27 C
Hubli
ಮಾರ್ಚ್ 4, 2024
eNews Land
ರಾಜ್ಯ ಸಂಸ್ಕೃತಿ

 ಅಂತರಾತ್ಮದ ಚರಿತ್ರೆ ರಾಮಾಯಣ

ಅಂತರಾತ್ಮದ ಚರಿತ್ರೆ ರಾಮಾಯಣ

ಹುಬ್ಬಳ್ಳಿ.ಅ.20: ರಾಮಾಯಣ ಜಗತ್ತಿನ ಸಾಹಿತ್ಯಕ್ಕೆ ಮಹರ್ಷಿ ವಾಲ್ಮೀಕಿ ನೀಡಿದ ಅತ್ಯುತ್ತಮ ಕೊಡುಗೆ. ಭಾರತದ ಬಹುಜನರ ಸಂಸ್ಕೃತಿ ಹಾಗೂ ಜನಜೀವನದ ಅಂತರಾತ್ಮದ ಚರಿತ್ರೆ ರಾಮಾಯಣದಲ್ಲಿದೆ ಎಂದು ಪ್ರಾಚಾರ್ಯೆ ಶರಣಮ್ಮ ಗೊರಬಾಳ ಹೇಳಿದರು.

ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.

ವಾಲ್ಮೀಕಿ ಜೀವನದ ಕುರಿತು ಹಲವು ಸಂಶೋಧನೆಗಳು ನಡೆದಿವೆ. ಆದರೂ ವಾಲ್ಮೀಕಿ ಕುರಿತಾಗಿ ಹೆಚ್ಚಿನ ಮಾಹಿತಿಗಳು‌ ಅಸ್ಪಷ್ಟವಾಗಿವೆ. ರತ್ನಾಕರನೆಂಬ ಬೇಡ ಜನಾಂಗದ ವ್ಯಕ್ತಿ ಮನಃ ಪರಿವರ್ತನೆಯಾಗಿ ರಾಮಾಯಣವನ್ನು ರಚಿಸಿದ ಎಂಬ ಪ್ರತೀತಿಯಿದೆ. ರಾಮಾಯಣ 24 ಸಾವಿರ ಶ್ಲೋಕ, 7 ಖಂಡಗಳ ಬೃಹತ್ ಕಾವ್ಯ. ಮೂಲದಲ್ಲಿ ಮಾನವರೆಲ್ಲಾ ಕಾಡಿನಲ್ಲಿ ಬೇಟೆ ಆಡುತ್ತಾ ಜೀವನ ಸಾಗಿಸಿದವರೆ. ಮನುಕುಲದ ಚರಿತ್ರೆ ಆದಿ ಬೇಡರಿಂದಲೇ ಪ್ರಾರಂಭವಾಗುತ್ತದೆ. ಪುರುಷೋತ್ತಮನಾದ ರಾಮನ ಕುರಿತು ಕೃತಿ ರಚಿಸಿದ ವಾಲ್ಮೀಕಿ ಸಾರ್ವಕಾಲಿಕ ಮೌಲ್ಯಗಳು ಪ್ರತಿಪಾದನೆ ಮಾಡಿದ್ದಾರೆ. ಈ ಮೌಲ್ಯಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ರಾಮಾಯಣದಲ್ಲಿ ಬರುವ ಪಾತ್ರಗಳು ಜೀವನ ನೀತಿಯನ್ನು ಸಾರುತ್ತವೆ. ರಾಮನ ಪಿತೃ ಭಕ್ತಿ, ಪಿತೃವಾಖ್ಯೆ ಪರಿಪಾಲನೆ, ಏಕಪತ್ನಿ ವ್ರತ, ಸೀತೆಯ ಪಾವಿತ್ರ್ಯತೆ, ಲಕ್ಷ್ಮಣ ಹಾಗೂ ಭರತನ ಭ್ರಾತೃ ಪ್ರೇಮ, ಹನುಮಂತನ ಸ್ವಾಮಿ ನಿಷ್ಠೆ, ಉರ್ಮಿಳೆಯ ತ್ಯಾಗ, ಶಬರಿಯ ನಿರೀಕ್ಷೆ, ಕೈಕೆ, ಮಂಥರೆ, ಶೂರ್ಪನಖ, ರಾವಣ, ವಿಭೀಷಣ ಹೀಗೆ ಪ್ರತಿ ಪಾತ್ರಗಳು ಒಳಿತು ಕೆಡಕುಗಳ ಪರಿಚಯ ಮಾಡಿಕೊಡುತ್ತವೆ. ವಾಲ್ಮೀಕಿ ಪುರುಷ ಪಾತ್ರಗಳಷ್ಟೇ‌ ಸ್ತ್ರೀ ಪಾತ್ರಗಳಿಗೂ ಮಹತ್ವ ನೀಡಿದ್ದಾರೆ. ರಾಮಾಯಣದಲ್ಲಿನ ನಿಸರ್ಗ, ಪ್ರಾಣಿಗಳ ವರ್ಣನೆ ಸಹ ಅದ್ಬುತವಾಗಿದೆ. ಸರ್ಕಾರ ಎಸ್.ಟಿ ಪಂಗಡದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಮಾಜದ ಬಾಂಧವರು ಶ್ರಮಿಸಬೇಕು. ವಾಲ್ಮೀಕಿ ಒಂದು ಜಾತಿಗೆ ಅಷ್ಟೇ ಸೀಮಿತವಲ್ಲ ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ

ಕೈಮಗ್, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ‌ ಎಸ್.ಎಸ್.ಎಲ್.ಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಸಂಗಮೇಶ ರುದ್ರಪ್ಪ ನಾಯ್ಕರ್, ಪ್ರಿಯಾಂಕ ಯಲ್ಲಪ್ಪ ವಾಲಿಕಾರ, ಗಣೇಶ್ ಚನ್ನಪ್ಪ ದಿಡ್ಡಿ, ಸಾಯಿಕೀರ್ತಿ ಕುಬಿಹಾಳ, ಸಾಗರ ಯ ವಾಲಿಕಾರ, ನಿಂಗಪ್ಪ ತಳವಾರ, ಅಕ್ಷತಾ ವಾಲಿಕಾರ ಅವರಿಗೆ ಸನ್ಮಾನಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಕುರಿತಾದ ಕರಪತ್ರಗಳನ್ನು ಹಂಚಲಾಯಿತು.

ಈ ಸಂದರ್ಭದಲ್ಲಿ ಸುರಪುರ ಶಾಸಕ ರಾಜುಗೌಡ, ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಈರಣ್ಣ ಜಡಿ, ಪಾಲಿಕೆ ಸದಸ್ಯ ಪ್ರಕಾಶ್ ಕುರಹಟ್ಟಿ,ತಹಶಿಲ್ದಾರರ ಶಶಿಧರ ಮಾಡ್ಯಾಳ, ಪ್ರಕಾಸ್ ನಾಶಿ, ತಾ.ಪಂ.ಇಓ ಗಂಗಾಧರ ಕಂದಕೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ಮುಖಂಡರಾದ, ಗುರುನಾಥ ಉಳ್ಳಿಕಾಶಿ, ಪ್ರೇಮನಾಥ ಚಿಕ್ಕತುಂಬಳ, ರಾಜ್ಯ ಸರ್ಕಾರಿ ನೌಕರರ ಸಂಘದ ಹುಬ್ಬಳ್ಳಿ ಘಟಕದ ಅಧ್ಯಕ್ಷ ಪ್ರಹ್ಲಾದ್ ಗೆಜ್ಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಡಿಕೆ ಶಿವಕುಮಾರ ತಮ್ಮ ಪಕ್ಷ ನೋಡಿಕೊಳ್ಳಲಿ; ಸಿಎಂ ಬೊಮ್ಮಾಯಿ

eNEWS LAND Team

ಬೂತ್ ವಿಜಯ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ

eNewsLand Team

ಹುಬ್ಬಳ್ಳಿ ಈ ಸಂಸ್ಥೆಗೆ ಪ್ರತಿಷ್ಠಿತ ಪ್ರಶಸ್ತಿ..? ಯಾವ್ದು ಗೊತ್ತಾ!!

eNewsLand Team