36 C
Hubli
ಏಪ್ರಿಲ್ 24, 2024
eNews Land
ಸುದ್ದಿ

ಕೋವಿಡ್ ಹೊಸ ಅಲೆ ಎದುರಿಸಲು ಸಜ್ಜಾದ ನೈಋತ್ಯ ರೈಲ್ವೆ

ಇಎನ್ಎಲ್ ಧಾರವಾಡ

ರಾಷ್ಟ್ರದ ಸಾಮಾನು ಸರಂಜಾಮು ಪೂರೈಕೆಯ ವ್ಯವಸ್ಥೆಯನ್ನು ನಿರಂತರವಾಗಿ ಸಾಗಿಸಲು ಹಗಲಿರುಳೆನ್ನದೆ ಅವಿರತವಾಗಿ ಶ್ರಮಿಸುತ್ತಿರುವ ರೈಲ್ವೆ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗಾಗಿ ಕೋವಿಡ್- 19 ರ ಹೊಸ ಅಲೆಯ ಸವಾಲು ಎದುರಿಸಲು ತನ್ನ ಮೂರೂ ವಿಭಾಗಗಳೊಂದಿಗೆ ನೈಋತ್ಯ ರೈಲ್ವೆ ಸನ್ನದ್ಧವಾಗಿದೆ.

ಹುಬ್ಬಳ್ಳಿ ಬೆಂಗಳೂರು ಹಾಗೂ ಮೈಸೂರಲ್ಲಿ ಕೋವಿಡ್ ಶುಶ್ರೂಷಾ ಕೇಂದ್ರ ತೆರೆಯಲಾಗಿದ್ದು ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆ, ಬೆಂಗಳೂರು ಹಾಗೂ ಮೈಸೂರುಗಳ ವಿಭಾಗೀಯ ರೈಲ್ವೆ ಆಸ್ಪತ್ರೆಗಳಲ್ಲಿ ಕ್ರಮವಾಗಿ ನೂರು 100, 149 ಹಾಗೂ 74 ಹಾಸಿಗೆಗಳನ್ನು ಕೋವಿಡ್-19 ರ ರೋಗಿಗಳ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ.
ಈ ಮೂರೂ ಆಸ್ಪತ್ರೆಗಳಲ್ಲಿ ‘ಫೀವರ್ ಕ್ಲಿನಿಕ್’ ಗಳು ದಿನದ 24 ಗಂಟೆ ಕೆಲಸ ಮಾಡುತ್ತಿದ್ದು ಶಂಕಿತ ಪ್ರಕರಣಗಳಲ್ಲಿ ಆರ್ ಎ ಟಿ ಹಾಗೂ ಆರ್ ಟಿ ಪಿ ಸಿ ಆರ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆಸ್ಪತ್ರೆ ದಾಖಲಾತಿಯ ಅವಶ್ಯಕತೆಯಿಲ್ಲದ ರೋಗಿಗಳಿಗೆ ಫೀವರ್ ಕ್ಲಿನಿಕ್’ ಗಳಲ್ಲಿ ಅಗತ್ಯವಾದ ಔಷಧ ವಿತರಿಸಲಾಗುತ್ತಿದೆ. ಎಲ್ಲ ತೀವ್ರ ಶುಶ್ರೂಷಣಾ ಘಟಕ (ಇಂಟೆನ್ಸಿವ್ ಕೇರ್ ಯೂನಿಟ್) ಗಳಿಗೆ ವೆಂಟಿಲೇಟರ್ ವ್ಯವಸ್ಥೆ ಒದಗಿಸಲಾಗಿದೆ. ಪ್ರಸ್ತುತ ನೈಋತ್ಯ ರೈಲ್ವೆಯಲ್ಲಿ 300 ಸಕ್ರಿಯ ಪ್ರಕರಣಗಳಿದ್ದು ಇವುಗಳಲ್ಲಿ ರೈಲ್ವೆ ಸಿಬ್ಬಂದಿ, ಅವರ ಕುಟುಂಬದ ಅರ್ಹ ಸದಸ್ಯರು ನಿವೃತ್ತ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರೂ ಸೇರಿರುತ್ತಾರೆ.

ಮೂರೂ ಆಸ್ಪತ್ರೆಗಳಲ್ಲಿ ಔಷಧೀಯ ಆಮ್ಲಜನಕದ ಸೌಲಭ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂರೂ ಆಸ್ಪತ್ರೆಗಳಲ್ಲಿ 500ಎಲ್ ಪಿ ಎಂ ಪಿಎಸ್ಎ ಆಮ್ಲಜನಕ ಉತ್ಪಾದನಾ ಘಟಕಗಳು ಲಭ್ಯವಿದ್ದು ಹಾಸಿಗೆಗಳಿಗೆ ಕೊಳವೆಯ ಮೂಲಕ ಆಮ್ಲಜನಕ ಸರಬರಾಜಿನ ವ್ಯವಸ್ಥೆಯನ್ನು ಏರ್ಪಾಡು ಮಾಡಲಾಗಿದೆ. ಜೊತೆಗೆ, ಬೆಂಗಳೂರಿನ ವಿಭಾಗಿಯ ರೈಲ್ವೆ ಆಸ್ಪತ್ರೆಯಲ್ಲಿ 1ಕೀ ಲೀ.ಸಾಮರ್ಥ್ಯದ 2 ಆಮ್ಲಜನಕದ ಟ್ಯಾಂಕ್ ಗಳನ್ನು ಸ್ಥಾಪಿಸಲಾಗಿದ್ದು ಹುಬ್ಬಳ್ಳಿಯ ಕೇಂದ್ರೀಯ ರೈಲ್ವೆ ಆಸ್ಪತ್ರೆ ಯಲ್ಲಿ ಜನವರಿ 2022 ರ ಅಂತ್ಯದ ವೇಳೆಗೆ 5ಕೀ ಲೀ ಸಾಮರ್ಥ್ಯದ ಒಂದು ಆಮ್ಲಜನಕದ ಟ್ಯಾಂಕ್ ಅನ್ನು ಸ್ಥಾಪಿಸಲಾಗುವುದು. ಆಮ್ಲಜನಕದ ಸಿಲಿಂಡರ್ ಗಳ ಮರು ಭರ್ತಿಮಾಡುವಿಕೆಯ ಪೂರೈಕೆಯ ಒಪ್ಪಂದಗಳು ಜಾರಿಯಲ್ಲಿದ್ದು ಇದಲ್ಲದೇ ಸಾಕಷ್ಟು ಸಂಖ್ಯೆಯಲ್ಲಿ ಆಮ್ಲಜನಕ ಸಾಂದ್ರಕ ಗಳು ಈ ಆಸ್ಪತ್ರೆಗಳಲ್ಲಿ ಸಿದ್ಧವಿವೆ.

ಇವುಗಳ ಜೊತೆಗೆ, ಹೆಚ್ಚುವರಿ ಅವಶ್ಯಕತೆಗೆ ಅನುಗುಣವಾಗಿ ಗುತ್ತಿಗೆ ಆಧಾರದ ಮೇಲೆ ರೇಡಿಯೋಗ್ರಾಫರ್ ಗಳು, ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ (ಲ್ಯಾಬ್ ಟೆಕ್ನಿಷಿಯನ್ ಗಳು) ಮತ್ತು ವೈದ್ಯಕೀಯ ಸಿಬ್ಬಂದಿ ಸೇವೆಯಲ್ಲಿ ತೊಡಗಿಸಿಕೊಳ್ಳ ಲಾಗುತ್ತಿದೆ.

ವೆಂಟಿಲೇಟರ್ ಗಳ ಕಾರ್ಯವಿಧಾನ, ಪಿ ಎಸ್ ಎ ಜನಕ ಘಟಕಗಳುಆಮ್ಲಜನಕ ಹಾಗೂ ದ್ರವೀಯ ಔಷಧೀಯ ಆಮ್ಲಜನಕ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಕಾರ್ಯವಿಧಾನಗಳನ್ನು ಕುರಿತು ಸಿಬ್ಬಂದಿಗೆ ಸರಿಯಾದ ತರಬೇತಿಯನ್ನು ನೀಡಲಾಗಿದೆ.
ನೈಋತ್ಯ ರೈಲ್ವೆಯ ಶೇ. 99.5 9% ಸಿಬ್ಬಂದಿಗಳಿಗೆ ಲಸಿಕೆಯ ಮೊದಲನೆಯ ಡೋಸ್ ಹಾಗೂ ಶೇ. 97.04 ಸಿಬ್ಬಂದಿಗಳಿಗೆ ಎರಡನೆಯ ಡೋಸ್ ಅನ್ನು ನೀಡಲಾಗಿದೆ. ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆಯ ಡೋಸ್ ಅನ್ನು ನೀಡುವ ಕಾರ್ಯ ಪ್ರಗತಿಯಲ್ಲಿದೆ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ಚಾಲನ ಸಿಬ್ಬಂದಿ ಹಾಗೂ ಗಾರ್ಡ್ ಗಳು ಹಾಗೂ ನಿರ್ವಹಣಾ ಸಿಬ್ಬಂದಿಗಳಿಗೆ ಲಸಿಕೆಯನ್ನು ನೀಡಿ ಅವರ ಆರೋಗ್ಯವನ್ನು ಕುರಿತಾಗಿ ಆಡಳಿತವರ್ಗವು ವಿಶೇಷವಾದ ಕಾಳಜಿಯನ್ನು ವಹಿಸುತ್ತಿದೆ.

ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅವರು ಡಾ. ವಿಲಾಸ್ ಗುಂಡ ಅವರ ನೇತೃತ್ವದಲ್ಲಿ ವಲಯದ ವೈದ್ಯಕೀಯ ವಿಭಾಗವು ಪ್ರಸ್ತುತ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧವಾಗಿದೆ ಎಂದು ತಿಳಿಸಿದರು. ಕೋವಿಡ್-19ರ ಹಿಂದಿನ ಅಲೆಗಳಂತೆಯೇ ಈ ಬಾರಿಯೂ ಜನಸಾಮಾನ್ಯರ ಅನುಕೂಲತೆಗಾಗಿ ರಾಷ್ಟ್ರದ ಸಂಚಾಲನಾ ವ್ಯವಸ್ಥೆಯನ್ನು ಅಡೆತಡೆ ಇಲ್ಲದೆ ಸಾಗಿಸುವ ತನ್ನ ಗುರಿಗೆ ನೈಋತ್ಯ ರೈಲ್ವೆ ಬದ್ಧವಾಗಿದೆ ಎಂದು ಅವರು ಹೇಳಿದರು. ತಮ್ಮ ರೈಲು ಪ್ರಯಾಣದಲ್ಲಿ ಕೋವಿಡ್ ಸೂಕ್ತ ನಡುವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ ರೈಲ್ವೆಯೊಂದಿಗೆ ಸಹಕರಿಸುವಂತೆ ರೈಲ್ವೇ ಪ್ರಯಾಣಿಕರಲ್ಲಿ ಕಿಶೋರ್ ರವರು ಮನವಿ ಮಾಡಿಕೊಂಡಿದ್ದಾರೆ.

Related posts

ಮುಖ್ಯಮಂತ್ರಿಗೆ ಕೃಷಿ ಬೆಲೆ ಆಯೋಗದ ವರದಿ ಸಲ್ಲಿಕೆ

eNewsLand Team

ಮಾರ್ಕೆಟ್ ಓಪನಿಂಗ್ ಹೇಗಿದೆ?

eNewsLand Team

ಸಖತ್ ಆಗಿದೆ ಶುರುವಾಗಿದೆ ಸಾಂಗ್‌

eNewsLand Team