28.6 C
Hubli
ಏಪ್ರಿಲ್ 20, 2024
eNews Land
ರಾಜಕೀಯ

ಬೊಮ್ಮಾಯಿ ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

ಇಎನ್ಎಲ್ ಬೆಂಗಳೂರು:

ರಾಜ್ಯದಲ್ಲಿ ಕಳೆದ ನೂರು ದಿನಗಳಲ್ಲಿ ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳು ಹಾಗೂ ನೂತನ ಯೋಜನೆಗಳ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತೃಪ್ತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ನವ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಕರ್ನಾಟಕ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಭೇಟಿಯ ಸಂದರ್ಭದಲ್ಲಿ ಕಳೆದ ನೂರು ದಿನಗಳಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ಹಾಗೂ ನೂತನ ಕಾರ್ಯಕ್ರಮಗಳ ಬಗ್ಗೆ ಪ್ರಧಾನಿಯವರಿಗೆ ಮಾಹಿತಿ ನೀಡಲಾಯಿತು. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು ಕೆಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತಂತೆ ಹಲವು ಸಲಹೆ, ಮಾರ್ಗದರ್ಶನ ನೀಡಿದರು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಪ್ರಧಾನಿಯವರು ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಹಾಗೂ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ತರುವ ಕ್ರಮಗಳನ್ನು ಶ್ಲಾಘಿಸಿದರು. ರೈತ ವಿದ್ಯಾನಿಧಿ ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಬೇಕು. ಏಕೆಂದರೆ, ಡಿಜಿಟಲ್ ವೇದಿಕೆಯಲ್ಲಿ ರಾಜ್ಯದ ಎಲ್ಲ ರೈತರ ಮಾಹಿತಿ ಲಭ್ಯವಿದೆ. ರಾಜ್ಯದ ಯಶಸ್ಸನ್ನು ಗಮನಿಸಿ ಇತರ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸಲು ಚಿಂತನೆ ನಡೆಸಲಾಗುವುದು ಎಂದು ಪ್ರಧಾನಿಯವರು ತಿಳಿಸಿದರು. ಅತಿ ಹೆಚ್ಚು ಅಂದಾಜು ಸಿದ್ಧಪಡಿಸುವುದು, ಕೆಲವರಿಗೆ ಮಾತ್ರ ಟೆಂಡರ್ ದೊರೆಯುವ ಉದ್ದೇಶಕ್ಕೆ ನಿರ್ದಿಷ್ಟ ಷರತ್ತುಗಳನ್ನು ವಿಧಿಸುವಂತಹ ಪರಿಪಾಠಗಳಿಗೆ ಕಡಿವಾಣ ಹಾಕಲು ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ಒಂದು ದಿಟ್ಟ ನಿರ್ಧಾರ. ಎಲ್ಲ ಇಲಾಖೆಗಳಲ್ಲಿಯೂ ಇದನ್ನು ಜಾರಿಗೊಳಿಸುವಂತೆ ಪ್ರಧಾನಿಯವರು ಸಲಹೆ ಮಾಡಿದರು ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಪ್ರಗತಿಯ ಕುರಿತು ಮಾಹಿತಿ ಪಡೆದ ಪ್ರಧಾನಿಯವರು ವಿಶ್ವವಿದ್ಯಾಲಯಗಳು, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ನೀತಿಯನ್ನು ಅನುಷ್ಠಾನಗೊಳಿಸುವಂತೆ ಸಲಹೆ ನೀಡಿದರು. ಅಮೃತ ಯೋಜನೆಗಳ ಕುರಿತು ಹರ್ಷ ವ್ಯಕ್ತಪಡಿಸಿ, ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಂಯೋಜನೆಗೊಳಿಸಿ, ಕ್ರಮ ಕೈಗೊಳ್ಳುವಂತೆ ಹಾಗೂ ಇದರ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯ ನೇಮಕ ಮಾಡುವಂತೆ ತಿಳಿಸಿದರು. ವಸತಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯೊಂದಿಗೆ ಸಂಯೋಜನೆ ಮಾಡುವಂತೆ ತಿಳೀಸಿದರು. ಇದರೊಂದಿಗೆ ಕೌಶಲ್ಯ ಅಭಿವೃದ್ಧಿ, ಸ್ವಸಹಾಯ ಸಂಘಗಳ ಸಬಲೀಕರಣ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿಯವರು ತಿಳಿಸಿದರು/

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಆರ್ಥಿಕ ಸಬಲೀಕರಣಕ್ಕೆ ನೆರವು ನೀಡಲು ಬ್ಯಾಂಕುಗಳು ಹೆಚ್ಚಿನ ಉತ್ಸುಕತೆ ತೋರದಿರುವ ಬಗ್ಗೆ ಪ್ರಧಾನಿಯವರ ಗಮನ ಸೆಳೆದಿದ್ದು, ಹೆಣ್ಣುಮಕ್ಕಳಿಗೆ ಹೆಚ್ಚಿನ ನೆರವು ನೀಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ, ಉದ್ಯೋಗ ನೀತಿ ಮೊದಲಾದವುಗಳ ಕುರಿತೂ ಸಹ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸೆಂಬರ್ ನಲ್ಲಿ ರಾಜ್ಯಕ್ಕೆ ಪ್ರಧಾನಿ ಭೇಟಿ:

ರಾಜ್ಯದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ/ ಶಂಕುಸ್ಥಾಪನೆಗೆ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಆಗಮಿಸುವಂತೆ ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಡಿಗಲ್ಲು ಸಮಾರಂಭ, ಅಂಬೇಡ್ಕರ್ ಸ್ಕೂಲ್ ಆಫ್ ಇಕನಾಮಿಕ್ಸ್ ಹಾಗೂ ಉನ್ನತೀಕರಿಸಿದ ಐಟಿಐಗಳ ಉದ್ಘಾಟನೆ ಹಾಗೂ ಬೆಂಗಳೂರು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿಯವರನ್ನು ಆಹ್ವಾನಿಸಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಎರಡು ದಿನ ಈ ಕಾರ್ಯಕ್ರಮಗಳನ್ನು ನಿಗದಿಪಡಿಸುವಂತೆ ಪ್ರಧಾನಿಯವರು ತಿಳಿಸಿದ್ದು, ಎರಡು ಬಾರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಕಾರ್ಯಾಲಯ ನಿಗದಿ ಪಡಿಸಿದ ದಿನಾಂಕಗಳಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ನಿಷ್ಠೆಯಿಂದ ದಿಟ್ಟತನದಿಂದ ಜನಪರ ಕೆಲಸ ಮಾಡುವಂತೆ ಪ್ರಧಾನಿಯವರು ತಿಳಿಸಿದ್ದಾರೆ. ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳ ಕುರಿತು ಮಾಹಿತಿ ನೀಡಿದಾಗ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, 2023ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಪರ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ಸಿಎಂ ತಿಳಿಸಿದರು.

Related posts

ರಾಜ್ಯದಲ್ಲಿ ಕಾರ್ಮಿಕರಿಗೆ ರೂ.97 ಕೋಟಿ ಸಹಾಯಧನ ಮಂಜೂರು ಕಾರ್ಮಿಕ ಸಚಿವ- ಶಿವರಾಂ ಹೆಬ್ಬಾರ

eNEWS LAND Team

ಅವಿರೋಧ ಆಯ್ಕೆ ಬೇಡ: ಕುಸ್ತಿನೇ ಬೇಕು: ಕಾಂಗ್ರೆಸ್ ನಾಯಕರಿಗೆ  ಸಿಎಂ ಬಹಿರಂಗ ಸವಾಲು

eNEWS LAND Team

ಗಲಭೆಕೋರರ ನೆರವಿಗೆ ನಿಲ್ಲುವುದು ಕಾಂಗ್ರೆಸ್ ನಿಲುವು: ಮುಖ್ಯಮಂತ್ರಿ  ಬೊಮ್ಮಾಯಿ

eNewsLand Team