ಇಎನ್ಎಲ್ ಬೆಂಗಳೂರು:
ನಮ್ಮ ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸ್ಪಷ್ಟಪಡಿಸಿದರು.
ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಮುಖ್ಯಮಂತ್ರಿಗಳು ಎಸಿಬಿ ವರದಿ ಸಲ್ಲಿಸಿದ ನಂತರ ಶಿಫಾರಸ್ಸುಗಳನ್ನು ಚಾಚೂತಪ್ಪದೆ ಪಾಲಿಸಲಾಗುವುದು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
‘ಸಾರ್ವಜನಿಕರಿಂದಲೂ ಬಿಡಿಎ ಅಕ್ರಮಗಳ ಬಗ್ಗೆ ದೂರುಗಳು ಬಂದಿದ್ದವು. ಎಸ್.ಆರ್.ವಿಶ್ವನಾಥ ಅವರೂ ಸಹ ಈ ಬಗ್ಗೆ ನನ್ನ ಗಮನ ಸೆಳೆದಿದ್ದರು. ಸಂಬಂಧಪಟ್ಟ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿತ್ತು. ತಪ್ಪಿತಸ್ಥರು ಯಾರೇ ಆಗಿರಲಿ, ಎಷ್ಟೇ ಪ್ರಭಾವಿಗಳಿರಲಿ, ಅಧಿಕಾರಿಗಳಿರಲಿ , ಅವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.
*ಬಿಡಿಎ ಸ್ವಚ್ಛಗೊಳಿಸಬೇಕು*.
ಸಾಮಾನ್ಯ ಜನರಿಗೆ ಅಗತ್ಯವಿರುವ ಸೇವೆಗಳನ್ನು ದೊರಕಿಸುವ ದೃಷ್ಟಿಯಿಂದ ಬಿಡಿಎ ಸ್ವಚ್ಛಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
*ಬೆಳೆಹಾನಿಗೆ ಪರಿಹಾರ*
ಅನಿರೀಕ್ಷಿತ, ಅಕಾಲಿಕವಾಗಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ದಕ್ಷಿಣ ಒಳನಾಡಿನಲ್ಲಿ, ಉತ್ತರ ಹಾಗೂ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕಳೆದ 3 ದಿನಗಳಲ್ಲಿ ಒಳನಾಡಿನಲ್ಲಿ ಹೆಚ್ವಿನ ಮಳೆಯಾಗಿ ಬೆಳೆ ಹಾನಿಯಾಗಿದೆ. ಹಲವಾರು ಸಂಪರ್ಕ ರಸ್ತೆ , ಕೆಲವೆಡೆ ಸಾವುಗಳಾಗಿರುವುದು ಸಮೀಕ್ಷೆಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಜುಲೈ, ಆಗಸ್ಟ್, ಸೆಪ್ಟೆಂಬರ್ ಮಾಹೆಗಳಲ್ಲಿ ಸುಮಾರು 3 ಲಕ್ಷ ರೈತರ ಬೆಳೆ ಹಾನಿಯಾಗಿದ್ದರಿಂದ ಪರಿಹಾರ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಬಾಕಿಯಿದ್ದ 130 ಕೋಟಿ ರೂ.ಗಳನ್ನು ಡಿ.ಬಿ.ಟಿ ಮೂಲಕ ವಿತರಿಸಲು ಸೂಚಿಸಲಾಗಿದೆ ಎಂದರು.
ಮೊನ್ನೆ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವೀಡಿಯೊ ಸಂವಾದದಲ್ಲಿ ಸಮೀಕ್ಷೆಯ ವರದಿಯನ್ನು ಕೂಡಲೇ ಸಲ್ಲಿಸಲು ಸೂಚಿಸಲಾಗಿದೆ. ನಿರಂತರ ಮಳೆಯಿಂದಾಗಿ ಸಮೀಕ್ಷೆ ನಡೆಸುವುದೂ ಕಷ್ಟವಾಗಿದೆ. ಮಳೆ ತಗ್ಗಿರುವ ಪ್ರದೇಶಗಳಲ್ಲಿ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲು ಸೂಚಿಸಿದ್ದು, ಈಗಾಗಲೇ ಕೆಲವೆಡೆ ಸಮೀಕ್ಷೆಗಳು ಪ್ರಾರಂಭವಾಗಿದೆ. ಪರಿಹಾರ ಪೋರ್ಟಲ್ ನಲ್ಲಿ ಮಾಹಿತಿ ಅಪ್ ಲೋಡ್ ಆಗುತ್ತಿದೆ. ಇಂದು ಸಂಜೆ ವರದಿಗಳನ್ನು ಪುನರ್ ಪರಿಶೀಲಿಸಿ, ನೆರವು ನೀಡುವ ಬಗ್ಗೆ ಹಿರಿಯ ಅಧಿಕಾಗಳೊಂದಿಗೆ ಚರ್ಚೆ ಮಾಡಿ ಪರಿಹಾರ ಘೋಷಣೆ ಮಾಡಲಾಗುವುದು ಎಂದರು.
ಹಲವಾರು ಸಚಿವರು ಆಯಾ ಜಿಲ್ಲೆಗಳಲ್ಲಿ ಇದ್ದು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿದೆ. ಈ ಬಗ್ಗೆ ಆಯೋಗಕ್ಕೆ ಪತ್ರವನ್ನು ಬರೆಯಲಾಗುತ್ತಿದೆ ಎಂದರು.
*ನಗರ ಪ್ರದಕ್ಷಿಣೆ*
ನಗರ ಪ್ರದಕ್ಷಿಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಹೆಚ್.ಎಸ್.ಆರ್ ಬಡಾವಣೆ, ರಾಜರಾಜೇಶ್ವರಿ ನಗರ, ಮಡಿವಾಳ ಕೋರಮಂಗಲಗಳಿಗೆ ಈಗಾಗಲೇ ಭೇಟಿ ನೀಡಿದ್ದು, ಬೆಂಗಳೂರಿನ ಬಗ್ಗೆ ಖಂಡಿತವಾಗಿ ಸರ್ಕಾರಕ್ಕೆ ಕಾಳಜಿ ಇದೆ. ಮಳೆ ನಿಂತ ಕೂಡಲೇ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಸೂಚನೆ ನೀಡಿದೆ ಎಂದರು.
ಸಿಎಂ ಆಡಿಯೋ ಕೇಳಿ