27.5 C
Hubli
ಏಪ್ರಿಲ್ 19, 2024
eNews Land
ಸುದ್ದಿ

ಎಸ್‍ಡಿಎಂಗೆ ಮುನೇನಕೊಪ್ಪ , ಶೆಟ್ಟರ್ ಭೇಟಿ ; ಕವಿ ಕಣವಿ ಆರೋಗ್ಯ ವಿಚಾರಣೆ

ಇಎನ್ಎಲ್ ಧಾರವಾಡ

ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಇಂದು ಮಧ್ಯಾಹ್ನ ನಗರದ ಎಸ್‍ಡಿಎಂ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ನಾಡೋಜ ಡಾ. ಚನ್ನವೀರ ಕಣವಿ ಅವರ ಆರೋಗ್ಯ ಕುರಿತು ಎಸ್‍ಡಿಎಂ ವೈದ್ಯರ ಹಾಗೂ ಕುಟುಂಬ ಸದಸ್ಯರಿಂದ ಮಾಹಿತಿ ಪಡೆದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಮಾತನಾಡಿ, ನಾಡೋಜ ಡಾ. ಚನ್ನವೀರ ಕಣವಿ ಅವರ ಆರೋಗ್ಯ ಚಿಕಿತ್ಸೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಎಸ್‍ಡಿಎಂ ಆಸ್ಪತ್ರೆ ಉತ್ತಮ ತಜ್ಞ ವೈದ್ಯರನ್ನು ಮತ್ತು ಸೌಲಭ್ಯಗಳನ್ನು ಹೊಂದಿದೆ. ಅಗತ್ಯವಿದ್ದಲ್ಲಿ ಕಿಮ್ಸ್ ಮತ್ತು ಸರ್ಕಾರಿ ಆಸ್ಪತ್ರೆ ತಜ್ಞ ವೈದ್ಯರ ಸಲಹೆ, ನೆರವು ಪಡೆಯುವಂತೆ ಮತ್ತು ಡಾ.ಕಣವಿ ಅವರು ಬೇಗ ಚೇತರಿಸಿಕೊಳ್ಳಲು ಅಗತ್ಯ ಚಿಕಿತ್ಸೆ ನೀಡುವಂತೆ ಅವರು ತಿಳಿಸಿದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಮಾತನಾಡಿ, ನಾಡೋಜ ಡಾ. ಕಣವಿ ಅವರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿದ್ದು, ಚಿಕಿತ್ಸೆಗೆ ತಗಲುವ ಎಲ್ಲ ವೆಚ್ಚವನ್ನು ಸರ್ಕಾರದಿಂದಲೇ ಭರಿಸಲಾಗುತ್ತಿದೆ. ಉತ್ತಮ ಚಿಕಿತ್ಸೆಯನ್ನು ನೀಡಿ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ವೈದ್ಯರ ತಂಡಕ್ಕೆ ಸೂಚಿಸಿದರು.

ಡಾ.ಚನ್ನವೀರ ಕಣವಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ಮಾತನಾಡಿ, ಡಾ. ಕಣವಿ ಅವರ ಆರೋಗ್ಯದಲ್ಲಿ ಕಳೆದವಾರಕ್ಕಿಂತ ಈಗ ಚೇತರಿಕೆ ಕಂಡು ಬಂದಿದೆ. ರಕ್ತದೋತ್ತಡ (ಬಿಪಿ) ನಿಯಂತ್ರಣದಲ್ಲಿದ್ದು, ಕಿಡ್ನಿ ಕಾರ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ ಕುಪ್ಪಸದ ಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ. ಅಗತ್ಯ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ವಯೋಗುಣ ಧರ್ಮದಿಂದ ಚಿಕಿತ್ಸೆಗೆ ನಿಯಮಿತವಾಗಿ ಸ್ಪಂಧಿಸುತ್ತಿದ್ದಾರೆ.

ವಿವಿಧ ವಿಷಯಗಳ ವೈದ್ಯರಾದ ಶಾಶ್ವಕೋಶ ತಜ್ಞ ಡಾ. ಶ್ರೀಕಾಂತ ಹಿರೇಮಠ, ಅರವಳಿಕೆ ತಜ್ಞ ಡಾ. ಶ್ರೀರಂಗ ತೋರಗಲ್ಲ ಮತ್ತು ಜನರಲ್ ಫಿಜಿಷನ್ ಆದ ಡಾ. ರಾಜೇಂದ್ರ ಪಾರಿಕ್ ಅವರನ್ನು ಸೇರಿಸಿಕೊಂಡು ತಜ್ಞ ವೈದ್ಯರ ತಂಡ ರಚಿಸಲಾಗಿದ್ದು, ಡಾ. ಕಣವಿ ಅವರ ಆರೋಗ್ಯದ ಕುರಿತು ನಿರಂತರ ನಿಗಾ ವಹಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಂಡದ ಮುಖ್ಯಸ್ಥ ಡಾ. ಕಿರಣ ಐತಾಳ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸನಗೌಡ ಕರಿಗೌಡರ, ಎಸ್‍ಡಿಎಂ ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗಡೆ, ಪಾಲಿಕೆಯ ಸದಸ್ಯರಾದ ಮಾಜಿ ಮೇಯರ್ ಶಿವು ಹಿರೇಮಠ, ವಿಜಯಾನಂದ ಶೆಟ್ಟಿ, ಎಸ್‍ಡಿಎಂ ಆಸ್ಪತ್ರೆಯ ಪಿಆರ್‍ಓ ನಾಗರಾಜ ಕಲ್ಲಾಪೂರ ಹಾಗೂ ಡಾ. ಕಣವಿ ಅವರ ಕುಟುಂಬ ಸದಸ್ಯ ನಾಗರಾಜ ಎಲಿಗಾರ ಸೇರಿ ಇತರರು ಇದ್ದರು.

Related posts

ಕೃಷಿ ವಿವಿ 35 ನೇ ಘಟಿಕೋತ್ಸವ: ಚಿನ್ನದ ಪದಕ ಪಡೆದವರು ಎಷ್ಟು ನೋಡಿ?

eNEWS LAND Team

ಕನಕದಾಸರ ತತ್ವಪದ ಪ್ರಸ್ತುತ ಸಮಾಜಕ್ಕೆ ಮಾದರಿ:ಬಸವರಾಜ ಕುಬಸದ

eNEWS LAND Team

ಕಿಮ್ಸ್ ಆವರಣದಲ್ಲಿ 24X7 ಕೋವಿಡ್ ಸ್ವ್ಯಾಬ್ ಸಂಗ್ರಹ,ತಪಾಸಣೆ , ಸೋಂಕಿತರ ಭೌತಿಕ ಪರಿಶೀಲನೆ ಚಿಕಿತ್ಸೆ

eNEWS LAND Team