ಮೊದಲ ವಿಕೆಟಿಗೆ 120 ರನ್ ಪೇರಿಸಿದ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ಜೋಡಿ
ಚೊಚ್ಚಲ ಪಂದ್ಯದಲ್ಲಿ 2 ವಿಕೆಟ್ ಪಡೆದ ಹರ್ಷಲ್ ಪಂದ್ಯ ಪುರುಷೋತ್ತಮ
ಮೊದಲ ಟಾಸ್ಕ್ ಯಶಸ್ವಿಯಾಗಿ ಪೂರೈಸಿದ ರಾಹುಲ್-ರೋಹಿತ್ ಜೋಡಿ
ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ
ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ದ್ವಿತೀಯ ಪಂದ್ಯವನ್ನು 7 ವಿಕೆಟ್ ಅಂತರದಲ್ಲಿ ಸುಲಭವಾಗಿ ಗೆದ್ದ ಭಾರತ ಟಿ-20 ಸರಣಿ ಕೈವಶ ಮಾಡಿಕೊಂಡಿದೆ. ಈ ಮೂಲಕ ರಾಹುಲ್ ದ್ರಾವಿಡ್ ಮಾರ್ಗದರ್ಶನದ ರೋಹಿತ್ ಶರ್ಮಾ ನೇತೃತ್ವದ ತಂಡ ಮೊದಲ ಟಾಸ್ಕನ್ನು ಯಶಸ್ವಿಯಾಗಿ ಪೂರೈಸಿದೆ.
ನ್ಯೂಜಿಲೆಂಡ್ ನೀಡಿದ 153 ರನ್‌ಗಳ ಗುರಿ ಬೆನ್ನಟ್ಟಿದ ಆರಂಭಿಕ ಜೋಡಿ ಕ್ಯಾಪ್ಟನ್ ರೋಹಿತ್ ಶರ್ಮಾ 25ನೇ ಅರ್ಧಶತಕ (55/36) ಮತ್ತು ವೈಸ್ ಕ್ಯಾಪ್ಟನ್ ಕೆ.ಎಲ್. ರಾಹುಲ್ (65/49) ಟಿ20 ಕ್ರಿಕೆಟ್‌ನಲ್ಲಿ 4ನೇ ಶತಕದ ಜೊತೆಯಾಟವಾಡಿತು.
ಇವರಿಬ್ಬರೂ ಪೆವಿಲಿಯನ್ ಸೇರಿದ ಬಳಿಕ ಕ್ರೀಸಿಗೆ ಬಂದ ಸೂರ್ಯಕುಮಾರ್ ಕೇವಲ 1ರನ್ ಗೆ ವಿಕೆಟ್ ಒಪ್ಪಿಸಿದರು. ಜೈಪುರ ಪಂದ್ಯದಲ್ಲಿ ಒಂದು ಫೋರ್ ಮೂಲಕ ಗಮನಸೆಳೆದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮೂರನೇ ಕ್ರಮಾಂಕದಲ್ಲಿ ಬಂದು 12 ರನ್ ಗಳಿಸಿದರು. ರಿಷಭ್ ಪಂತ್ ಎರಡು ಸತತ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಭಾರತ 16 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ ಓಪನರ್ ಮಾರ್ಟಿನ್ ಗಪ್ಟಿಲ್ ಮತ್ತು ಡೇರಿಲ್ ಮಿಚೆಲ್ ಸ್ಫೋಟಕ ಹೊಡೆತದ ಮೂಲಕ ಭಾರತೀಯ ಬೌಲರ್ ಗಳನ್ನು ಕಾಡಿದರು.
15 ಎಸೆತಗಳಲ್ಲಿ 31 ರನ್ ಸಿಡಿಸಿ ಆಡುತ್ತಿದ್ದ ಗಪ್ಟಿಲ್ ದೀಪಕ್ ಚಹಾರ್ ಬೌಲಿಂಗ್ ವೇಳೆ ರಿಷಭ್ ಪಂತ್‌ಗೆ ಕ್ಯಾಚಿತ್ತು ಮೈದಾನ ತೊರೆದರು. ಮಾರ್ಕ್ ಚಾಪ್ಮನ್ (21) ಅಕ್ಷರ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರೆ, ಡೇರಿಲ್ ಮಿಚೆಲ್ (31) ಅವರನ್ನು ಭಾರತದ ಪರ ಚೊಚ್ಚಲ ಟಿ20 ಪಂದ್ಯವನ್ನಾಡಿದ ಹರ್ಷಲ್ ಪಟೇಲ್ ಬಲಿ ಹಾಕಿದರು.
ಮಧ್ಯಂತರ ಓವರ್ ನಲ್ಲಿ ಟಿಮ್ ಸೀಫರ್ಟ್ (13) ಅವರ ವಿಕೆಟ್‌ನ್ನು ರವಿಚಂದ್ರನ್ ಅಶ್ವಿನ್ ಕಬಳಿಸಿದರು. ಗ್ಲೆನ್ ಫಿಲಿಪ್ಸ್ ವಿಕೆಟ್ ಪಡೆವ ಮೂಲಕ ಹರ್ಷಲ್ ಪಟೇಲ್ ತಮ್ಮ ಎರಡನೇ ವಿಕೆಟ್ ಪಡೆದು ಸಂಭ್ರಮಿಸಿದರು.
ಇನ್ನು ಜೇಮ್ಸ್ ನೀಶಮ್ (3/12) ಆಟ ಕೂಡ ನಡೆಯದೆ ಭುವನೇಶ್ವರ ಕುಮಾರ್ ದಾಳಿಗೆ ತುತ್ತಾದರು. ಮಿಚೆಲ್ ಸ್ಯಾಂಟ್ನರ್ (8) ಮತ್ತು ಆ್ಯಡಮ್ ಮಿಲ್ನೆ (5) ರನ್ ಗಳಿಸಲು ಮಾತ್ರ ಶಕ್ತರಾದರು.
ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153ರನ್ ಕಲೆಹಾಕಿದ ನ್ಯೂಜಿಲೆಂಡ್ ಟೀಂ ಇಂಡಿಯಾಗೆ 154ರನ್‌ಗಳ ಗುರಿ ನೀಡಿತು. ಭಾರತದ ಪರ ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದರೆ, ಭುವಿ, ದೀಪಕ್, ಅಕ್ಷರ್ ಪಟೇಲ್, ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಚೊಚ್ಚಲ ಪಂದ್ಯದಲ್ಲೆ ನಾಲ್ಕು ಓವರ್‌ನಲ್ಲಿ 25 ರನ್ ನೀಡಿ 2 ವಿಕೆಟ್ ಪಡೆದ ಹರ್ಷಲ್ ಪಟೇಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.