ಇಎನ್ಎಲ್ ಹುಬ್ಬಳ್ಳಿ: ಅಂತಾರಾಜ್ಯ ಜಲ ವಿವಾದಗಳಿಗೆ ಸಂಬಂಧಿಸಿದಂತೆ ಕೇಂದ್ರದಿಂದಲೂ ಹಲವಾರು ಅನುಮತಿಗಳನ್ನು ಪಡೆಯಬೇಕಿದೆ. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿನೆ ನೀಡಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಏಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಅಂತರರಾಜ್ಯ ಜಲವಿವಾದಗಳ ಶೀಘ್ರವಾಗಿ ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕಿದೆ. ಕಾನೂನಾತ್ಮಕ ವಿಚಾರಗಳಲ್ಲಿ ನ್ಯಾಯಾಲಯಗಳಿಂದ ಕೂಡಲೇ ಪರಿಹಾರ ಕಂಡುಕೊಳ್ಳಬೇಕಿದೆ.
ರೈಲ್ವೆ ಯೋಜನೆಗಳ ಭೂ ಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಳಿಸಲು ಹೆಚ್ವಿನ ಪ್ರಾಶಸ್ತ್ಯ ನೀಡಿ ಇತ್ಯರ್ಥ ಮಾಡಲಾಗುವುದು ಎಂದು ತಿಳಿಸಿದರು.
*ಯೋಜನಾಬದ್ಧವಾಗಿ ರಾಜ್ಯದ ಅಭಿವೃದ್ಧಿ*:*
ಕೋವಿಡ್ ಕರಿನೆರಳಿನಿಂದ ಹೊರಬಂದಿರುವುದರಿಂದ ಅಭಿವೃದ್ಧಿ ಪರ್ವ ಈಗ ಶುರುವಾಗಿದೆ. ಯೋಜನಾಬದ್ಧವಾಗಿ ರಾಜ್ಯವನ್ನು ಅಭಿವೃದ್ಧಿಗೊಳಿಸಲು ತಳಪಾಯವನ್ನು ಹಾಕಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಬಂಡವಾಳ ಹೂಡಿಕೆಗೆ ಒತ್ತು: ಕೈಗಾರಿಕೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಜಮೀನು ಗುರುತಿಸುವಿಕೆ, ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ಆಕರ್ಷಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ಇವುಗಳಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಎಂದರು.
ಮಹಿಳೆಯರ ಸಬಲೀಕರಣಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಅದಕ್ಕೆ ರೂಪುರೇಷೆಗಳನ್ನು ನೀಡಲಾಗುತ್ತಿದೆ. ಕೃಷಿ ಸೆಕಂಡರಿ ನಿರ್ದೇಶನಾಲಯವನ್ನು ಸ್ಥಾಪಿಸಲು ಆದೇಶ ಮಾಡಲಾಗಿದೆ. ಶೀಘ್ರ ದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದರು.
ಹುಬ್ಬಳ್ಳಿಗೆ ಸಂಬಂಧಿಸಿದಂತೆ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಗೆ ಈಗಾಗಲೇ ಮೇಲ್ವಿಚಾರಣಾ ಮಂಡಳಿಯಲ್ಲಿ ತೀರ್ಮಾನವಾಗಿದೆ. ಅದರನ್ವಯ ಆದಷ್ಟು ಬೇಗ ಸ್ಥಳ ನಿಗದಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಅದಾದ ಕೂಡಲೇ ಕಟ್ಟಡ ನಿರ್ಮಾಣ ಮಾಡಲಾಗುವುದು. ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆಯನ್ನು ಜೊತೆಜೊತೆಯಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ನೀಡಲಾಗಿದ್ದು, ಈ ಬಾರಿ ಏಪ್ರಿಲ್ ತಿಂಗಳೂಳಗೆ ಹಣ ಬಿಡುಗಡೆಗೆ ಕಾರ್ಯಾದೇಶ ನೀಡಲಾಗುವುದು ಎಂದರು. ಈ ವರ್ಷ 1400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.