29 C
Hubli
ಮೇ 3, 2024
eNews Land
ಜಿಲ್ಲೆ ರಾಜಕೀಯ

ಮೇ 13ರ ಬೆಳಗ್ಗೆ 8 ಗಂಟೆಯಿಂದ  ಮತ ಎಣಿಕೆ ಆರಂಭ ; ಮತ ಎಣಿಕಾ ಕೇಂದ್ರಕ್ಕೆ 375 ಸಿಬ್ಬಂದಿ ನಿಯೋಜನೆ

ಇಎನ್ಎಲ್ ಧಾರವಾಡ: ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ (ಮೇ.10) ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಲ್ಲಿ ಶಾಂತಿಯುತವಾಗಿ ಜರುಗಿದ ಮತದಾನದಲ್ಲಿ ಒಟ್ಟು 11,18,750 ಜನ ಮತದಾರರು ತಮ್ಮ ಮತ ಚಲಾಯಿಸಿದ್ದು, ಶೇ.73.45 ರಷ್ಟು ಮತದಾನವಾಗಿದೆ. ಮೇ.13 ರ ಬೆಳಿಗ್ಗೆ 8 ಗಂಟೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಸ್ಥಾಪಿಸಿರುವ ಮತ ಎಣಿಕಾ ಕೇಂದ್ರದಲ್ಲಿ ಮತಗಳ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾಚುನಾವಣಾಧಿಕಾರಿಗಳು ಆಗಿರುವು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮತ ಎಣಿಕಾ ಕಾರ್ಯದ ಸಿದ್ಧತೆಗಳನ್ನು ವಿವರಿಸಿದರು.

ಮತ ಎಣಿಕಾ ಕಾರ್ಯವು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಜರುಗಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು, ಅಭ್ಯರ್ಥಿಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ಮತ ಎಣಿಕಾ ಸಿಬ್ಬಂದಿಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಲು ಪ್ರತ್ಯೇಕ ಪ್ರವೇಶ ಮಾರ್ಗಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಮತ ಎಣಿಕಾ ಕೇಂದ್ರಕ್ಕೆ ನಿರಂತರ 24 ಗಂಟೆಯ ಸಿಸಿ ಟಿವಿ ಕಣ್ಗಾವಲು ಇಡಲಾಗಿದೆ. ಮತ ಎಣಿಕಾ ದಿನದಂದು ಸೂಕ್ತ ಭದ್ರತೆ ಹಾಗೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅರೆಸೇನಾಪಡೆ, ರಾಜ್ಯ ಪೊಲೀಸ್ ಪಡೆಯಿಂದ ಮತ ಎಣಿಕಾ ಕೇಂದ್ರಕ್ಕೆ ಮೂರು ಸುತ್ತಿನ ಭದ್ರತೆಯನ್ನು ನೀಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ, ನಿಯಮಗಳ ಉಲ್ಲಂಘನೆ ಆಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮತ ಎಣಿಕಾ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿಗಳು, ಅಭ್ಯರ್ಥಿಗಳ ಏಜೆಂಟರು, ಆಯಾ ಮತ ಕ್ಷೇತ್ರದ ಚುನಾವಣಾಧಿಕಾರಿಗಳು ನೀಡಿರುವ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಿರಬೇಕು. ಸೂಚಿತ ಮಾರ್ಗಗಳಲ್ಲಿ ಮತ್ತು ಪ್ರವೇಶ ದ್ವಾರಗಳ ಮೂಲಕ ಸಂಚರಿಸಿ, ಸಹಕರಿಸಬೇಕು ಎಂದು ಅವರು ತಿಳಿಸಿದರು.

ಮತ ಎಣಿಕಾ ಕಾರ್ಯವು ಸುಗಮವಾಗಿ ಮತ್ತು ಸುಸೂತ್ರವಾಗಿ ಯಾವುದೇ ಗೊಂದಲಗಳಿಲ್ಲದೆ ಪಾರದರ್ಶಕವಾಗಿ ನಡೆಯಲು ಅನುಕೂಲವಾಗುವಂತೆ ಮತ ಎಣಿಕಾ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಮತ್ತು ಸುಪರ್‍ವೈಸರ್, ಕೌಂಟಿಂಗ್ ಅಸಿಸ್ಟಂಟ್ ಹಾಗೂ ಅಬ್ಸರ್ವರ್‍ಗಳು ಸೇರಿದಂತೆ ಒಟ್ಟು 375 ಜನರನ್ನು ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಒಟ್ಟು 14 ಟೇಬಲ್‍ಗಳನ್ನು ಮಾಡಲಾಗಿದ್ದು, ಮತ ಎಣಿಕೆ ಸುಸೂತ್ರವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸುಮಾರು 8,500 ರಷ್ಟು ಅಂಚೆ ಮತಪತ್ರಗಳು ಬರುವ ನೀರಿಕ್ಷೆ ಇದ್ದು, ಈಗಾಗಲೇ 6,000 ಕ್ಕೂ ಹೆಚ್ಚು ಅಂಚೆ ಮತಪತ್ರಗಳು ಬಂದಿವೆ. ಮತ ಎಣಿಕಾ ದಿನವಾದ ಮೇ.13 ಬೆಳಿಗ್ಗೆ 7-59 ರ ವರೆಗೂ ಅಂಚೆ ಮತ ಪತ್ರ ಸ್ವೀಕರಿಸಲು ಚುನಾವಣಾ ಆಯೋಗದ ನಿಯಮಾವಳಿಯಂತೆ ಅವಕಾಶವಿದೆ ಎಂದು ಅವರು ತಿಳಿಸಿದರು.

ಮತ ಎಣಿಕಾ ದಿನವಾದ ಮೇ.13 ರ ಬೆಳಿಗ್ಗೆ 6 ಗಂಟೆಯಿಂದ ಮೇ.14 ರ ಬೆಳಿಗ್ಗೆ 6 ಗಂಟೆಯವರೆಗೆ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಲು ಅನುವಾಗುವಂತೆ ಧಾರವಾಡ ಜಿಲ್ಲಾದ್ಯಂತ ಸಿಆರ್‍ಪಿಸಿ 1973 ರ ಕಲಂ 144 ಅನ್ವಯ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ  ಹಾಗೂ ಮತ ಎಣಿಕಾ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಯಾವುದೇ ರೀತಿಯ ವಿಜಯೋತ್ಸವ ಆಚರಣೆಗೆ ಅವಕಾಶವಿರುವುದಿಲ್ಲ. ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಶಂಕರಗೌಡ ಬಸನಗೌಡರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಧಾರವಾಡ ಜಿಲ್ಲೆಯಲ್ಲಿ 1642 ಮತಗಟ್ಟೆಗಳು: ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ

eNEWS LAND Team

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆ; ಮೇ 19ಕ್ಕೆ ಅಧಿಸೂಚನೆ  -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNewsLand Team

ಕಟ್ಟುನಿಟ್ಟಾಗಿ ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ

eNewsLand Team