25.4 C
Hubli
ಏಪ್ರಿಲ್ 26, 2024
eNews Land
ರಾಜಕೀಯ ರಾಜ್ಯ

‘ಮಿಷನ್ 150’ ಸಾಧನೆಗೆ ಬೂತ್ ವಿಜಯ ಅಭಿಯಾನ : ಮಹೇಶ್ ಟೆಂಗಿನಕಾಯಿ

ಇಎನ್ಎಲ್ ಬೆಂಗಳೂರು: ರಾಜ್ಯದ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ‘ಮಿಷನ್ 150’ (150 ಬಿಜೆಪಿ ಶಾಸಕರನ್ನು ಗೆಲ್ಲಿಸುವುದು) ಸಾಧನೆಯಲ್ಲಿ ಬೂತ್ ವಿಜಯ ಅಭಿಯಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಸಮಿತಿಯು ಜನವರಿ 2ರಿಂದ ಜ.12ರವರೆಗೆ ಬೂತ್ ವಿಜಯ ಅಭಿಯಾನವನ್ನು ಹಮ್ಮಿಕೊಂಡಿದೆ. ಪಕ್ಷದ ರಾಷ್ಟ್ರೀಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೂತ್ ವಿಜಯ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ನಾಳೆಯಿಂದ ಪಕ್ಷದ ಎಲ್ಲ 39 ಸಂಘಟನಾತ್ಮಕ ಜಿಲ್ಲೆಗಳು, 312 ಮಂಡಲಗಳಲ್ಲಿ 1,445 ಮಹಾಶಕ್ತಿ ಕೇಂದ್ರ 11,642 ಶಕ್ತಿ ಕೇಂದ್ರಗಳು ಹಾಗೂ 58,186 ಬೂತ್‍ಗಳಲ್ಲಿ ವಿಧ್ಯುಕ್ತವಾಗಿ ಅಭಿಯಾನ ನಡೆಯಲಿದೆ. ಮಂಗಳೂರಿನಿಂದ ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಚಾಲನೆ ನೀಡುತ್ತಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಶಿವಾಜಿನಗರದಲ್ಲಿ ಅಭಿಯಾನದ ತಂಡಕ್ಕೆ ಚಾಲನೆ ನೀಡುತ್ತಾರೆ. ಕೇಂದ್ರದ ಸಚಿವರು, ರಾಜ್ಯದ ಸಚಿವರು, ಪಕ್ಷದ ಶಾಸಕರು, ಜನಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು ಈ ವಿಶೇóಷ ಅಭಿಯಾನದಲ್ಲಿ ಭಾಗವಹಿಸುವರು ಎಂದು ವಿವರ ನೀಡಿದರು.
ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ ಅವರು ಗದಗ ಜಿಲ್ಲೆಯಲ್ಲಿ, ಶೋಭಾ ಕರಂದ್ಲಾಜೆ ಅವರು ಉಡುಪಿ ಜಿಲ್ಲೆಯಲ್ಲಿ ಚಾಲನೆ, ಭಗವಂತ ಖೂಬಾ- ಬೀದರ್, ಎ.ಎನ್.ನಾರಾಯಣಸ್ವಾಮಿ- ಚಿತ್ರದುರ್ಗ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಸಿಎಂಗಳಾದ ಜಗದೀಶ ಶೆಟ್ಟರ್ ಅವರು ಹಾವೇರಿಯಲ್ಲಿ, ಡಿ.ವಿ.ಸದಾನಂದಗೌಡ-ಬೆಂಗಳೂರು ಉತ್ತರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ, ಹಿಂದಿನ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ- ಚಿಕ್ಕೋಡಿ, ಸಚಿವ ಆರ್.ಅಶೋಕ್- ಬೆಂಗಳೂರು ದಕ್ಷಿಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಚಾಲನೆ ನೀಡಲಿದ್ದು, ಎಲ್ಲ ಶಾಸಕರು ವಿಧಾನಸಭಾ ಕ್ಷೇತ್ರದಲ್ಲಿ ಉದ್ಘಾಟನೆ ಮಾಡುತ್ತಾರೆ. ನಮ್ಮ ಶಾಸಕರಿಲ್ಲದ ಕ್ಷೇತ್ರದಲ್ಲಿ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರನ್ನು ಜೋಡಿಸಿದ್ದೇವೆ ಎಂದು ವಿವರಿಸಿದರು.
20 ಲಕ್ಷ ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಕೊಳ್ಳುತ್ತಾರೆ. ‘ಮಿಷನ್ 150’ ಸಾಧಿಸುವ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆ ಎಂದ ಅವರು, ಬೂತ್ ಸಮಿತಿ ಪರಿಶೀಲನೆ, ಪೇಜ್ ಪ್ರಮುಖರ ನಿಯುಕ್ತಿ, ಬೂತ್ ವಾಟ್ಸ್ ಅಪ್ ಗ್ರೂಪ್ ರಚನೆ, ಮನ್ ಕೀ ಬಾತ್ ವೀಕ್ಷಣೆ ಮಾಡಲು ಸುಮಾರು 60 ಸಾವಿರ ಗುಂಪು ರಚನೆ, 50 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಕಾರ್ಯ ನಡೆಯಲಿದೆ ಎಂದರು.
ಅಮಿತ್ ಶಾ ಅವರ ಎರಡು ಕಾರ್ಯಕ್ರಮಗಳು ಕಾರ್ಯಕರ್ತರಲ್ಲಿ ಶಕ್ತಿ -ವಿಶ್ವಾಸ ತುಂಬಿದೆ. ಅಭಿಯಾನದ ಯಶಸ್ಸಿಗೆ ರಾಜ್ಯದ ತಂಡ ಸಂಚಾಲಕರಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇರುತ್ತಾರೆ. ನಾನು ಸಹ ಸಂಚಾಲಕನಾಗಿದ್ದು, ಕೇಶವಪ್ರಸಾದ್, ಹೇಮಲತಾ ನಾಯಕ್, ಅರುಣ್ ಶಹಾಪುರ, ಎಂ.ರಾಜೇಂದ್ರ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ವಿವರಿಸಿದರು. ಪ್ರತಿ ಜಿಲ್ಲೆ, ಮಂಡಲಗಳಲ್ಲೂ ನಿರ್ವಹಣಾ ತಂಡ ರಚಿಸಲಾಗಿದೆ ಎಂದು ತಿಳಿಸಿದರು.
ಪೂರ್ವಸಿದ್ಧತೆಗಾಗಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳ ಜೊತೆ ವೆಬೆಕ್ಸ್ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ, ಮಾಧ್ಯಮ, ವಿವಿಧ ಮೋರ್ಚಾಗಳು ಸೇರಿ ತಂಡಸ್ಪೂರ್ತಿಯಿಂದ ಅಭಿಯಾನ ನಡೆಯುತ್ತಿದೆ ಎಂದರು.
ಜನರು ಸ್ವಯಂಪ್ರೇರಣೆಯಿಂದ ಧ್ವಜ ಹಾರಿಸಲು ಸಿದ್ಧರಿದ್ದಾರೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಸಹಕರಿಸುವ ಜನತೆಯ ಮನೆಯ ಮೇಲೆ ಧ್ವಜ ಹಾರಿಸಲಿದ್ದಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಧ್ವಜ ಹಾರಿಸುತ್ತೇವೆ. ಒತ್ತಾಯ, ಒತ್ತಡದ ಪ್ರಶ್ನೆ ಬರುವುದಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು.
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕೀಯ ಇಲ್ಲ ಎಂದು ಅಮಿತ್ ಶಾ ಅವರು ತಿಳಿಸಿದ್ದಾರೆ. ಅಲ್ಲದೆ ಮುಂದೆಯೂ ಮೈತ್ರಿ ರಾಜಕೀಯ ಇಲ್ಲ ಎಂಬ ನಿಲುವನ್ನೂ ಸ್ಪಷ್ಟಪಡಿಸಿದ್ದಾರೆ. ಅದೇರೀತಿಯಲ್ಲಿ ರಾಜ್ಯ ಬಿಜೆಪಿ ಮುನ್ನಡೆಯಲಿದೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು. ಅಮಿತ್ ಶಾ ಅವರ ಸೂಚನೆಯಂತೆ ಪಕ್ಷ ಮುನ್ನಡೆಯುತ್ತದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಕೇಶವ್ ಪ್ರಸಾದ್, ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ವಿಕಾಸ್ ಕುಮಾರ್ ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Related posts

ಎಚ್‌ಡಿಕೆಗೆ ಕಟೀಲ್ ಟಾಂಗ್

eNEWS LAND Team

ಈಶ್ವರಪ್ಪ ವಿವಾದಾತ್ಮಕ ಹೇಳಿಕೆಗೆ ಪ್ರತಿಭಟನೆ

eNEWS LAND Team

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಸಿಎಂ ಬೊಮ್ಮಾಯಿ

eNEWS LAND Team