24 C
Hubli
ಸೆಪ್ಟೆಂಬರ್ 27, 2023
eNews Land
ಕ್ರೀಡೆ

ಐಎಸ್ಎಲ್ : ಬೆಂಗಳೂರು ಎಫ್‌ಸಿ ಶುಭಾರಂಭ!

4-2 ಗೋಲುಗಳಿಂದ ನಾರ್ತ್‌ಈಸ್ಟ್ ಯುನೈಟೆಡ್ ಮಣಿಸಿದ ಬಿಎಫ್‌ಸಿ

ಮೊದಲಾರ್ಧದಲ್ಲಿ ಐದು ಗೋಲ್ | ತಮ್ಮದೇ ನೆಟ್ ನೊಳಕ್ಕೆ ಚೆಂಡು ಒದ್ದ ಮಶೂರ್ ಶೆರೀಫ್!

ಇಎನ್ಎಲ್ ಗೋವಾ

ನೂತನ ಕೋಚ್ ಕೋಚ್ ಮಾರ್ಕೋ ಪೆಜೈಯುಲಿ ಮಾರ್ಗದರ್ಶನದಲ್ಲಿ ಹೊಸ ಉತ್ಸಾಹದೊಂದಿಗೆ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯ 8ನೇ ಆವೃತ್ತಿಯ ಮೊದಲ ಪಂದ್ಯವಾಡಿದ ಬೆಂಗಳೂರು ಎಫ್‌ಸಿ 4-2 ಗೋಲುಗಳ ಅಂತರದಿಂದ ನಾರ್ತ್‌ಈಸ್ಟ್ ಯುನೈಟೆಡ್ ಸೋಲಿಸಿ ಶುಭಾರಂಭ ಮಾಡಿದೆ.

ಬಾಂಬೋಲಿಮ್‌ನ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಶನಿವಾರ ಮಳೆಯ ನಡುವೆ ನಡೆದ ಪಂದ್ಯದಲ್ಲಿ ಆರು ಆಟಗಾರರು ಗೋಲ್ ಗಳಿಸಿದ್ದು ವಿಶೇಷವಾಗಿತ್ತು.

ಪಂದ್ಯ ಆರಂಭವಾದ 14ನೇ ನಿಮಿಷದಲ್ಲೇ ಫಾರ್ವರ್ಡರ್ ಉದಂತ್ ಸಿಂಗ್ ನೀಡಿದ ಚೆಂಡನ್ನು ಕ್ಲಿಟನ್ ಸಿಲ್ವಾ ಯಾವುದೇ ತಪ್ಪು ಮಾಡದೇ ಸೀದಾ‌ ನೆಟ್ ಒಳಗೆ ‌ಸೇರಿಸುವಲ್ಲಿ‌ ಯಶಸ್ವಿಯಾದರು.

ಮುಂದಿನ ಮೂರು ನಿಮಿಷದಲ್ಲಿ ಇದಕ್ಕೆ ಪ್ರತಿಯಾಗಿ ಎನ್ಇಯು ಪರ ಸುಹೈರ್ ವಡಕ್ಕೆಪೀಡಿಕಾ ಪಾಸ್ ಪಡೆದ
ದೇಶೋರ್ನ್ ಬ್ರೌನ್ (17′) ಗೋಲ್ ಬಾರಿಸಿ ಅಂಕ ಸಮಗೊಳಿಸಿದರು. ಇದಾದ ಕೆಲ ಹೊತ್ತಲ್ಲೆ ನಾರ್ತ್ ಈಸ್ಟ್ ತಂಡದ ಮಶೂರ್ ಶೆರೀಫ್ (22′) ದುರದೃಷ್ಟವಶಾತ್ ತಮ್ಮದೇ ನೆಟ್ ಒಳಗೆ ಚೆಂಡನ್ನು ನುಗ್ಗಿಸಿದ್ದು ಪ್ರಮಾದವಾಯಿತು.

ಆದಾಗ್ಯೂ ಮೆಥಾಯಿಸ್ ಕೋರ್ಯರ್ (25′) ಬೆಂಗಳೂರು ಎಫ್‌ಸಿ ಗೋಲ್ ಕೀಪರ್ ಗುರುಪ್ರೀತ್ ಸಂಧು ತಪ್ಪಿಸಿ ಗೋಲು ಪಡೆದರು. ಆ ಮೂಲಕ ಸಹ ಆಟಗಾರನಿಂದಾದ ತಪ್ಪನ್ನು ಬ್ಯಾಲೆನ್ಸ್ ಮಾಡಿದರು.

ಆದರೆ, ಕ್ಲಿಟನ್ ಸಿಲ್ವಾ ಅಸಿಸ್ಟ್ ಮೂಲಕ ಬಂದ ಚೆಂಡನ್ನು ಜಯೇಶ್ ರಾಣೆ (42′) ಮಿಂಚಿನಂತೆ ಗೋಲ್ ಆಗಿ ಪರಿವರ್ತಿಸಿದರು. ಈ ಮೂಲಕ ಮೊದಲಾರ್ಧದಲ್ಲಿ ಬೆಂಗಳೂರು ಎಫ್‌ಸಿ ಮುನ್ನಡೆ ಕಾಯ್ದುಕೊಳ್ಳಲು ಕಾರಣರಾದರು. ಒಟ್ಟಾರೆ, ಫಸ್ಟ್ ಹಾಫ್ ವೇಳೆಗೆ‌ ಐದು ಗೋಲುಗಳನ್ನು ಪ್ರೇಕ್ಷಕ ಕಾಣುವಂತಾಯಿತು.

ದ್ವಿತೀಯಾರ್ಧದಲ್ಲಿ ಬೆಂಗಳೂರು ತಂಡದ ಆಟಗಾರರು ಪಂದ್ಯದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದಂತೆ ಕಂಡುಬಂತು. ನಾರ್ತ್ ಈಸ್ಟ್ ಪರ ಯಾವುದೇ ಉತ್ತಮ ಅಟ್ಯಾಕ್ ಕಾಣಲು ಸಾಧ್ಯವಾಗಲಿಲ್ಲ. ಎರಡೂ ಕಡೆ ಬದಲಿ ಆಟಗಾರರು ಮೈದಾನದಲ್ಲಿ ಕಾಣಿಸಿಕೊಂಡರು.

ಒಂದು ಗಂಟೆ ಬಳಿಕ ಉದಾಂತ ಮತ್ತು ಮುಸಾವು-ಕಿಂಗ್ ಬದಲಿಗೆ ಲಿಯಾನ್ ಅಗಸ್ಟಿನ್ ಮತ್ತು ಪ್ರತೀಕ್ ಚೌಧರಿಯನ್ನು ಅಂಗಳಕ್ಕೆ ಕರೆತರಲಾಯಿತು.

ಆದರೆ, 70ನೇ ನಿಮಿಷದಲ್ಲಿ ಬಿಎಫ್ಸಿ ಲಿಯಾನ್ ಅಗಸ್ಟಿನ್ ಕರೆಸಿಕೊಂಡು ಪ್ರಿನ್ಸ್ ಇಬಾರಾ ಅವರನ್ನ ಕಣಕ್ಕೆ ಇಳಿಸಿದರು. ಇದು ವರದಾನವಾಗಿ ಪರಿಣಮಿಸಿತು. ಅಲಾನ್ ಕೋಸ್ಟಾ ಅಸಿಸ್ಟ್ ಮೂಲಕ ಬಂದ ಚೆಂಡನ್ನು ಪ್ರಿನ್ಸ್ ಇಬಾರಾ ಅದ್ಭುತವಾಗಿ (81′) ನೆಟ್ ಒಳಗೆ ಸೇರಿಸಿ ಸಂಭ್ರಮಿಸಿದರು.

ಅಂತಿಮವಾಗಿ ಸುನೀಲ್ ಚೇಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ 4-2 ಅಂತರದಿಂದ ಖಾಲಿದ್ ಜಮೀಲ್ ಪಡೆಯನ್ನು ಮಣಿಸಿತು.

ಮುಂದಿನ ಪಂದ್ಯವನ್ನು ಬೆಂಗಳೂರು ತಂಡವು ಒಡಿಶಾ ಎಫ್ಸಿ ಯನ್ನು ನವೆಂಬರ್ 24 ರಂದು ತಿಲಕ್ ಮೈದಾನದಲ್ಲಿ ಎದುರಿಸಲಿದೆ.
——————————————————–
ಅಂತಿಮ ಸ್ಕೋರ್:
ಬೆಂಗಳೂರು ಎಫ್ಸಿ – 4 (14’ ಸಿಲ್ವಾ, 23 ಮಶೂರ್ (ಒಜಿ), 42’ ರಾಣೆ, 81’ ಪ್ರಿನ್ಸ್)
ನಾರ್ತ್ ಈಸ್ಟ್ ಯುನೈಟೆಡ್ – 2 (17’ ಬ್ರೌನ್, 25’ ಕೋರ್ಯರ್)

Related posts

ಚೊಚ್ಚಲ ಪ್ರವೇಶದಲ್ಲೇ ಗುಜರಾತ್ ಟೈಟನ್ಸ್’ಗೆ ಚಾಂಪಿಯನ್ ಪಟ್ಟ!!

eNewsLand Team

ವಿರಾಟ್ ಕೊಹ್ಲಿ ನಾಯಕತ್ವದ ಕೊನೆ ಪಂದ್ಯ

eNEWS LAND Team

ಈ ಪ್ರಶಸ್ತಿ ಪಡೆದ ಮೊದಲ ಭಾರತೀಯೆ ‌ಎನಿಸಿದ ಹರ್ಮನ್ ಪ್ರೀತ್ ಕೌರ್!

eNewsLand Team