26.4 C
Hubli
ಏಪ್ರಿಲ್ 18, 2024
eNews Land
ರಾಜ್ಯ

ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಸಿಎಂ ಬೊಮ್ಮಾಯಿ ಆಹ್ವಾನ

ಬೆಂಗಳೂರು ಟೆಕ್ ಸಮ್ಮಿಟ್ ಉದ್ಘಾಟನಾ ಸಮಾರಂಭ

ಇಎನ್ಎಲ್  ಬೆಂಗಳೂರು:

 

ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿದೆ. ಆದ್ದರಿಂದ ರಾಜ್ಯದಲ್ಲಿ ನಾವಿನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ಭಾಗೀದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಕ್ತವಾಗಿ ಕರೆ ನೀಡಿದರು.

ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಇಂದು ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನಾಯಕರಿದ್ದಾರೆ. ಕಿರಣ್ ಮಜುಂದಾರ್ ಷಾ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಪ್ರತಿಭಾವಂತರಿದ್ದಾರೆ. ಅಂತರರಾಷ್ಟ್ರೀಯ ಖ್ಯಾತಿಯುಳ್ಳ 300 ಕ್ಕೂ ಹೆಚ್ಚು ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಏರೋಸ್ಪೇಸ್, ರಕ್ಷಣಾ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ,ಸೆಮಿ ಕಂಡಕ್ಟರ್, ನವೀಕರಿಸಬಹುದಾದ ಇಂಧನ, ಐ.ಟಿ.ಬಿ.ಟಿ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

*ಎಲ್ಲರಿಗೂ ತಂತ್ರಜ್ಞಾನ*

ಬೆಂಗಳೂರು ಟೆಕ್ ಸಮ್ಮಿಟ್ ಹಿಂದಿನಿಂದಲೂ ಯಶಸ್ವೀ ಸಮಾವೇಶವಾಗಿದ್ದು, ಈ ಬಾರಿಯ ಸಮಾವೇಶ ಇನ್ನಷ್ಟು ಫಲಪ್ರದವಾಗಬೇಕು. ತಂತ್ರಜ್ಞಾನದ ಕ್ಷೇತ್ರದ ಮುನ್ನಡೆಯಲ್ಲಿ, ತಂತ್ರಜ್ಞಾನವನ್ನು ಪ್ರತಿಯೊಬ್ಬರಿಗೂ ಹಾಗೂ ಸಂಪೂರ್ಣ ವ್ಯವಸ್ಥೆಗೆ ತಲುಪಿಸುವಲ್ಲಿ ಈ ಸಮಾವೇಶದಿಂದ ನಿಖರ ಹಾಗೂ ಜವಾಬ್ದಾರಿಯುತ ಕೊಡುಗೆ ದೊರೆಯುವುದು ಎಂಬ ಆಶಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಎಲ್ಲ ನಾವೀನ್ಯತೆದಾರರು ತಮ್ಮ ಬುದ್ಧಿಶಕ್ತಿಯನ್ನು ಪ್ರದರ್ಶಿಸಲು ಅಗತ್ಯವಿರುವ ವಾತಾವರಣವನ್ನು ಕರ್ನಾಟಕ ಹೊಂದಿದೆ. ವಲಯ ನಿರ್ದಿಷ್ಟ, ಪ್ರಗತಿಪರ ನೀತಿಗಳು, ವಿವಿಧ ಕ್ಷೇತ್ರಗಳ ಅಭ್ಯುದಯಕ್ಕೆ ದಾರ್ಶನಿಕ ತಂಡಗಳು, ವಿವಿಧ ಕ್ಷೇತ್ರಗಳ ನಾಯಕರ ಬೆಂಬಲ ಕರ್ನಾಟಕದಲ್ಲಿದೆ. ಇದರಿಂದಾಗಿ ಕರ್ನಾಟಕವು ಅತ್ಯಂತ ಶ್ರೀಮಂತ, ಉನ್ನತ ಚಿಂತನೆಯ ನಾಯಕತ್ವ, ಪ್ರತಿಭಾವಂತ ಮತ್ತು ಕುಶಲ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ಬೊಮ್ಮಾಯಿ ಅವರು ತಿಳಿಸಿದರು.

ಯಶಸ್ಸು ಸಾಧನೆಯ ಭಾಗವಾಗಿದ್ದು, ದೇಶ ಹಾಗೂ ವಿಶ್ವದ ಏಳಿಗೆಗೆ ಹಾಗೂ ಅಂತಿಮವಾಗಿ ಮನುಕುಲದ ಒಳಿತಿಗೆ ಕಾರಣವಾಗಬಲ್ಲದು. ಎಲ್ಲ ದೇಶಗಳ ಪ್ರತಿನಿಧಿಗಳು ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹೂಡಿಕೆ ಮಾಡಿ, ಯಶಸ್ಸು ಗಳಿಸಿ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

*ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕವೇ ಭವಿಷ್ಯ*

ನಾವೀನ್ಯತೆ ಸರಸ್ವತಿಯಂತೆ. ಬೆಂಗಳೂರು ಸರಸ್ವತಿಯ ವಾಹನ ಹಂಸದಂತೆ. ಹಂಸ ಭಾರಿ ಗಾತ್ರ, ತೂಕದ ಪಕ್ಷಿಯಾಗಿದ್ದರೂ, ಅತಿ ಎತ್ತರಕ್ಕೆ ಏರಬಲ್ಲ ಪಕ್ಷಿಯಾಗಿದೆ. ಅಂತೆಯೇ ಬೆಂಗಳಳೂರು ನಾವಿನ್ಯತೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
ಪ್ರಧಾನಮಂತ್ರಿಗಳ ಆತ್ಮನಿರ್ಭರ್ ಕಾರ್ಯಕ್ರಮವನ್ನು ಅಕ್ಷರಶಃ ನಿಜ ಮಾಡಲು ಕರ್ನಾಟಕ ಸಿದ್ಧವಾಗಿದೆ ಎಂದರು. ಪ್ರಧಾನಿಯವರು ಸದಾ ದೇಶದ ಭವಿಷ್ಯದ ಕುರಿತು ಚಿಂತನೆ ನಡೆಸುತ್ತಿದ್ದು, ನವಕರ್ನಾಟಕದಿಂದ ನವಭಾರತ ನಿರ್ಮಾಣ ನಮ್ಮ ಧ್ಯೇಯವಾಗಿದೆ ಎಂದರು.

*ಮಾನವನ ಬುದ್ಧಿಶಕ್ತಿಯನ್ನು ಗುರುತಿಸಿ, ಗೌರವಿಸಿ*

ವಿಶ್ವ ನಾಗರಿಕತೆಯ ಪರಿಕಲ್ಪನೆ ಇಂದಿನ ಮಂತ್ರ. ಮನುಷ್ಯನ ವಿಕಾಸಗೊಂಡಂತೆ, ತಂತ್ರಜ್ಞಾನವೂ ವಿಕಾಸಗೊಂಡಿವೆ.ಮಾನವನ ಮೆದುಳಿನ ಶಕ್ತಿಯಿಂದ ಮನುಕುಲದ ಚರಿತ್ರೆಯಲ್ಲಿ ಅದ್ಭುತ ನಾವೀನ್ಯತೆಯನ್ನು ಸಾಧಿಸಲಾಗಿದೆ. ತಾಂತ್ರಿಕತೆಯಲ್ಲಿನ ನಾವೀನ್ಯತೆಗಳನ್ನು ಸಂಸ್ಥೆಗಳಿಗಿಂತಲೂ ಕೆಲವೇ ವ್ಯಕ್ತಿಗಳು ಹೆಚ್ಚಾಗಿ ಮಾಡಿದ್ದಾರೆ. ಆದ್ದರಿಂದ ಮಾನವನ ಬುದ್ಧಿಶಕ್ತಿಯನ್ನು ಗುರುತಿಸಿ, ಗೌರವಿಸಿ, ಸನ್ಮಾನಿಸಬೇಕು ಎಂದರು.
ಕಾರ್ಯಕ್ರಮವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಉದ್ಘಾಟಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ,ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐ.ಟಿ.ಬಿ.ಟಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು ಭಾಗವಹಿಸಿದ್ದರು.

Related posts

ವಿಪ ಕದನ; ಸಂತೆ, ಜಾತ್ರೆ, ಉತ್ಸವ ನಿಷೇಧಿಸಿದ ಜಿಲ್ಲಾಧಿಕಾರಿ ಹೆಗಡೆ

eNewsLand Team

ಬಿಡಿಎ ಭ್ರಷ್ಟಾಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ: ಸಿಎಂ

eNewsLand Team

ಉತ್ತಮ ಬೆಂಗಳೂರು ಹಾಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ ಬೊಮ್ಮಾಯಿ

eNewsLand Team