37 C
Hubli
ಏಪ್ರಿಲ್ 26, 2024
eNews Land
ರಾಜ್ಯ ಸುದ್ದಿ

ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿಸಿದ ಬಸ್ ಚಾಲಕ

ಇಎನ್ಎಲ್ ಹುಬ್ಬಳ್ಳಿ: ಸಮಯ ಪ್ರಜ್ಞೆಯಿಂದ ಭಾರಿ ಅವಘಡವನ್ನು ತಪ್ಪಿಸಿ 50 ಪ್ರಯಾಣಿಕರ ಪ್ರಾಣ ಉಳಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬರನ್ನು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಚಾಲಕ ಹಾಗೂ ನಿರ್ವಾಹಕರನ್ನು ವ್ಯವಸ್ಥಾಪಕ ನಿರ್ದೇಶಕರು ಗೌರವಿಸಿದರು.
ತಮ್ಮ ಕರ್ತವ್ಯ ಪರತೆ ಯಿಂದ ನಿಪ್ಪಾಣಿ ಬಸ್ ಡಿಪೋ ಚಾಲಕ ಗದ್ದೆಪ್ಪ ಮುದಕವಿ ಹಾಗೂ ನಿರ್ವಾಹಕ ರಾಜಪ್ಪ ಆರ್. ಕಮತೆ  ರವರು  ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಸದಭಿಪ್ರಾಯ ಹೆಚ್ಚಿಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ: ದಿನಾಂಕ :14-03-2023ರಂದು ಚಿಕ್ಕೋಡಿ ವಿಭಾಗದ ನಿಪ್ಪಾಣಿ ಘಟಕದ ಕೆಎ 23 ಎಫ್ 1075 ಸಂಖ್ಯೆಯ ಬಸ್ಸು ಕೊಲ್ಲಾಪುರದಿಂದ ಬೆಳಗಾವಿಗೆ ಬರುವಾಗ  ಈ ಘಟನೆ ಸಂಭವಿಸಿದೆ. ಬಸ್ಸು ಕಣಗಲ ಹತ್ತಿರ  ಘಾಟ್ ನಲ್ಲಿ ತಿರುವಿನಲ್ಲಿ  ಇಳಿಯುತ್ತಿರುವಾಗ ಮುಂದೆ ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಕಂಟೈನರ್ ಲಾರಿಯನ್ನು ಅದರ ಚಾಲಕ  ಕೊಲ್ಲಾಪುರದ ಕಡೆಗೆ ಹೋಗಲು ಯಾವುದೇ ಮುನ್ಸೂಚನೆ ನೀಡದೆ ಏಕಾ ಏಕಿ   ಚಾಲನೆ ಮಾಡಿ ಯು ಟರ್ನ್ ತೆಗೆದುಕೊಂಡು ರಸ್ತೆಯ ಬಲಭಾಗಕ್ಕೆ ನುಗ್ಗಿರುತ್ತಾನೆ. ಅದರಿಂದ ರಸ್ತೆಯ ಅರ್ಧ ಭಾಗ ಬ್ಲಾಕ್ ಆಗಿರುತ್ತದೆ. ಆಗ ಬಸ್ಸಿನ ಚಾಲಕನಿಗೆ ಮುಂದಕ್ಕೆ ಹೋಗಲು ದಾರಿ ಇರಲಿಲ್ಲ.

ಚಾಲಕ ತಕ್ಷಣ ಜಾಗೃತನಾಗಿ ತನ್ನ ಬಸ್ಸನ್ನು ನಿಯಂತ್ರಿಸದೆ ನೇರವಾಗಿ ಚಾಲನೆ ಮಾಡಿದ್ದರೆ ಎದುರಿನ ಕಂಟೈನರ್ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯುತ್ತಿತ್ತು. ಡಿಕ್ಕಿಯನ್ನು ತಪ್ಪಿಸಲು ಬಸ್ಸನ್ನು ಬಲ ಭಾಗಕ್ಕೆ ಚಲಿಸಿದ್ದರೆ ಆಳವಾದ ಪ್ರಪಾತಕ್ಕೆ ಬೀಳುತ್ತಿತ್ತು.   ಆಗ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಧೃತಿಗೆಡದೆ ಕ್ಷಣಾರ್ಧದಲ್ಲಿ ಬಸ್ಸಿನ ಚಾಲಕ ಗದ್ದೆಪ್ಪ ಮುದಕವಿ  ಕೂಡಲೇ ಗೇರ್ ಬದಲಾಯಿಸಿ  ಬಸ್ಸಿನ ವೇಗವನ್ನು ತಗ್ಗಿಸಿ ನಿಧಾನವಾಗಿ ರಸ್ತೆಯ ಎಡಬದಿಯಲ್ಲಿದ್ದ ಮಣ್ಣಿನಗುಡ್ಡೆಗೆ ತಾಗಿಸಿ ನಿಲ್ಲಿಸಿದ್ದಾರೆ. ಈ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಸಮಯಪ್ರಜ್ಞೆ ಹಾಗೂ ಜೀವದ ಹಂಗು ತೊರೆದು ಪ್ರಯಾಣಿಕರ ಪ್ರಾಣ ಕಾಪಾಡಿದ ಚಾಲಕ ಹಾಗೂ ಕರ್ತವ್ಯದಲ್ಲಿದ್ದ ನಿರ್ವಾಹಕರನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು, ಸಾರ್ವಜನಿಕರು ಬೆಳಗಾವಿ ಬಸ್ ನಿಲ್ದಾಣದಲ್ಲಿ ಭಾವನಾತ್ಮಕ ಸನ್ಮಾನ ಸಲ್ಲಿಸಿ ಕೃತಜ್ಞತೆ ಅರ್ಪಿಸಿದ್ದಾರೆ. ಚಾಲಕನ ಶ್ಲಾಘನೀಯ ಕಾರ್ಯದ ಬಗ್ಗೆ ಸಾಮಜಿಕ ಜಾಲತಾಣದಲ್ಲಿ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ವಿಜಯಶ್ರೀ ನರಗುಂದ, ಎಚ್.ರಾಮನಗೌಡರ, ಶಶಿಧರ ಕುಂಬಾರ, ದಶರಥ ಕೆಳಗೇರಿ ಮತ್ತಿತರರು ಇದ್ದರು.

Related posts

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

eNEWS LAND Team

ಧಾರವಾಡ: 26ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ

eNewsLand Team

ಅಧಿಕಾರಿಗಳ ನಡೆ, ಶಾಲೆ ಕಡೆ

eNEWS LAND Team