತರಿಗೆ ನೇರ ನಗದು ನೀಡಲಾಗಿದೆ. ಕುಂದಗೊಳದಲ್ಲಿ 20 ಸಾವಿರ ರೈತರಿಗೆ ತಲುಪಿದೆ ಎಂದರು.

ಕುಂದಗೋಳ ತಾಲೂಕು 20 ವರ್ಷದಿಂದ ಅಭಿವೃದ್ಧಿ ವಂಚಿತ ಆಗಿದೆ. ನಾನು ಯಾವುದೇ ತಾಲೂಕಿನ ಶಾಸಕರಿಗೆ ಬೇಧ-ಭಾವ ಇಲ್ಲದೇ ಅನುದಾನ ನೀಡಿದ್ದೇನೆ. ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂ. ನೀಡಿದ್ದೇನೆ. ಕುಂದಗೋಳ ತಾಲೂಕಿಗೆ 250 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ.‌ ಶಾಸಕರಲ್ಲದಿದ್ದರೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರು ಕೇಳುವ ಎಲ್ಲ ಅನುದಾನವನ್ನು‌ ನೀಡಿದ್ದೇನೆ ಎಂದರು.

ಕಾಂಗ್ರೆಸ್ ನವರು ಇವತ್ತು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ‌. ಇದಕ್ಕೂ ಮೊದಲು ಗ್ಯಾರೆಂಟಿ ‌ಕಾರ್ಡ್ ನೀಡಿದ್ದಾರೆ. 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ. ಕೋವಿಡ್ ನಂತರ‌ ನಾವು ಈಗಾಗಲೇ 10 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಮೋದಿ ಅಕ್ಕಿಗೆ ತಮ್ಮ ಗೋಣಿ‌ ಚೀಲ ಹಾಕಿ ಅದಕ್ಕೆ ತಮ್ಮ ಫೋಟೊ ಹಾಕಿ ಕೊಂಡಿದ್ದಾರೆ. ಮೇ 10 ರ ವರೆಗೆ ಇವರ ಗ್ಯಾರೆಂಟಿ‌, ಆ ಮೇಲೆ ಗಳಗಂಟಿ ಎಂದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನಾವು ಈಗಾಗಲೇ ಘೊಷಣೆ ಮಾಡಿದ್ದೇವೆ‌. ಅದನ್ನೇ ಬೆರೆ ಹೆಸರಲ್ಲಿ ಘೋಷಣೆ ಮಾಡಿದ್ದಾರೆ. ಕಳಸಾ ಬಂಡೂರಿ ಐದು ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ನಾವು ಈಗಾಗಲೇ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ನಾಲ್ಕು ಕಂದಾಯ ವಿಭಾಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ತೆರೆಯುತ್ತಿದ್ದೇವೆ. ಈಗಾಗಲೇ ನಾಲ್ಕು ಕಂದಾಯ ವಿಭಾಗಗಳಲ್ಲಿ ಜಯದೇವ ಆಸ್ಪತ್ರೆ ತೆರೆಯಲಾಗಿದೆ. ಹುಬ್ಬಳ್ಳಿ ಯಲ್ಲಿ 250 ಹಾಸಿಗೆಗಳ ಜಯದೇವ ಆಸ್ಪತ್ರೆ ಆರಂಬಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಎಂ ಆರ್ ಪಾಟೀಲ್ ಅವರನ್ನು ಗೆಲ್ಲಿಸಿ ಕಳುಹಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಬೇಕಾದ ಎಲ್ಲ ಅನುದಾನ ಒದಗಿಸುತ್ತೇನೆ. ಇದು ನನ್ನ ತವರು ಊರು, ಇದರ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

Related posts

EXTENSION OF PERIODICITY OF TRAINS

eNEWS LAND Team

ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

eNEWS LAND Team

ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team