24.8 C
Hubli
ಏಪ್ರಿಲ್ 25, 2024
eNews Land
ರಾಜ್ಯ

ಚೆನ್ನವೀರ ಕಣವಿ ಅಂತ್ಯಕ್ರಿಯೆ: ಚೆಂಬೆಳಕಿನ ಕವಿಗೆ ಕನ್ನಡದಲ್ಲಿ ಕವಾಯತಿನ ಮೂಲಕ ಅಂತಿಮ ಗೌರವ

ಇಎನ್ಎಲ್ ವಾರ್ತೆ ಧಾರವಾಡ: ಚೆಂಬೆಳಕಿನಲ್ಲಿ ಲೀನವಾದ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸಂಜೆ ಕೆಲಗೇರಿ ಸಮೀಪದ “ಸೃಷ್ಠಿ” ತೋಟದಲ್ಲಿ ಪೊಲೀಸ್ ಗೌರವದೊಂದಿಗೆ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಗಣ್ಯರು, ಸಾಹಿತಿಗಳು ಅಂತಿಮದರ್ಶನ ಪಡೆದು ಗೌರವ ಸಲ್ಲಿಸಿದರು.

ಗದುಗಿನ ತೋಂಟದ ಡಾ. ಸಿದ್ಧರಾಮ ಸ್ವಾಮಿಗಳ ಸಾನಿಧ್ಯದಲ್ಲಿ ಡಾ.ಕಣವಿ ಅವರ ಪುತ್ರರಾದ ಶಿವಾನಂದ, ಚಂದ್ರಮೌಳಿ, ಪ್ರಿಯದರ್ಶಿ, ಕರುಣಪ್ರಸಾದ ಹಾಗೂ ಪುತ್ರಿ ರಂಜನಾ ಗೋದಿ ತಮ್ಮ ಕುಟುಂಬದ ಸದಸ್ಯರು, ಬಂಧುಗಳೊಂದಿಗೆ ಪುಷ್ಪ ಗುಚ್ಛ ಅರ್ಪಿಸಿದರು. ಸಾರ್ವಜನಿಕರ ದರ್ಶನಕ್ಕಾಗಿ ಕರ್ನಾಟಕ ಕಾಲೇಜು ಮುಖ್ಯ ಕಟ್ಟಡದ ಆವರಣದಲ್ಲಿ ಮಧ್ಯಾಹ್ನ ಡಾ. ಕಣವಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.
ವಿವಿಧ ಮಠಾಧೀಶರು, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕರ್ನಾಟಕ ಲೇಖಕಿಯರ ಸಂಘ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಘಟಕ, ವಿವಿಧ ಶಿಕ್ಷಣ ಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ಸೇರಿದಂತೆ ಡಾ.ಚೆನ್ನವೀರ ಕಣವಿ ಅವರ ಆಪ್ತರು, ಅಭಿಮಾನಿಗಳು, ಶಿಷ್ಯರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ  ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ, ಕವಿವಿ ಕುಲಪತಿ ಡಾ.ಕೆ.ಬಿ.ಗುಡಸಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣತೋಂಟದಾರ್ಯ, ಮನಗುಂಡಿಯ ಬಸವಾನಂದ ಸ್ವಾಮೀಜಿ, ಭೈರನಟ್ಟಿಯ ಶಾಂತವೀರ ಸ್ವಾಮೀಜಿ, ಕರ್ನಾಟಕ ಕಲಾ ಕಾಲೇಜು ಪ್ರಾಚಾರ್ಯ ಡಾ.ಡಿ.ಬಿ.ಕರಡೋಣಿ, ವಿಜ್ಞಾನ ಕಾಲೇಜು ಪ್ರಾಚಾರ್ಯ ಡಾ. ಶಿವಾನಂದ ಚೌಗಲಾ ಸೇರಿದಂತೆ ಅನೇಕರು ಡಾ.ಕಣವಿ ಅವರಿಗೆ ಪುಷ್ಪಗುಚ್ಛ ಇರಿಸಿ ಅಂತಿಮ ನಮನ ಸಲ್ಲಿಸಿದರು.
ಸಂಜೆ ಹೊತ್ತಿಗೆ  ಡಾ.ಕಣವಿ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಕರ್ನಾಟಕ ಕಾಲೇಜು ಆವರಣದಿಂದ ಕೆಲಗೇರಿ ಹತ್ತಿರದಲ್ಲಿರುವ ಅವರ ತೋಟಕ್ಕೆ ಸಾಗಿತು. ಬಸವತತ್ವ  ಹಾಗೂ ವೀರಶೈವ ಲಿಂಗಾಯತ ಪರಂಪರೆಯ ಆಚರಣೆಗಳ ಮೂಲಕ ಅಂತ್ಯಸಂಸ್ಕಾರ  ನಡೆಯಿತು.

ಕನ್ನಡದಲ್ಲಿ ಪೊಲೀಸ್ ಕವಾಯತ ಗೌರವ ಸಲ್ಲಿಕೆ : ನಾಡೋಜ ಡಾ.ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರಕ್ಕೆ ಗೌರವ ರಕ್ಷೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರ ನೇತೃತ್ವದಲ್ಲಿ ನೀಡಲಾಯಿತು. ಕನ್ನಡದಲ್ಲಿ ಕವಾಯತು ಆಜ್ಞೆಗಳನ್ನು ನೀಡಿ ಪೊಲೀಸ್ ಗೌರವ ಸಲ್ಲಿಸಿ, ಗಾಳಿಯಲ್ಲಿ 3 ಸುತ್ತು ಕುಶಾಲತೋಪು ಸಿಡಿಸಿ ಗೌರವ ಅರ್ಪಿಸಲಾಯಿತು.

  ಅಂತ್ಯಕ್ರಿಯೆ ಸ್ಥಳದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅವರು ನುಡಿನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಕುಂ. ವೀರಭದ್ರಪ್ಪ, ಕವಿವಿ ವಿಶ್ರಾಂತ ಕುಲಪತಿ ಪ್ರೊ ಎಚ್.ಬಿ.ವಾಲಿಕಾರ, ರಾಮಕೃಷ್ಣ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕ ಪ್ರೊ. ಎಸ್.ಎಂ.ಶಿವಪ್ರಸಾದ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ, ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

Related posts

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟ

eNEWS LAND Team

ಸಿದ್ದರಾಮಯ್ಯ ತಾವು ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರೆತಿದ್ದಾರೆ; ಬಿಎಸ್ವೈ

eNEWS LAND Team

ರಾಜ್ಯೋತ್ಸವ ಪ್ರಶಸ್ತಿಗೆ 6ಸಾವಿರಕ್ಕೂ ಹೆಚ್ಚು ಅರ್ಜಿ

eNEWS LAND Team