30 C
Hubli
ಡಿಸೆಂಬರ್ 1, 2022
eNews Land
ಸುದ್ದಿ

ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ: ಸಿಎಂ ಬೊಮ್ಮಾಯಿ

Listen to this article

ಇಎನ್ಎಲ್ ಬೆಂಗಳೂರು : ದೇಶದ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲನ್ನು ಹಾಕುವ ದೇಶದ್ರೋಹಿ ಶಕ್ತಿಗಳನ್ನು ಸಹಿಸಲಾಗುವುದಿಲ್ಲ  ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ಆರ್.ಟಿ.ನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ತಮಿಳುನಾಡಿನಲ್ಲಿ  ಕರ್ನಾಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಒಟ್ಟು 3 ಜನ ನ್ಯಾಯಮೂರ್ತಿಗಳ ಮೇಲೆ ಕೊಲೆ ಬೆದರಿಕೆ ಬಂದಿದ್ದು, ಈ ಸಂಬಂಧ ಮೊಕದ್ದಮೆ ದಾಖಲಾಗಿದೆ. ನ್ಯಾಯಾಂಗದ ತೀರ್ಪನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಅರ್ಜಿದಾರರಿಗೆ ತೀರ್ಪು ಸಮಂಜಸವೆನಿಸದಿದ್ದರೆ ಮೇಲ್ಮನವಿ ಸಲ್ಲಿಸಲು ಎಲ್ಲ ಅವಕಾಶಗಳಿವೆ. ಆದರೂ ಈ ವಿಚ್ಛಿದ್ರಕಾರಿ ಶಕ್ತಿಗಳು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಪ್ರಚೋದಿಸಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ತಿಳಿಸಿದರು.

ಕಠಿಣ ಕಾನೂನು ಕ್ರಮಕ್ಕೆ ಸೂಚನೆ :
ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಕರ್ನಾಟಕ ಉಚ್ಛನ್ಯಾಯಾಲಯದ ಬಾರ್ ಕೌನ್ಸಿಲ್ ಅವರೂ ಸಹ ವಿಧಾನಸೌಧದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ  ಈ ಬಗ್ಗೆ ಕೂಡಲೇ ತನಿಖೆ ನಡೆಸಲು ಸೂಚಿಸಲಾಗಿದೆ. ತಮಿಳುನಾಡಿನಿಂದ ರಾಜ್ಯದ ವಶಕ್ಕೆ ಆರೋಪಿಗಳನ್ನು ಪಡೆದು, ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಆದೇಶ ನೀಡಲಾಗಿದೆ. ಮೂರು ನ್ಯಾಯಾಧೀಶರಿಗೆ ಈಗಿರುವ ಭದ್ರತೆಯ ಜೊತೆಗೆ ‘ವೈ’ ಕೆಟಗರಿಯ ಭದ್ರತೆಯನ್ನು ನೀಡುವ ತೀರ್ಮಾನವನ್ನು ಸರ್ಕಾರ  ಕೈಗೊಂಡಿದೆ ಎಂದರು.

ಜಾತ್ಯಾತೀತರು ಮೌನ ಮುರಿಯಬೇಕು :
ನ್ಯಾಯಮೂರ್ತಿಗಳು ನೀಡುವ ತೀರ್ಪಿಗಾಗಿ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣದ ಮೇಲೆ ಡೋಂಗಿ ಜಾತ್ಯಾತೀತರು ಮೌನ ವಹಿಸಿದ್ದಾರೆ. ಒಂದು ವರ್ಗದ ಜನರನ್ನು ಈ ರೀತಿ ಓಲೈಸುವುದು ಜಾತ್ಯಾತೀತತೆ ಅಲ್ಲ, ಕೋಮುವಾದ ಎಂದೆನಿಸುತ್ತದೆ. ಈ ಪ್ರಕರಣದ ಬಗ್ಗೆ ಎಲ್ಲರೂ ಒಗ್ಗಾಟ್ಟಾಗಿ ಕ್ರಮ ಕೈಗೊಂಡು ಈ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕಿದೆ.  ಈ ರೀತಿಯ ಪ್ರಕರಣಗಳು ದೇಶದ ಪ್ರಜಾಪ್ರಭುತ್ವಕ್ಕೆ ಆತಂಕವನ್ನು ಒಡ್ಡುತ್ತವೆ. ಸರ್ಕಾರದಿಂದ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕವಾಗಿ ಈ ಪ್ರಕರಣವನ್ನು ಖಂಡಿಸಬೇಕು ಎಂದು ತಿಳಿಸಿದರು.

ತುಮಕೂರಿನ ಪಾವಗಡ ಬಸ್ ಅಪಘಾತ :
ಪಾವಗಡ ಬಸ್ ಅಪಘಾತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಲಾ ಕಾಲೇಜುಗಳು ಇರುವ ಸಂದರ್ಭದಲ್ಲಿ ಬಸ್’ಗಳಲ್ಲಿ ಅದರ ಮಿತಿಗಿಂತ ಹೆಚ್ಚಿನ ಜನರನ್ನು ಒಯ್ಯುವ ಬಸ್’ಗಳನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಅಂಥ ಬಸ್‌ಗಳ ಲೈಸೆನ್ಸ್’ಗಳನ್ನು ರದ್ದು ಮಾಡಲು ಸೂಚನೆ ನೀಡಲಾಗಿದೆ. ಇಂತಹ ಬಸ್’ಗಳು ಸಂಚರಿಸುವ ಮಾರ್ಗದಲ್ಲಿ  ನಿರಂತರ ತಪಾಸಣೆ ಮಾಡಲೂ ಸಹ ಸೂಚಿಸಲಾಗಿದೆ. ಗಾಯಾಳುಗಳಿಗೆ ಅವಶ್ಯಕತೆ ಇದ್ದಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಲು ತಿಳಿಸಲಾಗಿದೆ ಹಾಗೂ ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Related posts

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಹಾರ ದಾಸ್ತಾನು ಉಗ್ರಾಣಕ್ಕೆ ಡಿಸಿ ದಿಢೀರ್ ಭೇಟಿ

eNEWS LAND Team

ಹುಬ್ಬಳ್ಳಿಲಿ ಝೋಮ್ಯಾಟೊ, ಸ್ವಿಗ್ಗಿ ರೀತಿ ಮನೆಮನೆಗೆ ಊಟ ಪೂರೈಸಲಿದೆ ಡಬ್ಬಾವಾಲಾ

eNewsLand Team

ಮೇ 28 ಹುಧಾ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ

eNewsLand Team