ಇಎನ್ಎಲ್ ಧಾರವಾಡ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹಾಗೂ ಆಯೋಗದ ಸದಸ್ಯರಾದ ಕಲ್ಯಾಣಕುಮಾರ ಎಚ್.ಎಸ್., ರಾಜಶೇಖರ ಬಿ.ಎಸ್. ಮತ್ತು ಅರುಣಕುಮಾರ್ ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿಯ ಸೆಟಲ್‍ಮೆಂಟ್ ಪ್ರದೇಶದ ಕಂಜಾರ ಬಾಟ್ ಮತ್ತು ಚಪ್ಪರಬಂದ್ ಕಾಲೋನಿಗೆ ಭೇಟಿ ನೀಡಿ, ಅಲ್ಲಿನ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕೈಗೊಂಡರು. ಕಂಜಾರ ಬಾಟ್ ಮತ್ತು ಚಪ್ಪರಬಂದ ಕಾಲೋನಿಯ ನಿವಾಸಿಗಳ ಪ್ರತಿ ಮನೆಗೆ ಭೇಟಿ ನೀಡಿದ ಅಧ್ಯಕ್ಷರು ಮನೆಯವರಿಂದ ಮಾಹಿತಿ ಪಡೆದುಕೊಂಡರು. ಕಂಜಾರ ಬಾಟ್ ಪ್ರದೇಶದ ನಿವಾಸಿಗಳ ಸಭೆಯನ್ನು ಕೃಷ್ಣ ದೇವಸ್ಥಾನದಲ್ಲಿ ಹಾಗೂ ಚಪ್ಪರಬಂದ ಕಾಲೋನಿಯ ನಿವಾಸಿಗಳ ಜೊತೆ ಸಭೆಯನ್ನು ಜರುಗಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಸಮುದಾಯಗಳ ಮುಖಂಡರು ಮಾತನಾಡಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿರುವುದರಿಂದ ಮತ್ತು ಶತಮಾನಗಳಿಂದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಡೆ ಅನುಭವಿಸುತ್ತಿರುವುದರಿಂದ ತಮಗೆ ಅಲೇಮಾರಿ ಜನಾಂಗದ ಸೌಲಭ್ಯ ನೀಡಬೇಕೆಂದು ಕೋರಿದರು.
ಸಭೆಯಲ್ಲಿ ಮಾತನಾಡಿದ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಅವರು ತಮ್ಮ ಅಭಿಪ್ರಾಯ ಹಾಗೂ ಸಮೀಕ್ಷೆಯ ಅಂಶಗಳ ಆಧಾರದ ಮೇಲೆ ರಾಜ್ಯ ಸರ್ಕಾರಕ್ಕೆ ಈ ಸಮುದಾಯಗಳನ್ನು ಅಲೇಮಾರಿ ಸಮುದಾಯಕ್ಕೆ ಸೇರಿಸುವ ಕುರಿತು ಮಾಹಿತಿ ಸಂಗ್ರಹಿಸಿ ಶೀಘ್ರದಲ್ಲಿಯೇ ಸರ್ಕಾರ ಕ್ಕೆ ವರದಿ ತಯಾರಿಸಿ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ನಂತರ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದ ಬಣಕಲ್‍ನಲ್ಲಿರುವ ಅನಾಥ ಮತ್ತು ಬುದ್ದಿ ಮಾಂದ್ಯ ಮನೋವೈಕಲ್ಯ ಬಾಲಕಿಯರ ಬಾಲಮಂದಿರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿ, ಅಲ್ಲಿನ ಮಕ್ಕಳ ಕಲಿಕೆ, ಊಟ ಉಪಚಾರಗಳನ್ನು ತಿಳಿಯುವುದು, ಜೊತೆಗೆ ರಾಜ್ಯದ ಎಲ್ಲ ಅನಾಥ ಮಕ್ಕಳಿಗೆ ಯಾವ ರೀತಿ ಮೀಸಲಾತಿ ಕಲ್ಪಿಸಿಬೇಕು ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಯಾವರೀತಿ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅಧಿಕಾರಿಗಳಿಂದ ಪೂರಕ ಮಾಹಿತಿ ಪಡೆದರು
ಈ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಮಲಾ ಬೈಲೂರ ಸೇರಿ ಇತರ ಅಧಿಕಾರಿಗಳು, ಸಿಬ್ಬಂದಿ ಇದ್ದರು.