21.6 C
Hubli
ನವೆಂಬರ್ 14, 2024
eNews Land
ರಾಜಕೀಯ

ಎಸ್.ಎ.ರವೀಂದ್ರನಾಥ್ ಇಂದಿನ ಪೀಳಿಗೆಗೆ ಆದರ್ಶಪ್ರಾಯರು : ಸಿಎಂ ಬೊಮ್ಮಾಯಿ

ಇಎನ್ಎಲ್ ದಾವಣಗೆರೆ ನ.26: ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಇಂದಿನ ಪೀಳಿಗೆಗೆ ಆದರ್ಶಪ್ರಾಯರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.

ಅವರು ಇಂದು ಮಾಜಿ ಸಚಿವರು ಹಾಗೂ ಶಾಸಕರಾದ ಎಸ್.ಎ.ರವೀಂದ್ರನಾಥ್ ಅವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಹಾಗೂ ಕೃಷಿ ಕಣ್ಮಣಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಎತ್ತರದ ವ್ಯಕ್ತಿತ್ವ, ಸ್ಪುರದ್ರೂಪಿಯಾಗಿರುವ ರವೀಂದ್ರನಾಥ್ ಅವರ ಮಾತುಗಳು ಖಡಕ್ ಆದರೂ ಅವರ ಹೋರಾಟದಲ್ಲಿ ಪ್ರಾಮಾಣಿಕತೆ ಇದೆ ಯಾವುದೇ ರಾಜಕೀಯ ಸ್ಥಾನಮಾನಕ್ಕಾಗಿ ಅವರು ಹೋರಾಟ ಮಾಡಲಿಲ್ಲ. ಸ್ವಚ್ಛ ಮನಸ್ಸಿನಿಂದ ರೈತರಿಗೆ ನ್ಯಾಯ ಕೊಡಿಸಬೇಕೆಂದು ಹೋರಾಟ ಮಾಡುವ ನಾಯಕರ ಕೊರತೆ ಇಂದು ಕಾಣುತ್ತಿದೆ. ಸದಾ ರೈತರ ಪರವಾಗಿದ್ದು, ಅವರಿಗಾಗಿ ಧ್ವನಿ ಎತ್ತಿದವರು. ಸಾರ್ವಜನಿಕ ಜೀವನದಲ್ಲಿ ಸ್ವಚ್ಛ ಚಾರಿತ್ರ್ಯ, ಪ್ರಾಮಾಣಿಕತೆ, ಸಾರ್ವಜನಿಕ ಮೌಲ್ಯಗಳನ್ನು ಎತ್ತಿ ಹಿಡಿದವರು ಎಂದರು.

ರೈತಪರ ಹೋರಾಟಗಾರ:
ತಮ್ಮ ತಂದೆ ಕಂದಾಯ ಸಚಿವರಾಗಿದ್ದ ಸಂದರ್ಭದಲ್ಲಿ ದಾವಣಗೆರೆ, ಮಾಯಕೊಂಡದ ರೈತರನ್ನು ಒಂದುಗೂಡಿಸಿ ಭದ್ರಾ ಕಾಲುವೆ ನೀರು ಹಂತದವರೆಗೂ ಹರಿಸಬೇಕೆಂಬ ಬೇಡಿಕೆಯನ್ನಿಟ್ಟು ಹೋರಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ರವೀಂದ್ರನಾಥ್ ಅವರು ಸ್ಪಷ್ಟತೆಯಿದ್ದ, ದಿಟ್ಟ ಹೋರಾಟಗಾರರು. ಯಾವುದೇ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಲುಪಿಸುವ ಛಾತಿ ಹೊಂದಿರುವ ಧೀಮಂತ ನಾಯಕರು. ರೈತರ ಬೆಂಬಲದಿಂದ ಮಾತ್ರ ಕಷ್ಟಕರ ಹೋರಾಟವನ್ನು ಕೈಗೊಂಡು ರೈತರಿಗೆ ನ್ಯಾಯ ದೊರಕಿಸಲು ಮುಂಚೂಣಿಯಲ್ಲಿ ನಿಂತು ಯಶಸ್ವಿಯಾದವರು ರವೀಂದ್ರನಾಥ್. ವ್ಯವಸ್ಥೆ ಹಾಗೂ ಆಡಳಿತದ ಮೇಲೆ ಬಹಳ ದೊಡ್ಡ ಪರಿಣಾಮವನ್ನು ಬೀರಿದ್ದರು ಎಂದರು.

ಮುತ್ಸದಿ ರಾಜಕಾರಣಿ:
ಒಬ್ಬ ರಾಜಕಾರಣಿಗೆ ಮುಂದಿನ ಚುನಾವಣೆ ಮೇಲೆ ಗಮನವಿದ್ದರೆ, ಒಬ್ಬ ಮುತ್ಸದಿಗೆ ಮುಂದಿನ ಪೀಳಿಗೆಯ ಮೇಲಿರುತ್ತದೆ. ಮುಂದಿನ ಜನಂಗದ ಮೇಲೆ ದೃಷ್ಟಿಯಿಟ್ಟುಕೊಂಡು ಕೆಲಸ ಮಾಡಿದ ಒಬ್ಬ ಮುತ್ಸದಿ ನಾಯಕ ರವೀಂದ್ರನಾಥ್ ಅವರು.
ಅವರ ಮಾತುಗಳಲ್ಲಿ ಕುತೂಹಲವಿರುತ್ತದೆ. ಮೊನಚಿನ ಮಾತುಗಳು, ಅರ್ಥಗರ್ಭಿತವಾಗಿರುತ್ತವೆ. ಸಂದರ್ಭಕ್ಕೆ ತಕ್ಕನಂತೆ ಮಾತನಾಡುವ ಅವರು, ಸತ್ಯವನ್ನು ಬಹಳ ಅರ್ಥಗರ್ಭಿತವಾಗಿ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಅವರ ಬದುಕು ಅತ್ಯಂತ ಸ್ವಚ್ಛವಾಗಿರುವುದರಿಂದ ಪ್ರಸನ್ನತೆಯಿರುತ್ತದೆ. ರಾಜಕಾರಣದಲ್ಲಿದ್ದರೂ ಅಧಿಕಾರದ ಹಿಂದೆ ಹೋಗದೆ, ಸಿಕ್ಕಾಗ ಯಾವುದಕ್ಕಾಗಿ ಹೋರಾಟ ಮಾಡಿದರೋ ಅದಕ್ಕಾಗಿ ಶ್ರಮಿಸಿ ಸಾಧನೆ ಮಾಡಿದರು. ವಿಚಾರ, ಗುರಿ ಸಾಧನೆಯಲ್ಲಿ ಸರಳತೆ ಇದೆ. ಅವರಲ್ಲಿ ಗೊಂದಲಗಳಿಲ್ಲ. ದಾವಣಗೆರೆ ಜಿಲ್ಲೆಯ ಜನ ಅವರಿಗೆ ವಿಶೇಷ ಸ್ಥಾನವನ್ನು ತಮ್ಮ ಹೃದಯದಲ್ಲಿ ಕೊಟ್ಟಿದ್ದಾರೆ.

ಜೀವನ ಮೌಲ್ಯ

ಎಸ್.ಎ.ರವೀಂದ್ರನಾಥ್ ಅವರು ಜೀವನ ಮೌಲ್ಯಗಳಿಗೆ ಬೆಲೆ ನೀಡುವ ಮೂಲಕ ಜನೋಪಯೋಗಿಯಾಗಿ ಸಾರ್ವಜನಿಕ ಬದುಕನ್ನು ನಡೆಸಿದ್ದಾರೆ. ಸಮನ್ವಯ, ಆಚರಣೆ ಮತ್ತು ಚಾರಿತ್ರ್ಯ ಇವೆಲ್ಲವನ್ನೂ ರವೀಂದ್ರನಾಥ್ ಅವರಲ್ಲಿ ಕಾಣಬಹುದಾಗಿದೆ. ನಗರದಲ್ಲಿರುವ ಬಡವರಿಗೆ ಬಡಾವಣೆಗಳನ್ನು ನಿರ್ಮಿಸುವ ಮೂಲಕ 20,000 ಹೆಚ್ಚು ವಸತಿ ರಹಿತರಿಗೆ ವಸತಿ ನೀಡಲು ಧ್ಯೇಯ ಹೊಂದಿದ್ದಾರೆ. 173 ಎಕರೆಗಳನ್ನು ಸ್ವಾಧೀನಪಡಿಸಿಕೊಂಡು 15000 ಹೆಚ್ಚು ಜನರಿಗೆ ಮನೆಕಟ್ಟಿಕೊಡಲು ಇಚ್ಛಿಸಿದ್ದು, ಇದಕ್ಕೆ ಬಹಳ ಹೃದಯ ಶ್ರೀಮಂತಿಕೆ ಇರಬೇಕು. 75ನೇ ವಯಸ್ಸಿನ ಹಿರಿಯರಾದ ರವೀಂದ್ರನಾಥ್ ಅವರ ಆಶಯಗಳನ್ನು ಈಡೇರಿಸಲು ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.

ಇತರರಿಗೂ ನೆರಳನ್ನು ಕೊಡುವಂತಹ ದೊಡ್ಡ ಬದುಕು ನಮ್ಮದಾಗಬೇಕು. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಮರಳಿಸುವ ಕೆಲಸ ಮಾಡಬೇಕು. ಆಗ ನಮ್ಮ ಬದುಕಿನ ಬ್ಯಾಲೆನ್ಸ್ ಶೀಟ್ ಬ್ಯಾಲೆನ್ಸ್ ಆಗುತ್ತದೆ. ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎಂಬ ನುಡಿಯ ಪರಿಪಾಲನೆ ಮಾಡಬೇಕು. ಲಾಭನಷ್ಟದ ಜೊತೆಗೆ ಪಾಪಪುಣ್ಯದ ಗಳಿಕೆ ಮಾಡುವ ಕೆಲಸ ಆಗಬೇಕು. ಇಂತಹ ಶ್ರೀಮಂತ ಬದುಕನ್ನು ರವೀಂದ್ರನಾಥ್ ಅವರು ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನ ನಮಗೆ ಬೇಕು.

ರವೀಂದ್ರನಾಥ್ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಜಿ ಎಂ ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ರಾಮಚಂದ್ರ ಮತ್ತು ಇತರರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts

ಬೊಮ್ಮಾಯಿ ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

eNewsLand Team

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ: ಜೆ.ಪಿ.ನಡ್ಡಾ

eNEWS LAND Team

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಆತಂಕ ಇಲ್ಲ: ಸಿಎಂ ಬೊಮ್ಮಾಯಿ

eNEWS LAND Team