25 C
Hubli
ಮೇ 25, 2024
eNews Land
ರಾಜಕೀಯ

ಅಸೆಂಬ್ಲಿಯಲ್ಲಿ ಬಿಜೆಪಿಗೆ ಬಹುಮತ ಖಚಿತ-ಬಿ.ಎಸ್.ಯಡಿಯೂರಪ್ಪ

ಇಎನ್ಎಲ್ ಬೆಂಗಳೂರು:

ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 140ರಿಂದ 145 ಶಾಸಕ ಸ್ಥಾನಗಳನ್ನು ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ ಎಂದು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಡೂರುವಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜಿ ಅವರ ಮೇಲಿನ ವಿಶ್ವಾಸಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ ಎಂದರು. ಚುನಾವಣೆಗೆ ಇನ್ನು ಕೇವಲ 4 ತಿಂಗಳಷ್ಟೇ ಬಾಕಿ ಇದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿದ್ದಾರೆ ಎಂದರು.
1 ಲಕ್ಷ ಸಾಲಮನ್ನಾ, ಆಯುಷ್ಮಾನ್ ಯೋಜನೆ, ಫಸಲ್ ವಿಮೆ ಯೋಜನೆ, ಮೆಗಾ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಹಣ, ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ಪರಿಹಾರ ಕೊಡುಗೆ ಸೇರಿ ಅನೇಕ ಜನಪರ ಯೋಜನೆ ಜಾರಿ ಮಾಡಿದ್ದನ್ನು ಅವರು ನೆನಪಿಸಿದರು. ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿ 20 ಲಕ್ಷಕ್ಕೂ ಹೆಚ್ಚು ಜನ ಹೆಣ್ಮಕ್ಕಳಿಗೆ ನೆರವಾಗಿದ್ದೇನೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿ ಹಣ ಕೊಟ್ಟಿದ್ದೇವೆ. ಇದನ್ನು ಕುಂತಲ್ಲಿ- ನಿಂತಲ್ಲಿ ಮಾತನಾಡಿ ಜನರಿಗೆ ತಿಳಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷ ಮುಳುಗುವ ಹಡಗು. ಆ ಪಕ್ಷಕ್ಕೆ ಜನರು ಬೆಂಬಲ ನೀಡುವುದಿಲ್ಲ ಎಂದ ಅವರು, ಬಿಜೆಪಿ ಗೆಲುವು ನಿಶ್ಚಿತ ಎಂದು ನುಡಿದರು. ಜಗದ್ವಂದ್ಯ ನಾಯಕ ನರೇಂದ್ರ ಮೋದಿಜಿ ಅವರೆದುರು ನಿಲ್ಲುವಂಥ ನಾಯಕ ಕಾಂಗ್ರೆಸ್ ಪಕ್ಷದಲ್ಲಿಲ್ಲ ಎಂದು ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮಾತನಾಡಿ, ಧರ್ಮ ಒಡೆಯುವವರು, ಭ್ರಷ್ಟರು, ಸುಳ್ಳು ಹಂಚುವವರು, ದೇಶ ಒಡೆಯುವವರನ್ನು, ಧರ್ಮಸ್ಥಳಕ್ಕೆ ಹೇಗ್ಹೇಗೋ ಹೋಗುತ್ತೇವೆ ಎನ್ನುವವರನ್ನು ಅಧಿಕಾರದ ಸಮೀಪಕ್ಕೂ ಬಿಡದಿರಿ ಎಂದು ಮನವಿ ಮಾಡಿದರು.
ಬಿಜೆಪಿಯ ಎದುರು ಬಂದರೆ ರಾಜಕೀಯವಾಗಿ ಕಾಂಗ್ರೆಸ್‍ನವರು ಉಳಿಯಲಾರರು ಎಂದು ಎಚ್ಚರಿಸಿದರು. ಕೇಂದ್ರ- ರಾಜ್ಯಗಳಲ್ಲಿ ಸರಕಾರದಿಂದ ನಡೆಯುತ್ತಿರುವ ಜನಪರ ಕಾರ್ಯಗಳನ್ನು ವಿವರಿಸಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮನವಿ ಮಾಡಿದರು.
ಜಾತಿ ರಾಜಕಾರಣ ನಮ್ಮದಲ್ಲ; ನೀತಿ ಮೇಲೆ ರಾಜಕಾರಣ ನಮ್ಮದು ಎಂದ ಅವರು, ನಾವು ಕೆಲಸ ಮಾಡಿ ಕೆಲಸ ತೋರಿಸಿ ಮತ ಕೇಳಲು ಬಂದಿದ್ದೇವೆ. ಇದನ್ನು ಗಮನದಲ್ಲಿಡಿ ಎಂದು ಜನರಿಗೆ ಕಿವಿಮಾತು ಹೇಳಿದರು. ಚಿಕ್ಕಮಗಳೂರಿಗೆ ಪ್ರತ್ಯೇಕ ಮಿಲ್ಕ್ ಯೂನಿಯನ್ ಆಗಲಿದೆ ಎಂದು ಅವರು ಪ್ರಕಟಿಸಿದರು.
ಕೇಸರಿ ಅಲೆ ಮೇಲೆ ರಾಜಕೀಯ ಮಾಡುತ್ತೇವೆ. ತಾಕತ್ತಿದ್ದರೆ ಎದುರಿಸಿ ಎಂದು ವಿರೋಧ ಪಕ್ಷದವರಿಗೆ ಅವರು ಸವಾಲೆಸೆದರು. ಇದೇವಾರ ದತ್ತಪೀಠಕ್ಕೆ ನ್ಯಾಯ ಕೊಡಲಿದ್ದೇವೆ ಎಂದು ತಿಳಿಸಿದರು. ಜಿಲ್ಲೆಯ 5ಕ್ಕೆ 5 ಸೀಟು ಬಿಜೆಪಿಯದಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮಗೆ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಗೊತ್ತಿದೆ. ಆದರೆ, ಓಲೈಕೆ ರಾಜಕಾರಣ ಮಾಡುವ ಕ್ಯಾಪ್ಟನ್‍ಗೆ ಕರ್ನಾಟಕ ಸೇಫ್ ಅಲ್ಲ. ಭಾರತವೂ ಸೇಫ್ ಅಲ್ಲ. ಪಾಕಿಸ್ತಾನವೇ ಸೇಫ್ ಎಂದು ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ- ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ನಡೆದಿದೆ. ಇದರ ಆರಂಭದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ನಡೆದಿತ್ತು. ಮೋದಿಜಿ ಮತ್ತು ಕರ್ನಾಟಕ ಬಿಜೆಪಿ ಸರಕಾರದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ಈ ಜೋಡೋ ಯಾತ್ರೆಯ ಉದ್ದೇಶ ಏನಾಗಿತ್ತು ಎಂದು ಡಿ.ಕೆ.ಶಿವಕುಮಾರ್- ಸಿದ್ದರಾಮಯ್ಯ ಉತ್ತರಿಸಲಿ ಎಂದು ಒತ್ತಾಯಿಸಿದರು.
ಭಾರತವನ್ನು ಜೋಡಿಸುವ ಜವಾಬ್ದಾರಿ ಮಾಡದ ಕಾಂಗ್ರೆಸ್ ಪಕ್ಷ, ದೇಶ ವಿಭಜನೆಗೆ ಕಾರಣವಾದ ಕಾಂಗ್ರೆಸ್ ಪಕ್ಷವನ್ನು ಜನರು ನಂಬುವುದಿಲ್ಲ ಎಂದು ತಿಳಿಸಿದರು. ಭಾರತದ ಭೂಭಾಗ ಪಾಕಿಸ್ತಾನ- ಚೀನಾ ಕೈಗೆ ಸೇರಲು ಕಾಂಗ್ರೆಸ್ ಪಕ್ಷ ಕಾರಣ ಎಂದು ಆಕ್ಷೇಪಿಸಿದರು. ದೇಶ- ರಾಜ್ಯದಲ್ಲಿ ಆಡಳಿತವನ್ನು ಹಳ್ಳ ಹಿಡಿಸಿದವರು ಕಾಂಗ್ರೆಸ್ಸಿಗರು ಎಂದು ಟೀಕಿಸಿದರು.
ಕಾಂಗ್ರೆಸ್ ಬಡವರಲ್ಲೂ ಭೇದಭಾವ ಮಾಡಿತ್ತು. ಆದರೆ, ಬಿಜೆಪಿ ಜಾತಿ- ಧರ್ಮ ನೋಡದೆ ಆಡಳಿತ ಮಾಡಿದೆ. ಅದನ್ನು ಗಮನಿಸಿ ಜನರು ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಯನ್ನು ಜನರು ಬೆಂಬಲಿಸುತ್ತಾರೆ ಎಂದರು. ಭದ್ರಾ ಮೇಲ್ದಂಡೆ ಯೋಜನೆಗೆ 16 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರವು ನೀಡುತ್ತಿದೆ ಎಂದು ಪ್ರಕಟಿಸಿದರು.
ರಾಜ್ಯದ ಸಚಿವ ಬೈರತಿ ಬಸವರಾಜು ಅವರು ಮಾತನಾಡಿ, ಬಿಜೆಪಿಯನ್ನು ಬೆಂಬಲಿಸಿ ಯುವಶಕ್ತಿಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಕೇಂದ್ರ- ರಾಜ್ಯದ ಸಚಿವರು, ಶಾಸಕರಾದ ಬೆಳ್ಳಿ ಪ್ರಕಾಶ್, ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಅಧ್ಯಕ್ಷ ಕಲ್ಮರುಡಪ್ಪ, ಪಕ್ಷದ ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.

Related posts

ವಾಯವ್ಯ ಪದವಿಧರ, ಶಿಕ್ಷಕರ ಮತಕ್ಷೇತ್ರ : ಮತದಾರರ ಪಟ್ಟಿ ತಯಾರಿಕೆ ಪದವಿಧರ 22332, ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತಿ

eNewsLand Team

ಸಿದ್ದರಾಮಯ್ಯರ ಸರಕಾರ ದಲಿತ ವಿರೋಧಿ: ಗೋವಿಂದ ಕಾರಜೋಳ

eNewsLand Team

ವಿಪ ಕದನ; ಸಂತೆ, ಜಾತ್ರೆ, ಉತ್ಸವ ನಿಷೇಧಿಸಿದ ಜಿಲ್ಲಾಧಿಕಾರಿ ಹೆಗಡೆ

eNewsLand Team