ಚುಟುಕು ಸರಣಿಲಿ ಭಾರತ 3-0 ಪಾರಮ್ಯ | ಕ್ಯಾಪ್ಟನ್ ರೋಹಿತ್- ಕೋಚ್ ರಾಹುಲ್ ಜೋಡಿ ಕಮಾಲ್ | 3 ವಿಕೆಟ್ ಕಿತ್ತು ಗಮನ ಸೆಳೆದ ಅಕ್ಸರ್ ಪಟೇಲ್
ಇಎನ್ಎಲ್ ಸ್ಪೋರ್ಟ್ಸ್ ಡೆಸ್ಕ್
ಕೋಲ್ಕತ್ತ :
ಎರಡು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾದ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಭಾರತವು ನ್ಯೂಜಿಲೆಂಡ್ ವಿರುದ್ಧ 73 ರನ್ನುಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಚುಟುಕು ಸರಣಿಯಲ್ಲಿ 3-0 ಅಂತರದ ಪಾರಮ್ಯ ಮೆರೆಯಿತು.
ಟಾಸ್ ಗೆದ್ದು ವೈಟ್ ವಾಶ್ ಗುರಿಯೊಂದಿಗೆ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್ ಗಳಿಸಿತು. ರನ್ ಚೇಸ್ ಮಾಡುವಲ್ಲಿ ಎಡವಿದ ಕಿವೀಸ್ ಬಳಗ 17.2 ಓವರ್‌ಗಳಲ್ಲಿ 111 ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಕಳೆದುಕೊಂಡಿತು. ಮೂರು ಕ್ಷೇತ್ರದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ಭಾರತ ತಾನು ಚಾಂಪಿಯನ್ ಎಂಬುದನ್ನು ಸಾರಿತು.
ಆರಂಭಿಕರಾಗಿ ಬಂದ ರೋಹಿತ್ ಶರ್ಮಾ 31 ಎಸೆತಗಳಲ್ಲಿ 56 ರನ್, ಜತೆಗಾರ ಇಶಾನ್ ಕಿಶನ್ 21 ಎಸೆತಗಳಲ್ಲಿ 29 ರನ್ ಕಲೆ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 4 ಎಸೆತ ಎದುರಿಸಿ ಶೂನ್ಯ ಸಂಪಾದಿಸಿ ಪೆವಿಲಿಯನ್ ಸೇರಿಕೊಂಡರು.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 4 ರನ್ ಗಳಿಸಿ ಔಟಾದರೆ, ಬಳಿಕ ಶ್ರೇಯಸ್ ಅಯ್ಯರ್ 25, ವೆಂಕಟೇಶ ಅಯ್ಯರ್ 20, ಹರ್ಷಲ್ ಪಟೇಲ್ 18 ರನ್ ಬಾರಿಸಿದರು.
ಅಜೇಯರಾಗಿ ಉಳಿದ ಅಕ್ಷರ್ ಪಟೇಲ್ ಅಜೇಯ 2 ರನ್ ಮತ್ತು ಆರ್ಭಟಿಸಿದ ದೀಪಕ್ ಚಹರ್ 8 ಎಸೆತದಲ್ಲಿ ಅಜೇಯ 21 ರನ್ ಕೊಡುಗೆ ನೀಡಿದರು.
ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ 4 ಓವರಿನಲ್ಲಿ 27ರನ್ ಕೊಟ್ಟು 3 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಮತ್ತು ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.
ಕೊನೆ ಪಂದ್ಯ ಗೆಲ್ಲುವ ಒತ್ತಡಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ ಪರ ಆರಂಭಿಕ ಮಾರ್ಟಿನ್ ಗಪ್ಟಿಲ್ 36 ಎಸೆತಗಳಲ್ಲಿ 51 ರನ್ ಗಳಿಸಿದ್ದೆ ಉತ್ತಮ ಕೊಡುಗೆ ಎನ್ನಿಸಿಕೊಂಡಿತು. ಡೇರಿಲ್ ಮಿಚೆಲ್ 5, ಮಾರ್ಕ್ ಚಾಂಪ್ ಮನ್ 0, ಗ್ಲೆನ್ ಫಿಲಿಪ್ಸ್ 0, ಟಿಮ್ ಸೈಫರ್ಟ್ 17, ಜೇಮ್ಸ್ ನೀಶಮ್ 3, ಮಿಚೆಲ್ ಸ್ಯಾಂಟ್ನರ್ 2, ಆ್ಯಡಂ ಮಿಲ್ನೆ 7, ಇಶ್ ಸೋಧಿ 9, ಲಾಕಿ ಫರ್ಗ್ಯೂಸನ್ 14 ಮತ್ತು ಟ್ರೆಂಟ್ ಬೌಲ್ಟ್ ಅಜೇಯ 2 ರನ್ ಕಲೆಹಾಕಿದರು.
ಭಾರತದ ಬೌಲರ್ ವಲಯದಲ್ಲಿ ಅಕ್ಷರ್ ಪಟೇಲ್ ಕೇವಲ 9 ರನ್ ನೀಡಿ 3 ವಿಕೆಟ್ ಕಿತ್ತು ಗಮನ ಸೆಳೆದರು. ಹರ್ಷಲ್ ಪಟೇಲ್ 2 ಹಾಗೂ ದೀಪಕ್ ಚಹರ್, ಯುಜುವೇದ್ರ ಚಹಲ್ ಮತ್ತು ವೆಂಕಟೇಶ್ ಐಯ್ಯರ್ ತಲಾ 1 ವಿಕೆಟ್ ಕಬಳಿಸಿದರು.
ಒಟ್ಟಾರೆ ನೂತನ ಕೋಚ್ ರಾಹುಲ್ ದ್ರಾವಿಡ್, ನೂತನ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಮೊದಲ ಸವಾಲನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ವಿಶ್ವಕಪ್ ಹೀನಾಯ ಸೋಲಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ.