22.3 C
Hubli
ಜೂನ್ 13, 2024
eNews Land
ರಾಜಕೀಯ ಸುದ್ದಿ

ಚುನಾವಣೆಯಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ಶೋಭಾ ಕರಂದ್ಲಾಜೆ

ಇಎನ್ಎಲ್ ಬೆಂಗಳೂರು: ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜನತೆ ಡಬಲ್ ಎಂಜಿನ್ ಸರಕಾರ ರಚನೆಗೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2008ರಲ್ಲಿ ಚುನಾವಣೆ ನಡೆದಾಗ ನಾವು 108 ಸ್ಥಾನಗಳನ್ನು ಗೆದ್ದಿದ್ದೆವು. ಬಹುಮತಕ್ಕೆ 3 ಸೀಟುಗಳ ಕೊರತೆ ಇತ್ತು. 2018ರಲ್ಲಿ ಕೂಡ 104 ಸೀಟುಗಳ ಜೊತೆ ಅತ್ಯಂತ ದೊಡ್ಡ ಪಕ್ಷವಾಗಿ ರಾಜ್ಯದ ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದರು. ಆದರೆ, ಬಹುಮತ ಸಿಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಸರಕಾರ ರಚಿಸಲಾಯಿತು. ಕಾಲಾನಂತರ ಆ ಸರಕಾರದ ಕುರಿತು ಬೇಸತ್ತು ಹಲವರು ನಮ್ಮ ಪಕ್ಷ ಸೇರಿದ್ದರಿಂದ ಮರು ಚುನಾವಣೆ ನಡೆದು ಮತ್ತೆ ನಮ್ಮ ಸರಕಾರ ರಚಿಸಿದೆವು ಎಂದು ವಿವರಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಹೆಚ್ಚು ವೇಗವಾಗಿ ಅಭಿವೃದ್ಧಿ ಕಾರ್ಯ ಸಾಧ್ಯ ಎಂದು ಜನರು ಅಭಿಪ್ರಾಯ ಹೊಂದಿದ್ದಾರೆ. 9.17 ಲಕ್ಷ ಯುವಜನರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಅವರು ಏಪ್ರಿಲ್ 1ವರೆಗೆ ಮತದಾರರ ನೋಂದಣಿ ಮಾಡಬಹುದು. ಇದು ಸ್ವಾಗತಾರ್ಹ ಎಂದು ತಿಳಿಸಿದರು.
ನರೇಂದ್ರ ಮೋದಿಯವರ ಸರಕಾರ ಯೋಜನೆಗಳನ್ನು ಮತ್ತು ಕರ್ನಾಟಕದಲ್ಲಿ ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ಯೋಜನೆಗಳನ್ನು ನಾವು ನಿರಂತರವಾಗಿ ಜನರ ಮಧ್ಯೆ ತಿಳಿಸುವ ಕಾರ್ಯವನ್ನು ನಾವು ಚುನಾವಣೆ ಇಲ್ಲದ ಕಾಲದಲ್ಲೂ ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಬಂದಾಗ ಎಚ್ಚರಗೊಳ್ಳುವ ಪಕ್ಷಗಳು ಎಂದು ಟೀಕಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ಬಂದಾಗ ಗ್ಯಾರಂಟಿ ಕೊಡುವ ಪಕ್ಷಗಳು. ಚುನಾವಣೆಗಾಗಿ ಜಾತಿ, ಧರ್ಮದ ಹೆಸರು ಹೇಳಿ ಒಡೆದು ಆಳುವ ಕೆಲಸ ಮಾಡುವವರು ಈ ಪಕ್ಷಗಳು ಎಂದು ಆರೋಪಿಸಿದರು. 2013-18ರ ಕಾಲಾವಧಿಯಲ್ಲಿ ಕೂಡ ಕಾಂಗ್ರೆಸ್ ಆಡಳಿತವಿದ್ದಾಗ ಆ ಪಕ್ಷ ಇದನ್ನೇ ಮಾಡಿತ್ತು. ಸಿದ್ದರಾಮಯ್ಯರ ಸರಕಾರ ಸಮಾಜ, ಧರ್ಮವನ್ನು ಒಡೆಯುವ ದುಷ್ಕøತ್ಯ ಮಾಡಿತ್ತು ಎಂದು ವಿವರಿಸಿದರು.
ಬಿಜೆಪಿ ಸರ್ವ ಜನಾಂಗವನ್ನು ಒಟ್ಟಿಗೆ ಒಯ್ಯುವ, ಯಾವುದೇ ಯೋಜನೆ ಇದ್ದರೂ ಎಲ್ಲ ಜನಾಂಗಗಳ ಕೊನೆ ವ್ಯಕ್ತಿಗಳಿಗೆ ತಲುಪಿಸುವ ಕಾರ್ಯವನ್ನು ಮೋದಿಜಿ ನೇತೃತ್ವದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ತಿಳಿಸಿದರು.
ಒಂದೇ ಹಂತದಲ್ಲಿ ಚುನಾವಣೆ ನಡೆಯಲೆಂಬ ಅಪೇಕ್ಷೆ ಇತ್ತು. ಅದೇ ನಿರೀಕ್ಷೆಯಂತೆ ಚುನಾವಣೆ ನಡೆಯುತ್ತಿದೆ. ಶಾಂತಿಯುತ ಮತದಾನ ಆಗಲಿ; ಗೊಂದಲ, ಗಲಭೆಯಿಂದ ಮರು ಮತದಾನ ಆಗದಿರಲಿ ಎಂಬ ಅಪೇಕ್ಷೆ ನಮ್ಮದು ಎಂದು ತಿಳಿಸಿದರು. 80 ವರ್ಷಕ್ಕಿಂತ ಮೇಲ್ಪಟ್ಟ 12 ಲಕ್ಷಕ್ಕೂ ಹೆಚ್ಚು ಮತದಾರರು, ಸಾವಿರಾರು ದಿವ್ಯಾಂಗ ಮತದಾರರು ಮನೆಯಲ್ಲೇ ಕುಳಿತು ಮತದಾನ ಮಾಡಲು ಅವಕಾಶ ಮಾಡಿಕೊಟ್ಟ ಚುನಾವಣಾ ಆಯೋಗಕ್ಕೆ ಧನ್ಯವಾದಗಳು. ತಂತ್ರಜ್ಞಾನಕ್ಕೆ ಒತ್ತು ಕೊಟ್ಟ ಕಾರಣ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಜನರ ಮನ ಒಲಿಕೆ
ಬೆಂಗಳೂರಿನಂಥ ಮಹಾನಗರದಲ್ಲಿ ಮತದಾನದ ಶೇಕಡಾವಾರು ಕಡಿಮೆ ಆಗುವ ಕುರಿತು ಆಯೋಗ ಆತಂಕ ವ್ಯಕ್ತಪಡಿಸಿ, ಹೆಚ್ಚು ಒತ್ತು ಕೊಡಲು ಕೋರಿದೆ. ಇದಕ್ಕಾಗಿ ನಗರ ಮತದಾರರನ್ನು ಕರೆತರಲು ಮತ್ತು ಮನ ಒಲಿಸಲು ವಿಶೇóಷ ಪ್ರಯತ್ನ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಅವರು ನುಡಿದರು.
ಪುರುಷ ಮತದಾರರ ಬಹುತೇಕ ಸರಿಸಮವಾಗಿ ಮಹಿಳಾ ಮತದಾರರು, ಕೆಲವೆಡೆ ಹೆಚ್ಚು ಮತದಾರರಿರುವುದು ಖುಷಿಯ ವಿಚಾರ ಎಂದೂ ಅವರು ತಿಳಿಸಿದರು.

ರಾಜ್ಯದಲ್ಲಿ ವಿಮಾನನಿಲ್ದಾಣ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ರೈಲ್ವೆ ಸ್ಟೇಷನ್‍ಗಳ ಸ್ವಚ್ಛತೆ, ಲೈನ್‍ಗಳ ಡಬಲಿಂಗ್, ಹೆಚ್ಚು ರೈಲುಗಳನ್ನು ಓಡಿಸಿದ್ದು, ಹೆದ್ದಾರಿಗಳ ಅಭಿವೃದ್ಧಿ, ಜಲಜೀವನ್ ಮಿಷನ್ ಸಾಧನೆ, ಆಯುಷ್ಮಾನ್ ಕಾರ್ಡ್ ಸಾಧ್ಯವಾಗಲು ಡಬಲ್ ಎಂಜಿನ್ ಸರಕಾರವೇ ಕಾರಣ ಎಂದು ವಿಶ್ಲೇಷಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಮಾಜಿ ಉಪಮೇಯರ್ ಮತ್ತು ಜಿಲ್ಲಾ ವಕ್ತಾರ ಎಸ್. ಹರೀಶ್, ಬಿಬಿಎಂಪಿ ಮಾಜಿ ಸದಸ್ಯ ಕೆ. ಸೋಮಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Related posts

‘ ಏಕ ಲವ್ ಯಾ’ ಚಿತ್ರದ ‘ಅನಿತಾ ಅನಿತಾ’ ಸಾಂಗ್ ಹುಬ್ಬಳ್ಳಿಯಲ್ಲಿ ರಿಲೀಸ್

eNewsLand Team

ಬೆಂಬಲ ಬೆಲೆ ಯೋಜನೆ; ಕಡಲೆ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶ: ಸಚಿವ ಮುನೇನಕೊಪ್ಪ

eNEWS LAND Team

ನನ್ನ ತಾಯಿಯೇ ನನಗೆ ಹೀರೋ : ಸಂತೋಷ ಲಾಡ್

eNEWS LAND Team