30 C
Hubli
ಏಪ್ರಿಲ್ 24, 2024
eNews Land
ಸುದ್ದಿ

ಉತ್ತರ ಕರ್ನಾಟಕದ ರೈತರ ಕಷ್ಟಕ್ಕೆ ಕಾಂಗ್ರೆಸ್ ಸ್ಪಂದಿಸಲಿಲ್ಲ : ಸಿಎಂ ಆರೋಪ

ಇಎನ್ಎಲ್ ಕೊಪ್ಪಳ ನ.18 :

ಕಾಂಗ್ರೆಸ್ ಆಡಳಿತ ಇದ್ದಾಗ ಉತ್ತರ ಕರ್ನಾಟಕದ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಬಿಜೆಪಿ ವತಿಯಿಂದ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ‘ಜನಸ್ವರಾಜ್’ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕೊಪ್ಪಳ ಜಿಲ್ಲೆಯ ರೈತರಿಗೆ ಅನುಕೂಲ ಕಲ್ಪಿಸುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿಲ್ಲ. ಯಾವ ಸಚಿವರು ಇತ್ತ ಮುಖ ಮಾಡಲಿಲ್ಲ. ಇದು ಕಾಂಗ್ರೆಸ್‌ನ ವೈಖರಿ ಎಂದು ಮುಖ್ಯಮಂತ್ರಿಗಳು ಟೀಕಿಸಿದರು.
ಕೊಪ್ಪಳ ಏತ ನೀರಾವರಿಗೆ ಸಂಬಂಧಿಸಿದಂತೆ ಕೃಷ್ಣಾ ಯೋಜನೆಯನ್ನು ಎ ಮತ್ತು ಬಿ ಯೋಜನೆಯೆಂದು ಪ್ರತ್ಯೇಕಿಸಿದರು. ಬಿ ಯೋಜನೆ ಮಾಡಲಾಗುವುದಿಲ್ಲ ಎಂದು ಕಾಂಗ್ರೆಸ್‌ನವರು ವಾದಿಸುತ್ತಿದ್ದರು. ಮಹಾರಾಷ್ಟ್ರದಲ್ಲಿ ಇದೇ ಕೃಷ್ಣಾ ನದಿಗೆ ಯಾವುದೇ ಎ, ಬಿ ಯೋಜನೆ ಎಂಬ ಭೇದವಿಲ್ಲ. ಕಾಂಗ್ರೆಸ್ ಇಂತಹ ಎ ಮತ್ತು ಬಿ ನೀತಿಯಿಂದ ಉತ್ತರ ಕರ್ನಾಟಕದ ರೈತರಿಗೆ ಬಹಳ ವರ್ಷಗಳಿಂದ ತೊಂದರೆಯಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ನವರು ‘ಕಾಂಗ್ರೆಸ್ ನಡೆ ಕೃಷ್ಣೆಯ ಕಡೆಗೆ’ ಕಾರ್ಯಕ್ರಮ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ವರ್ಷಕ್ಕೆ ೧೦,೦೦೦ ಕೋಟಿ, ಐದು ವರ್ಷಕ್ಕೆ ೫೦,೦೦೦ ಕೋಟಿ ನೀಡುವುದಾಗಿ ಕೃಷ್ಣೆ ಮೇಲೆ , ಕೂಡಲ ಸಂಗಮೇಶನ ಮೇಲೆ ಆಣೆ ಮಾಡಿದ್ದರು. ಇಡೀ ಅವರ ಅಧಿಕಾರಾವಧಿಯಲ್ಲಿ ಅವರು ಕೊಟ್ಟಿದ್ದು ಕೇವಲ ೭೮೦೦ ಕೋಟಿ ಅಷ್ಟೇ ಮತ್ತು ಯಾವುದೇ ನೀರಾವರಿ ಯೋಜನೆಯನ್ನೂ ಕೈಗೆತ್ತಿಕೊಳ್ಳದೇ ಉತ್ತರ ಕರ್ನಾಟಕ ರೈತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಎಸಗಿತು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ತುಂಗಭದ್ರಾ ಎಡದಂಡೆ ಕಾಲುವೆ ಟಿಎಲ್ ಬಿಸಿ ನಾಲೆ ಆಧುನೀಕರಣಕ್ಕೆ 2100 ಕೋಟಿ ರೂ. ಮಂಜೂರು ಮಾಡಿ, ಯೋಜನೆ ಪ್ರಾರಂಭಿಸಿ ಪೂರ್ಣಗೊಳಿಸಿರುವ ಸಮಾಧಾನವಿದೆ ಎಂದು ತಿಳಿಸಿದರು.

ತುಂಗಭದ್ರ ಅಣೆಕಟ್ಟಿಗೆ ಸಮಾನಾಂತರ ಬ್ಯಾರೇಜ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದ ಸಂದರ್ಭ ಅದನ್ನು ತೆಗೆಯುವ ಪ್ರಯತ್ನ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಮಾಡಲಾಯಿತು. ಹೂಳು ಗಟ್ಟಿಯಾಗಿದ್ದರಿಂದ ಅದನ್ನು ವಿದೇಶದಿಂದ ಯಂತ್ರಗಳನ್ನು ತರಿಸಿದರೂ ತೆಗೆಯುವುದು ಕಷ್ಟಸಾಧ್ಯವಾಗಿತ್ತು. ಆದರೆ ಕೊಪ್ಪಳದ ಶ್ರೀಗಳು ಆಸಕ್ತಿ ವಹಿಸಿ, ರೈತರಿಂದಲೇ ಹೂಳು ತೆಗೆಸುವ ಕ್ರಾಂತಿಕಾರಿ ಹಾಗೂ ಅತ್ಯಂತ ಶ್ರೇಷ್ಠ ಕೆಲಸವನ್ನು ಮಾಡಿದ್ದಾರೆ. 30 ಟಿಎಂಸಿ ಹೂಳು ತುಂಬಿದ್ದರಿಂದ ಅದಕ್ಕೆ ಸಮಾನಾಂತರವಾದ ಬ್ಯಾರೇಜ್ ಕಟ್ಟಲು ಸಮೀಕ್ಷೆ ಮಾಡಲಾಗಿತ್ತು. ಅದರ ಡಿ.ಪಿಆರ್ ಗಾಗಿ 20 ಕೋಟಿ ರೂ.ಗಳನ್ನು ಮಂಜೂರು ಮಾಡಿ ಆ ಪೈಕಿ 14 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಮಾನಾಂತರ ಬ್ಯಾರೇಜ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ. ಅದರ ಸಂಪೂರ್ಣ ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಆಂಧ್ರಪ್ರದೇಶದ ಸರ್ಕಾರದೊಂದಿಗೂ ಮಾತನಾಡಲಾಗಿದೆ. ಈ ಬ್ಯಾರೇಜ್ ಕಟ್ಟಲು ಹೆಜ್ಜೆ ಮುಂದಿಟ್ಟು ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದರು.
ಹೈದರಾಬಾದ್ ಕರ್ನಾಟಕ ಗುಲಾಮಗಿರಿಯ ಸಂಕೇತ: ಸಿ.ಎಂ
ಹೈದರಾಬಾದ್ ಕರ್ನಾಟಕ ಎನ್ನುವುದು ಗುಲಾಮಗಿರಿಯ ಸಂಕೇತ. ಕನ್ನಡಿಗರ ಮೇಲೆ ದಾಳಿ, ಹಿಂಸೆಯನ್ನು ಮಾಡಿ ಅನ್ಯಾಯದ ದ್ಯೋತಕವಾಗಿರುವುದನ್ನು ಹೈದರಾಬಾದ್ ಕರ್ನಾಟಕ ಎನ್ನುವುದನ್ನು ಬದಲಾಯಿಸಿ, ಬಸವಣ್ಣನವರ ನಾಡಿಗೆ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟು ನಿಜವಾದ ಕಲ್ಯಾಣವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ಕೂಡಲೇ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರು. ಅವರು ಕೊಟ್ಟಿರುವ ಹೆಸರಿಗೆ ಗೌರವ, ಸಾರ್ಥಕತೆ ಬರುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 3000 ಕೋಟಿ ನೀಡುವ ನಿರ್ಧಾರವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.
ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕವನ್ನು ಕಟ್ಟುವ ಸಂಕಲ್ಪ:
ನಮ್ಮ ಪಕ್ಷದ ಹಿರಿಯರು, ನಾಯಕರು, ಸ್ವಪ್ರೇರಣೆಯಿಂದ ನನಗೆ ಮುಖ್ಯಮಂತ್ರಿಯಾಗುವ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ತೊಟ್ಟಿದ್ದೇನೆ. ಈ ಸ್ಥಾನದ ಬಲದಿಂದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗೌರವದ, ಸ್ವಾಭಿಮಾನದ ಬದುಕು ಕಟ್ಟಲು, ದುಡಿಮೆಯಿಂದ ಆತ್ಮಾಭಿಮಾನದಿಂದ ಬದುಕಲು ಎಲ್ಲ ರೀತಿಯ ಸೌಕರ್ಯ ಹಾಗೂ ಅವಕಾಶಗಳನ್ನು ಒದಗಿಸುವ ನಿಶ್ಚಯವನ್ನು ಮಾಡಲಾಗಿದೆ.
ಅಮೃತ ಯೋಜನೆಯಡಿ ಆರೋಗ್ಯ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ರಾಜ್ಯದ ತಲಾವಾರು ಆದಾಯ ಹೆಚ್ಚಾಗಲು, ಹಿಂದುಳಿದ ವರ್ಗಗಳು, ಎಸ್.ಸಿ.ಎಸ್.ಟಿ ಸಮುದಾಯದವರು ಹಾಗೂ ಮಹಿಳೆಯರು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿ ಸಬಲರಾಗಬೇಕು. ಅವರ ಕೌಟುಂಬಿಕ ಜೀವನದ ಗುಣಮಟ್ಟ ಹೆಚ್ಚಿ ರಾಜ್ಯದ ಒಟ್ಟು ತಲಾವಾರು ಆದಾಯ ಹೆಚ್ಚಾಗಬೇಕು. ದುಡಿಮೆಯಿಂದ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಅದಕ್ಕೆ ವಿನೂತನ ಕಾರ್ಯಕ್ರಮವನ್ನು ರೂಪಿಸಿ, ಅವರೆಲ್ಲರಿಗೂ ಅವಕಾಶಗಳನ್ನು ಸರ್ಕಾರ ಮಾಡಿಕೊಡಲಿದೆ ಎಂದರು.
ರಾಜ್ಯದಲ್ಲಿ 75 ಸಾವಿರ ಎಸ್ ಸಿ/ ಎಸ್ ಟಿ ಹಾಗೂ ಹಿಂದುಳಿದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ನಗರ ಪ್ರದೇಶಗಳ ಅಭಿವೃದ್ಧಿಗೆ ಆಯ್ದ 75 ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ನೀಡಲಾಗುತ್ತಿದೆ.
ಕೊಪ್ಪಳ ಜಿಲ್ಲೆಯಲ್ಲಿ ರೈಸ್ ಪಾರ್ಕ್ ಹಾಗೂ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್ ನಿರ್ಮಾಣವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದು. ಅಳವಂಡಿ ಶಿವಮೂರ್ತಿ ಸ್ವಾಮೀಜಿ ಅವರ ಬೇಡಿಕೆಯಂತೆ ಈ ಭಾಗದ ನೀರಾವರಿಗೆ ನೀರಿನ ಹಂಚಿಕೆ ಮಾಡಿ, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇಂದ್ರ ಸರ್ಕಾರವೂ ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಕೊಪ್ಪಳ ಸಂಸದ ಕರಡಿ ಸಂಗಣ್ಣನವರ ವಿಶೇಷ ಪ್ರಯತ್ನದಿಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗಳು, ಮುನಿರಾಬಾದ್- ಮೆಹಬೂಬ್ ನಗರ ರೈಲು ಮಾರ್ಗ ಅಭಿವೃದ್ಧಿ ಯೋಜನೆಗಳ ಮೂಲಕ ಜನರ ಬಹುದಿನಗಳ ಬೇಡಿಕೆ ಈಡೇರಿದೆ.
ಆಡಳಿತ ವಿಕೇಂದ್ರೀಕರಣ ಮತ್ತು ಗ್ರಾಮಗಳ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಅಮೃತ ಗ್ರಾಮ ಪಂಚಾಯತ್ ಯೋಜನೆ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಅಧಿಕಾರ ವಿಕೇಂದ್ರೀಕರಣ ವಿರೋಧಿ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಿ, ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Related posts

ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಬಹುಮತದೊಂದಿಗೆ ಗೆಲುವು ಸಾಧಿಸುವುದು ನಿಶ್ಚಿತ: ಸಿಎಂ ಬೊಮ್ಮಾಯಿ

eNEWS LAND Team

ಲಿಂಗಾಯತ ಸಿಎಂಗಳಬಗ್ಗೆ ಸಿದ್ರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ: ಸಿಎಂ ಬೊಮ್ಮಾಯಿ‌

eNEWS LAND Team

ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಶಿರೂರ ಸಮೀಪದ ಮೇಲ್ಸೇತುವೆ ಕಾಮಗಾರಿ ಬಹುಬೇಗನೆ ಮುಗಿಸಿ ಎಂದ : ಕರವೇ

eNEWS LAND Team