25 C
Hubli
ಮೇ 25, 2024
eNews Land
ರಾಜ್ಯ

ಗಡಿನಾಡಿನಲ್ಲಿ ಕನ್ನಡದ ಕಂಪುನ್ನು ಹರಡಿದವರು ಕಯ್ಯಾರ ಕಿಞ್ಞಣ್ಣ ರೈ: ನಾಡೋಜ.ಡಾ.ಮಹೇಶ ಜೋಶಿ ಬಣ್ಣನೆ

ಇಎನ್ಎಲ್ ಬೆಂಗಳೂರು: ನಾಡಿನಲ್ಲೆಲ್ಲ ಐಕ್ಯಗಾನವನ್ನು ಮೊಳಗಿಸಿದ ಧೀಮಂತ ಕವಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರು ಕನ್ನಡ ನಾಡು-ನುಡಿಗೆ ನೀಡಿದ ಕೊಡುಗೆ ಅಪಾರ, ಜನರನ್ನು ಹುರಿದುಂಬಿಸುವ ಗೀತೆಗಳ ಪರಂಪರೆಯನ್ನೇ ಅವರು ನಿರ್ಮಿಸಿದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ದೊಡ್ಡ ಹೋರಾಟವನ್ನು ಸಂಘಟಿಸಿದ್ದ ಕಯ್ಯಾರರು ಅದು ಕೊನೆಗೂ ಕರ್ನಾಟಕಕ್ಕೆ ಸೇರದಾಗ ‘ಬೆಂಕಿ ಬಿದ್ದಿದೆ ಮನೆಗೆ’ ಎಂಬ ಕವಿತೆ ಬರೆದು ಆತಂಕ ವ್ಯಕ್ತ ಪಡಿಸಿದ್ದರು. ಮುಂದೆ ಕೂಡ ಕಾಸರಗೋಡಿನಲ್ಲಿ ಕನ್ನಡದ ಕಂಪನ್ನು ಉಳಿಸುವಲ್ಲಿ ಅವರು ಮುಖ್ಯ ಪಾತ್ರವಹಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಬಣ್ಣಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ೧೦೮ನೆಯ ಜನ್ಮ ದಿನೋತ್ಸವದಲ್ಲಿ ಮಾತನಾಡುತ್ತಿದ್ದರು.

ಕಯ್ಯಾರರ ಕಾವ್ಯಕ್ಕೆ ವಿಶಾಲ ದೃಷ್ಟಿಕೋನ ಪ್ರಾಪ್ತವಾದದ್ದು ಅವರ ದಟ್ಟ ಜೀವನಾನುಭವ, ಬಹುಭಾಷಿಕ ಸಂವೇದನೆ ಮತ್ತು ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ. ಮಾತೃಭಾಷೆ ತುಳು ಆಗಿದ್ದರೂ ಅವರಿಗೆ ಸಂಸ್ಕೃತ ಮತ್ತು ಕನ್ನಡಗಳಲ್ಲಿ ಪಾಂಡಿತ್ಯವಿತ್ತು. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಈ ಎಲ್ಲಾ ಭಾಷೆಗಳ ಸಾಹಿತ್ಯಗಳಲ್ಲಿ ವಿಹರಿಸಿದ್ದರು ಎಂದು ಹೇಳಿದ ನಾಡೋಜ ಡಾ.ಮಹೇಶ ಜೋಶಿಯವರು ಕಯ್ಯಾರರ ಬದುಕಿನ ಅನುಭವ ಪ್ರಪಂಚಚತುರ್ಮುಖ ಶ್ರೀಮಂತಿಕೆಯುಳ್ಳದ್ದು. ಅವರು ಪತ್ರಕರ್ತರಾಗಿಯೂ, ಸ್ವಾತಂತ್ರ್ಯ ಹೋರಾಟಗಾರರಾಗಿಯೂ, ಶಿಕ್ಷಕರಾಗಿಯೂ, ಕೃಷಿಕರಾಗಿಯೂ ಪಡೆದ ಅನುಭವ ಶ್ರೀಮಂತವಾದದು. ಸುಮಾರು ಹತ್ತು ವರ್ಷಗಳ ಕಾಲ ಮಂಗಳೂರಿನಲ್ಲಿ ಪತ್ರಕರ್ತರಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ, ನಂತರ ಪೆರಡಾಲದ ನವಜೀವನ ಹೈಸ್ಕೂಲಿನಲ್ಲಿ ಅಧ್ಯಾಪಕ ವೃತ್ತಿಯನ್ನು ಸ್ವೀಕರಿಸಿ ಸ್ವಗ್ರಾಮಕ್ಕೆ ಬಂದು ನೆಲೆಸಿದರು. ಆಮೇಲೆ ಅವರ ಸೇವೆ ಗ್ರಾಮ ಸಮಾಜವನ್ನು ಆರ್ಥಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಮಂತಗೊಳಿಸುವತ್ತ, ಅವರು ಪಂಚಾಯತ್ ಅಧ್ಯಕ್ಷರಾಗಿಯೂ ಗ್ರಾಮೋದ್ಧಾರ ಕಾರ್ಯಗಳನ್ನು ಮಾಡಿದ್ದರು. ಕೃಷಿಯಲ್ಲಿಯೂ ತೊಡಗಿಕೊಂಡು ರೈತರೂ ಆಗಿದ್ದರು ಎಂದು ನಾಡೋಜ ಡಾ.ಮಹೇಶ ಜೋಶಿ ಕಯ್ಯಾರರ ಬದುಕಿನ ವಿವಿಧ ಅಯಾಮಗಳನ್ನು ವರ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದ ಕಯ್ಯಾರರು ಮಂಗಳೂರಿನಲ್ಲಿ ನಡೆದ ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ. ತಾವು ದೂರದರ್ಶನದಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿರುವದನ್ನು ನಾಡೋಜ ಡಾ.ಮಹೇಶ ಜೋಶಿ ಸ್ಮರಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಪ್ರೊ.ಎನ್.ಎಸ್.ಶ್ರೀಧರಮೂರ್ತಿಯವರು ಮಾತನಾಡಿ, ಕಯ್ಯಾರರ ಕಾವ್ಯವನ್ನು ನವೋದಯದ ಗುಣವುಳ್ಳ ಕವಿತೆಗಳು, ಕ್ರಾಂತಿಕಾರಿ ಕವಿತೆಗಳು ಮತ್ತು ಅನುಭಾವಿಕ ಕವಿತೆಗಳು ಎಂದು ಮೂರು ಭಾಗದಲ್ಲಿ ವಿಂಗಡಿಸಬಹುದು. ಸಮಾಜದ ಜತೆಗೆ ಸಕ್ರಿಯರಾಗಿ ಬೆರೆತಿದ್ದರೂ ಕಯ್ಯಾರ ಕಿಞ್ಞಣ್ಣ ರೈಗಳು ಮುಖ್ಯವಾಗಿ ಕವಿ. ಕೃಷಿಕುಟುಂಬದ ಅವರು ತುಳು ಮಣ್ಣಿನ ಸತ್ವವನ್ನು, ಸಂಸ್ಕೃತಿಯನ್ನು ಕನ್ನಡ ಕಾವ್ಯಕ್ಕೆ ತಂದವರು ಎಂದು ಬಣ್ಣಿಸಿದರು. ಕಯ್ಯಾರರ ೯೦ನೆಯ ವರ್ಷದ ಸಂದರ್ಭದಲ್ಲಿ ಅವರ ಕುರಿತ ಪುಸ್ತಕವನ್ನು ಸಂಪಾದಿಸುವ ಅದೃಷ್ಟ ನನಗೆ ದೊರಕಿತ್ತು ಎಂದು ಸ್ಮರಿಸಿದ ಅವರು ಕಯ್ಯಾರರ ಒಡನಾಟದ ಹಲವಾರು ಪ್ರಸಂಗಗಳನ್ನು ನೆನೆಪು ಮಾಡಿಕೊಂಡರು. ಅವರ ಕವಿತೆಗಳಲ್ಲಿನ ಕ್ರಾಂತಿಕಾರಿ ಗುಣವನ್ನು ಮೆಚ್ಚಿಕೊಂಡು ಪುಟ್ಟಣ್ಣ ಕಣಗಾಲ್ ಅವರು ತಮ್ಮ ಪಡವಾರಹಳ್ಳಿ ಪಾಂಡವರು ಚಿತ್ರದಲ್ಲಿ ಅವರ ಎರಡು ಕ್ರಾಂತಿಕಾರಿ ಗೀತೆಗಳನ್ನು ಅಳವಡಿಸಿದ ಪ್ರಸಂಗವನ್ನು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.

Related posts

ಹಿಜಾಬ್ V/S ಕೇಸರಿ ಶಾಲು ; ಸಿಎಂ ಸಭೆಯಲ್ಲಿ ಹೇಳಿದ್ದೇನು?

eNEWS LAND Team

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು; ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

eNewsLand Team

7&8ನೇ ಸುತ್ತಿನಲ್ಲೂ ಮಾನೆ ಮುನ್ನಡೆ

eNEWS LAND Team