26 C
Hubli
ಏಪ್ರಿಲ್ 20, 2024
eNews Land
ಜಿಲ್ಲೆ ಸುದ್ದಿ

ಮತ ಎಣಿಕೆ: ಬಂದೋಬಸ್ತ್’ಗೆ 548 ಪೊಲೀಸರ ನೇಮಕ: ಪೊಲೀಸ್ ಕಮೀಷನರ್ ರಮಣ ಗುಪ್ತ

ಇಎನ್ಎಲ್ ಧಾರವಾಡ: ಕರ್ನಾಟಕ ವಿಧಾನಸಭೆಗೆ ಜರುಗಿದ ಸಾರ್ವತ್ರಿಕ ಚುನಾವಣೆಯ ಮತ ಎಣಿಕಾ ಕಾರ್ಯವು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮೇ.13 ರ ಬೆಳಿಗ್ಗೆ ಯಿಂದ ಆರಂಭವಾಗಲಿದ್ದು, ಮತದಾನ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮವಹಿಸಲಾಗಿದ್ದು, ಸುಮಾರು 548 ಪೊಲೀಸ್, ಅಧಿಕಾರಿ ಸಿಬ್ಬಂದಿಗಳನ್ನು ಸೂಕ್ತ ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ ಗುಪ್ತ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತ ಎಣಿಕಾ ದಿನದಂದು ಸೂಕ್ತ ಭದ್ರತೆಗಾಗಿ ಡಿಸಿಪಿಗಳ  ನೇತೃತ್ವದಲ್ಲಿ 4 ಜನ ಎಸಿಪಿ, 18 ಜನ ಪೊಲೀಸ್ ಇನ್ಸ್‍ಪೆಕ್ಟರ್, 31 ಜನ ಪಿಎಸ್‍ಐ, 60 ಜನ ಎಎಸ್‍ಐ, 138 ಹೆಡ್‍ಕಾನ್‍ಸ್ಟೇಬಲ್, 240 ಪೊಲೀಸ್ ಕಾನ್ಸ್‍ಟೇಬಲ್ ಮತ್ತು 57 ಜನ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 3 ತುಕಡಿ, ಕೇಂದ್ರ ಅರೆಸೇನಾಪಡೆಯ 2 ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ಮಾರ್ಗಗಳು: ಮತ ಎಣಿಕಾ ಸಿಬ್ಬಂದಿಗಳು, ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶವಾಗಲು ಎತ್ತಿನಗುಡ್ಡ ರಸ್ತೆಯ ಮುಖಾಂತರ ಕೃಷಿ ವಿಶ್ವವಿದ್ಯಾಲಯದ ಹೊಸ ಆಡಳಿತ ಕಚೇರಿ (ಸ್ಟೇಟ್ ಬ್ಯಾಂಕ್ ಎದುರುಗಡೆ) ಆವರಣದಲ್ಲಿ ಪ್ರವೇಶ ದ್ವಾರ ಹಾಗೂ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಮತ ಎಣಿಕಾ ಏಜೆಂಟರು ಮತ ಎಣಿಕಾ ಕೇಂದ್ರಕ್ಕೆ ಆಗಮಿಸಲು ಬೆಳಗಾವಿ ರಸ್ತೆಯ ಕೆಇಬಿ ಗ್ರೀಡ್ ಹತ್ತಿರದ ಪ್ರವೇಶ ದ್ವಾರದ ಮೂಲಕ ಪ್ರವೇಶ ಮಾಡಿ, ಕಾರಂಜಿ ಸರ್ಕಲ್ ಬಳಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ಕೃಷಿ ಮೇಳದ ಮುಖ್ಯ ಪ್ರವೇಶ ದ್ವಾರದ ಮೂಲಕ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.  

ಎತ್ತಿನಗುಡ್ಡದ ರಸ್ತೆಯಲ್ಲಿ ಬರುವ ವಿದ್ಯಾರ್ಥಿನಿಯರ ವಸತಿ ನಿಲಯದ ಹತ್ತಿರ ಇರುವ ಪ್ರವೇಶ ದ್ವಾರದ ಮೂಲಕ ಚುನಾವಣಾ ವೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿಗಳು, ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಎಂಸಿಸಿ ಮುಖ್ಯಸ್ಥರು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಪ್ರವೇಶಿಸಲು ಅವಕಾಶ ಮಾಡಲಾಗಿದೆ.

ಮತದಾನ ಕೇಂದ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅವರ ಕರ್ತವ್ಯಕ್ಕೆ ಅನುಗುಣವಾಗಿ ಪ್ರವೇಶ ಪತ್ರ ಅಥವಾ ಗುರುತಿನ ಚೀಟಿಗಳನ್ನು ಚುನಾವಣಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ನೀಡಿರುತ್ತಾರೆ. ನಿಯೋಜಿತಗೊಂಡ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗಳು ತಮಗೆ ನೀಡಿರುವ ಪಾಸ್‍ಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ಭದ್ರತಾ ಸಿಬ್ಬಂದಿಗಳು ಕೇಳಿದಾಗ ತಕ್ಷಣ ತೋರಿಸಬೇಕು. ಅನಾವಶ್ಯಕ ಗೊಂದಲ, ವಾದಗಳಿಗೆ ಅವಕಾಶವಿರುವುದಿಲ್ಲ. ಹಾಗೂ ಮತ ಎಣಿಕಾ ಕೇಂದ್ರಕ್ಕೆ ಬರುವವರು ನೀರಿನ ಬಾಟಲ್, ಮೊಬೈಲ್, ಕಡ್ಡಿಪೆಟ್ಟಿಗೆ, ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗಡೆ ತರದಂತೆ ನಿಷೇಧಿಸಲಾಗಿದೆ. ಪ್ರತಿಯೊಬ್ಬರು ಚುನಾವಣಾ ಆಯೋಗದ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಮತ್ತು ಈ ಸಮಯದಲ್ಲಿ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ  ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಕಾನೂನು, ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅವಶ್ಯಕತೆ ಅನುಸಾರವಾಗಿ ಯೋಜನಾ ವರದಿ ತಯಾರಿಸಿ: ಎನ್.ಎಫ್.ಕಟ್ಟೆಗೌಡರ

eNEWS LAND Team

ಹುಬ್ಬಳ್ಳಿ; ವಿಮಲ್ ಗುಟ್ಕಾ ವಿಚಾರಕ್ಕೆ ಕಳಸ್’ಗೆ ಚೂರಿ ಚುಚ್ಚಿ ಕೊಲೆ ಮಾಡಿದ ಗೌಸ್!!

eNewsLand Team

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

eNewsLand Team