ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ
ದುಬೈ:
ಗೆಲವಿನೊಂದಿಗೆ ವಿಶ್ವ ಚುಟುಕು ಸಮರದಿಂದ ಹೊರಬಿದ್ದ ಭಾರತ
ಸೋಮವಾರ ನಮೀಬಿಯಾ ವಿರುದ್ಧ ಒಂಬತ್ತು ವಿಕೆಟ್ ಅಂತರದ ಗೆಲುವು ದಾಖಲಿಸಿದ ಭಾರತ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಬಂದಿದೆ. ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಹಾಡಿದರೆ, ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಅರುಣ್ ಭರತ್ ಹಾಗೂ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಕೂಡ ತಮ್ಮ ಕೊನೆಯ ಪಂದ್ಯದ ಜವಾಬ್ದಾರಿ ನಿರ್ವಹಿಸಿದರು.
ನಾಕ್‌ಔಟ್ ಹಂತ ಪ್ರವೇಶಿಸುವಲ್ಲಿ ವಿಫಲವಾದ ಭಾರತ ತಂಡವು ವಿಶ್ವಕಪ್ ಪರೇಡ್ ಮುಗಿಸಿದೆ. ಮೊದಲು ಪಾಕಿಸ್ತಾನ ಹಾಗೂ ನಂತರ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಭಾರತ ಸತತ ಮೂರನೇ ಗೆಲುವು ಸಾಧಿಸಿದರೂ ಅಂಕ ಪಟ್ಟಿಯಲ್ಲಿ ಅಗತ್ಯ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ.
ಇನ್ನು, ಟಾಸ್ ಗೆದ್ದು ಫೀಲ್ಡಿಂಗ್ ಆಯ್ದ ಭಾರತ ನಮೀಬಿಯಾವನ್ನು 132 ರನ್‌ಗೆ ಕಟ್ಟಿಹಾಕಿತು. ರವೀಂದ್ರ ಜಡೇಜ (16ಕ್ಕೆ 3) ಹಾಗೂ ಆರ್. ಅಶ್ವಿನ್ (20ಕ್ಕೆ 3) ಸ್ಪಿನ್ ಮೋಡಿಗೆ ಅನನುಭವಿ ತಂಡ ತತ್ತರಿಸಿತು.
ಬಳಿಕ ಗುರಿ ಬೆನ್ನತ್ತಿದ ಭಾರತದ ಪರ ರೋಹಿತ್ ಶರ್ಮಾ (56) ಹಾಗೂ ಕೆ.ಎಲ್. ರಾಹುಲ್ (54*) ಆಕರ್ಷಕ ಅರ್ಧಶತಕ ಸಿಡಿಸಿದರು. 15.2 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.