ಇಎನ್ಎಲ್ ನವದೆಹಲಿ:
ಬಿಟ್-ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಯ ನೀಡಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಿ ಎಂದು ಹೇಳುವ ಮೂಲಕ ಬೊಮ್ಮಾಯಿ ಅವರ ನಾಯಕತ್ವವನ್ನು ಸಮರ್ಥಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೂರು ದಿನಗಳ ಆಡಳಿತದ ಕುರಿತು ಚರ್ಚೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಟ್ ಕಾಯಿನ್ ವಿಚಾರವಾಗಿ ಪ್ರಧಾನಿಗಳು ಹೆಚ್ಚು ಮಾತನಾಡಲು ಇಷ್ಟ ಪಡಲಿಲ್ಲ . ಆದರೆ ನಾನೇ ಪ್ರಧಾನಿಗಳಿಗೆ ಈ ವಿಚಾರ ತಿಳಿಸಿದೆ. ಆಗ ಅವರು ಬಿಟ್ ಕಾಯಿನ್ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನಪರ ಕೆಲಸ ಮಾಡಿ. ನಿಷ್ಠೆ ದಿಟ್ಟತನದಿಂದ ಜನಪರ ಕೆಲಸ ಮಾಡಿ. ಆಗ ಎಲ್ಲವೂ ಸರಿಹೋಗುತ್ತದೆ. ಸೋಲು ಗೆಲುವು ಇದ್ದೇ ಇರುತ್ತದೆ. ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ ಎಂದು ತಮಗೆ ಹೇಳಿರುವುದಾಗಿ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ನಾನು ಭೇಟಿ ಮಾಡಿದ್ದೆ. ಇತ್ತೀಚೆಗೆ ಕೋರ್ ಕಮಿಟಿ ಸಭೆಯಲ್ಲಿ ನಡೆದಂತಹ ವಿಷಯಗಳ ಕುರಿತು ವಿವರಗಳನ್ನು ಅವರಿಗೆ ನೀಡಿದೆ ಎಂದು ಬೊಮ್ಮಾಯಿ ಹೇಳಿದರು.