ಇಎನ್ಎಲ್ ಹುಬ್ಬಳ್ಳಿ: ವಿದ್ಯಾನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರಜತ್ ಉಳಗಡ್ಡಿಮಠ ಮತ್ತು ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಅವರು ನಮ್ಮ ಕೌಟುಂಬಿಕ ವಿವಾದವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ್ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಜತ್ ಮತ್ತು ಸಂಗಡಿಗರು ನಮ್ಮ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿರುವ ಕುರಿತು ಈಗಾಗಲೇ ದೂರು ನೀಡಿದ್ದೇನೆ. ಆತ್ಮರಕ್ಷಣೆಗಾಗಿ ಆಯುಧ ಬಳಕೆ ಮಾಡಲು ಅರ್ಜಿ ಸಲ್ಲಿಸಿದ್ದೇನೆ. ನನ್ನ ವಿರುದ್ಧ ಪ್ರತಿದೂರು ಸಹ ನೀಡಿದ್ದಾರೆ. ಇದರಲ್ಲಿ ನನ್ನ ಪತ್ನಿ ಕುಟುಂಬದ ಸದಸ್ಯರೂ ಶಾಮೀಲಾಗಿದ್ದಾರೆ’ ಎಂದರು.
‘ಗದಿಗೆಪ್ಪಗೌಡರ ಕುಟುಂಬಕ್ಕೆ ಸಂಬಂಧಿಸಿದ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಕೌಟುಂಬಿಕ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಗದಿಗೆಪ್ಪಗೌಡರು ಮಾನಸಿಕವಾಗಿ ಸಮತೋಲನದಲ್ಲಿಲ್ಲ. ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ’ ಎಂದು ರಜತ್ ಉಳ್ಳಾಗಡ್ಡಿಮಠ ಪ್ರತಿಕ್ರಿಯಿಸಿದ್ದಾರೆ.