29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

ಮಳೆಗಾಲ ಪೂರ್ವದಲ್ಲಿ ಎಲ್ಲ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ; ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗದಂತೆ ಮುಂಜಾಗ್ರತೆ ವಹಿಸಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರವಿಕುಮಾರ ಸುರಪುರ

ಇಎನ್ಎಲ್ ಧಾರವಾಡ : ಪ್ರಸಕ್ತ ಸಾಲಿಗೆ ಜಿಲ್ಲೆಗೆ ನಿಗದಿಪಡಿಸಿರುವ ಭೌತಿಕ ಹಾಗೂ ಆರ್ಥಿಕ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಮಳೆಗಾಲ ಪೂರ್ವದಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳ ನಿರ್ಮಾಣ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಮುಕ್ತಾಯಗೊಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರವಿಕುಮಾರ ಸುರಪುರ ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಾದ್ಯಂತ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಎಲ್ಲ ಇಲಾಖೆಗಳು ತಮ್ಮ ಇಲಾಖೆಗಳ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸಿ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕು. ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ಯಾವುದೇ ರೀತಿಯಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅವರು ಹೇಳಿದರು.

ಕಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳು ಹೊರರೋಗಿಗಳ ಚಿಕಿತ್ಸೆಗೆ ಆದ್ಯತೆ ನೀಡಿ ಕ್ರಮ ವಹಿಸಬೇಕು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ಹೆಚ್ಚು ಒತ್ತು ನೀಡಬೇಕು. ಜಿಲ್ಲೆಯ ಪ್ರತಿ ಕುಟುಂಬ ಆರೋಗ್ಯ ಕರ್ನಾಟಕ ಕಾರ್ಡ್ ಪಡೆಯಲು ಅನುಕೂಲವಾಗುವಂತೆ ವಿತರಣೆ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.

ಕೃಷಿ, ತೋಟಗಾರಿಕೆ ಇಲಾಖೆಗಳು ನಕಲಿ ಬೀಜಗಳ ಮಾರಾಟ ತಡೆಗೆ ಕ್ರಮ ವಹಿಸಬೇಕು. ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳು ಸಿಗುವಂತೆ ಸೌಲಭ್ಯಗಳನ್ನು ಒದಗಿಸಬೇಕು. ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಮಾರ್ಚ್ ಅಂತ್ಯದೊಳಗೆ ತಮ್ಮ ಕ್ರಿಯಾ ಯೋಜನೆ ಅನುಸಾರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಮಹಾನಗರ ಪಾಲಿಕೆಯು ರಸ್ತೆ ದುರಸ್ತಿ, ರಸ್ತೆ ತಗ್ಗುಗಳನ್ನು ಮುಚ್ಚುವುದು, ಮನೆ ಮನೆ ಕಸ ಸಂಗ್ರಹ, ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ತಜ್ಞರ ನೆರವು ಪಡೆದು ಕಾರ್ಯಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮ್ಯಾನ್ಯವಲ್ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಖಾಸಗಿ ಅಪಾರ್ಟ್‍ಮೆಂಟ್‍ಗಳು, ಬಡಾವಣೆಗಳಲ್ಲಿಯೂ ಕೂಡ ಮನುಷ್ಯರಿಂದ ನಿಷೇಧಿತ ಕೆಲಸಗಳನ್ನು ಮಾಡಿಸಬಾರದು. ಆ ವೃತ್ತಿಯಲ್ಲಿರುವ ವ್ಯಕ್ತಿಗಳ ಗುಂಪುಗಳನ್ನು ರಚಿಸಿದರೆ ಸರ್ಕಾರವು ಸಕಿಂಗ್ ಮತ್ತು ಜೆಟಿಂಗ್ ಮಷಿನ್‍ಗಳ ಖರೀದಿಗೆ ಸಾಲ ಸೌಲಭ್ಯ ನೀಡಲಿದೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ತೀವ್ರತೆ ಕಡಿಮೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶೇ. 2 ಕ್ಕಿಂತ ಕಡಿಮೆ ಪಾಸಿಟಿವಿಟ್ ದರ ದಾಖಲಾಗಿದೆ. ಪ್ರಸ್ತುತ ಕೇವಲ 52 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ 3ನೇ ಅಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 22,240 ಕೋವಿಡ್ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು 24 ಜನ ಮರಣ ಹೊಂದಿದ್ದಾರೆ. ಇಲ್ಲಿಯವರೆಗೆ ಲಸಿಕಾಕರಣದ ಮೊದಲ ಡೋಸ್ ಶೇ.104 ಹಾಗೂ 2ನೇ ಡೋಸ್ ಶೇ.93 ರಷ್ಟು ಸಾಧನೆ ಆಗಿದೆ. 15 ರಿಂದ 17 ವರ್ಷ ವಯೋಮಾನದ ಮಕ್ಕಳ ಲಸಿಕಾಕರಣವು ಮೊದಲ ಡೋಸ್ ಶೇ.80 ರಷ್ಟು ಪ್ರಗತಿಯಾಗಿದೆ. 2ನೇ ಡೋಸ್ ಶೇ.18 ರಷ್ಟು ಪೂರ್ಣವಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಮುಂಜಾಗೃತಾ (ಬೂಸ್ಟರ್ ಡೋಸ್) ಡೋಸ್‍ನ್ನು ಶೇ.69 ರಷ್ಟು ಆರೋಗ್ಯ ಕಾರ್ಯಕರ್ತರಿಗೆ, ಶೇ.65.54 ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಶೇ.49.42 ರಷ್ಟು ಡೋಸ್‍ನ್ನು 60 ವಯಸ್ಸು ದಾಟಿರುವ ಸಹ ಅಸ್ವಸ್ಥತೆ ಹೊಂದಿದವರಿಗೆ ನೀಡಲಾಗಿದೆ. ಮಹಾನಗರ ಪಾಲಿಕೆಯ ಕಸ ಸಂಗ್ರಹಣೆ ವಾಹನಗಳ ನಿರ್ವಹಣೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಮೆಕ್ಯಾನಿಕ್ ವಿಭಾಗದ ಸೇವೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಸುರೇಶ್ ಇಟ್ನಾಳ ಮಾತನಾಡಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಸತಿ ಯೋಜನೆ ಮತ್ತು ನರೇಗಾ ಯೋಜನೆಯಲ್ಲಿ ನಿಗದಿತ ಗುರಿಯ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ, ಅವಳಿ ನಗರ ವ್ಯಾಪ್ತಿಯ ನಾಗರಿಕರಲ್ಲಿ ಸ್ವಚ್ಛತೆ, ಕಸ ಸಂಗ್ರಹಣೆ ಮತ್ತು ಮೂಲಭೂತ ಸೌಕರ್ಯಗಳ ಉತ್ತಮ ಬಳಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಸೇರಿದಂತೆ ಕೇಂದ್ರ ಮತ್ತು ರಾಜ್ಯಸರ್ಕಾರದ ವಿವಿಧ ಯೋಜನೆಗಳಡಿ ಮಹಾನಗರ ಪಾಲಿಕೆಗೆ ಬಂದಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಲು ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ್, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಥಾನಿ, ಕಿಮ್ಸ್‍ನ ಡಾ. ಅರುಣಕುಮಾರ ಚೌವ್ಹಾಣ, ಡಾ. ಲಕ್ಷ್ಮಿಕಾಂತ ಲೋಕರೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಶಿವಕುಮಾರ ಮಾನಕರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡಣ್ಣವರ, ಆಹಾರ ಇಲಾಖೆಯ ಉಪನಿರ್ದೇಶಕ ವಿನಾಯಕ ಪಾಲನಕರ, ಮಹಾನಗರ ಪಾಲಿಕೆಯ ಉಪ ಆಯುಕ್ತ ಆನಂದ ಕಲ್ಲೋಳಕರ, ಅಧೀಕ್ಷಕ ಅಭಿಯಂತರ ತಿಮ್ಮಪ್ಪ, ಕೃಷಿ ಇಲಾಖೆಯ ಜಂಟಿನಿರ್ದೇಶಕ ರಾಜಶೇಖರ ಐ.ಬಿ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕ ಡಾ.ಎನ್.ಆರ್. ಪುರುಷೋತ್ತಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಜಪ್ಪ ಸೊಗಲದ, ಜಿಲ್ಲಾ ಆರ್‍ಸಿಹೆಚ್‍ಓ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸುಜಾತಾ ಹಸವೀಮಠ, ಜಿಲ್ಲಾ ಅಂಧತ್ವ ನಿವಾರಣಾ ಅಧಿಕಾರಿ ಡಾ. ಶಶಿ ಪಾಟೀಲ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಅಯ್ಯನಗೌಡ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಭೂಮಾಪನ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ ಸೇರಿದಂತೆ ಸಣ್ಣ ನೀರಾವರಿ, ಪೊಲೀಸ್, ಪದವಿಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ಕೊಳಚೆ ನಿರ್ಮೂಲನಾ ಮಂಡಳಿ, ಕರ್ನಾಟಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಭಾಗವಹಿಸಿದ್ದರು.

******************

Related posts

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

eNEWS LAND Team

ಮೇಕೆದಾಟು; ಕಾಂಗ್ರೆಸ್ಸಿಗೆ ಸಿಎಂ ತಿರುಗೇಟು

eNEWS LAND Team

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮ ವೀಕ್ಷಿಸಿದ ಗೃಹಲಕ್ಷ್ಮೀಯರು

eNEWS LAND Team