24.9 C
Hubli
ಮೇ 10, 2024
eNews Land
ರಾಜ್ಯ

ಹೆಚ್ಚುವರಿ ಅಕ್ಕಿ ಕೊಳ್ಳಲು ನಿರಾಕರಿಸಿದ ಕೇಂದ್ರ ಸರ್ಕಾರ: ಸಿಎಂ ಸಿದ್ರಾಮಯ್ಯ

ಇಎನ್ಎಲ್ ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರಂಟಿ ನೀಡಿರುವ ಪಂಚ ಯೋಜನೆಗಳಲ್ಲಿ ಒಂದಾಗಿರುವ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿದವರಿಗೆ ತಿಂಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆಗೆ ಸಹಕರಿಸಿ ಪ್ರಸ್ತುತ ನೀಡುತ್ತಿರುವ 5 ಕೆಜಿ ಅಕ್ಕಿ ಜೊತೆ ಹೆಚ್ಚುವರಿ 5 ಕೆಜಿ ಅಕ್ಕಿ ಕೊಳ್ಳಲು ಕೋರಿ ರಾಜ್ಯ ಸರ್ಕಾರ ಭಾರತೀಯ ಆಹಾರ ನಿಗಮಕ್ಕೆ ಬರೆದಿರುವ ಪತ್ರಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿ ಯೋಜನೆಗೆ ತೊಂದರೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಂಡಿಸಿದರು.

ಅವರು ಇಂದು ನಗರದ ಶಕ್ತಿಭವನದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಡವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಘೋಷಿಸಿರುವ ಮಹತ್ವಕಾಂಕ್ಷಿ ಯೋಜನೆ ಅನ್ನಭಾಗ್ಯದ ಅಡಿ ಬಡವರಿಗಾಗಿ ತಿಂಗಳಿಗೆ 10 ಕೆಜಿ ಅಕ್ಕಿ ನೀಡಲು ಉದ್ದೇಶಿಸಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ಹೇಳಿದರು.

ಹೆಚ್ಚುವರಿ ಅಕ್ಕಿ ಸರಬರಾಜು ಮಾಡಲು ಕೋರಿ ಇದೇ ತಿಂಗಳು 9 ರಂದು ಭಾರತೀಯ ಆಹಾರ ನಿಗಮಕ್ಕೆ ತಿಂಗಳಿಗೆ 2,28,000 ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿ ಪತ್ರ ಬರೆಯಲಾಗಿತ್ತು, ಅದಕ್ಕೆ ಸ್ಪಂದಿಸಿದ್ದ ನಿಗಮ ಜೂನ್ 12 ರಂದು ಪತ್ರ ಬರೆದು ಪ್ರತಿ ಕೆಜಿಗೆ 34 ರೂ. ಮತ್ತು ಸರಬರಾಜು ಪ್ರತಿ ಕೆಜಿಗೆ 2.60 ರೂ ಸೇರಿ ಒಟ್ಟು ಕೆಜಿಗೆ 36.60 ರೂ ನಂತೆ 2,08,425.750 ಮೆಟ್ರಿಕ್ ಟನ್ ಅಕ್ಕಿನೀಡುವುದಾಗಿ ಒಪ್ಪಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ಇದರ ನಡುವೆ ಕೇಂದ್ರ ಆಹಾರ ಇಲಾಖೆ, ಭಾರತೀಯ ಆಹಾರ ನಿಗಮಕ್ಕೆ ಜೂನ್ 13 ರಂದು ಪತ್ರ ಬರೆದು ರಾಜ್ಯಗಳಿಗೆ ಸಗಟು ಅಕ್ಕಿಯನ್ನು ಮಾರುವಂತಿಲ್ಲ ಮತ್ತು ಈ ಆದೇಶ ದೇಶದ ಈಶಾನ್ಯ ರಾಜ್ಯಗಳಿಗೆ ಅನ್ವಯಿಸುವುದಿಲ್ಲ ಎಂದು ಪತ್ರ ಬರೆಯುವ ಮೂಲಕ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಇದರ ವಿಷಯವಾಗಿ ಭಾರತೀಯ ಆಹಾರ ನಿಗಮದ ಡಿಜಿಎಮ್ ಅವರನ್ನು ಸಹ ಖುದ್ದಾಗಿ ಕರೆದು ಮಾತನಾಡಲಾಗಿತ್ತು, ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಮಂತ್ರಿ ಮುನಿಯಪ್ಪ ಅವರು ಸಹ ಅವರೊಂದಿಗೆ ಸಭೆ ನಡೆಸಿದ್ದರು. ಅಧಿಕಾರಿಗಳು ಖುದ್ದಾಗಿ ಮಾತನಾಡಿ ತಮ್ಮ ನಿಗಮದಲ್ಲಿ 7 ಲಕ್ಕಕ್ಕೂ ಹೆಚ್ಚಿನ ಅಕ್ಕಿ ದಾಸ್ತಾನು ಇರುವುದಾಗಿ ತಿಳಿಸಿದ್ದರು, ಈಗ ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರ ನಿರಾಕರಿಸಿರುವುದು ವಿರೋಧಿ ಧೋರಣೆಯಾಗಿದೆ ಎಂದರು.
ಕೇಂದ್ರ ಸರ್ಕಾರ ನಮಗೆ ಪುಕ್ಕಟ್ಟೆಯಾಗಿ ಅಕ್ಕಿ ನೀಡುವುದಿಲ್ಲ, ಪ್ರತಿ ಕೆಜಿಗೆ 36.60 ರಂತೆ ತಿಂಗಳಿಗೆ ನಮಗೆ 2,28,000 ಮೆಟ್ರಿಕ್ ಟನ್ ಅವಶ್ಯಕತೆಯನ್ನು ಪೂರೈಸಲು ತಿಂಗಳಿಗೆ 840 ಕೋಟಿ ರೂ. ಗಳಂತೆ ವಾರ್ಷಿಕವಾಗಿ ರಾಜ್ಯ ಸರ್ಕಾರಕ್ಕೆ 10,092 ಕೋಟಿ ರೂ. ವೆಚ್ಚವಾಗಲಿದೆ.
ಜುಲೈ ಒಂದರಿಂದ ಅಕ್ಕಿ ನೀಡಲಾಗುವುದು ಎಂದು ಘೋಷಿಸಿರುವ ಹಿನ್ನಲೆಯಲ್ಲಿ ಕೊನೆ ಕ್ಷಣದಲ್ಲಿ ಈ ರೀತಿ ಮಾಡಬಾರದಿತ್ತು, ನಮಗೆ ಈ ಮೊದಲು ಸಾಧ್ಯವಿಲ್ಲ ಎಂದು ತಿಳಿಸಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದಾಗಿತ್ತು. ಈಗಲೂ ಸಹ ನಾವು ಕೈ ಕಟ್ಟಿ ಕೂತುಕೊಳ್ಳುವುದಿಲ್ಲ, ಪಕ್ಕದ ರಾಜ್ಯ ತೆಲಾಂಗಾಣ ಸೇರಿದಂತೆ ಅಕ್ಕಿ ಬೆಳೆಯುವ ರಾಜ್ಯಗಳಾದ ಛತ್ತೀಸ್‍ಗಡ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನೇರವಾಗಿ ಮಾತನಾಡಿ ಅಕ್ಕಿ ಕೊಳ್ಳಲು ವ್ಯವಸ್ಥೆ ಮಾಡಲಾಗುವುದು ಹಾಗೂ ಮಂತ್ರಿಗಳನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳನ್ನು ನೇರವಾಗಿ ಭೇಟಿ ಮಾಡಿ ಚರ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಾಗುವುದು, ಯಾವುದೇ ಅಡ್ಡಿ ಆತಂಕಗಳಿಗೂ ಜಗ್ಗುವುದಿಲ್ಲ, ನಮ್ಮದು ಬಡವರ ಪರ ಸರ್ಕಾರ, ಕೇಂದ್ರದ ಈ ಧೋರಣೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

Related posts

ಗೋವಾದಲ್ಲಿ ಕನ್ನಡ ಭವನ : ಸಿಎಂ ಬೊಮ್ಮಾಯಿ

eNEWS LAND Team

ಶೆಟ್ಟರ್ ಸೋಲಿಸಲು ಬಿಜೆಪಿ ಚಕ್ರವ್ಯೂಹ: ಕಾಂಗ್ರೆಸ್ ಶಾಲು ಹಾಕ್ಕೊಂಡವರ ರಾಜಕೀಯ ಜೀವನ ‘THE END’?

eNEWS LAND Team

ಲಾಕ್ ಡೌನ್ ಇಲ್ಲ: ವದಂತಿಗೆ ಕಿವಿಕೊಡಬೇಡಿ: ಸಿಎಂ

eNewsLand Team