28.6 C
Hubli
ಏಪ್ರಿಲ್ 20, 2024
eNews Land
ಸುದ್ದಿ

₹12,795 ಕೋಟಿ ವೆಚ್ಚದ 925 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ

12,795 ಕೋಟಿ ರೂ.ವೆಚ್ಚದ 925 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ

2024 ರ ಅಂತ್ಯದೊಳಗೆ ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ರಸ್ತೆಗಳ ಅಭಿವೃದ್ಧಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

ಇಎನ್ಎಲ್ ಹುಬ್ಬಳ್ಳಿ: ಮುಂಬರುವ 2024 ರ ಅಂತ್ಯದೊಳಗೆ ಕರ್ನಾಟಕದ ರಸ್ತೆಗಳನ್ನು ಅಮೇರಿಕಾದ ರಸ್ತೆಗಳ ಗುಣಮಟ್ಟಕ್ಕೆ ಸಮನಾಗಿ ಅಭಿವೃದ್ಧಿ ಪಡಿಸಲಾಗುವುದು, ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಅರಣ್ಯ ಹಾಗೂ ಪರಿಸರ ಇಲಾಖೆಗಳ ಕ್ಲಿಯರೆನ್ಸ್ ಪಡೆಯುವ ಕಾರ್ಯಕ್ಕೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದರು.

ಹುಬ್ಬಳ್ಳಿಯ ಗಬ್ಬೂರ ವೃತ್ತದ ಟ್ರಕ್ ಟರ್ಮಿನಲ್ ಆವರಣದಲ್ಲಿ ಇಂದು ಭೂಸಾರಿಗೆ ಹಾಗೂ ಹೆದ್ದಾರಿ ಮಂತ್ರಾಲಯ,ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ,ಪಿಎಂ ಗತಿ ಶಕ್ತಿ,ಭಾರತಮಾಲಾ ಹಾಗೂ ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 12,795 ಕೋಟಿ ರೂ.ವೆಚ್ಚದಲ್ಲಿ 925 ಕಿ.ಮೀ.ಉದ್ದದ ವಿವಿಧ 26 ರಾಷ್ಟ್ರೀಯ ಹೆದ್ದಾರಿಗಳ ಭೂಮಿಪೂಜೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿನಗರದ ಸಂಚಾರ ದಟ್ಟಣೆ ತಪ್ಪಿಸಲು ಫ್ಲೈ ಓವರ್ ನಿರ್ಮಿಸಲಾಗುತ್ತಿದೆ.ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಕೋರಿಕೆಯಂತೆ ಯಾದಗಿರಿ ಬೈಪಾಸ್ ನಿರ್ಮಾಣ ಹಾಗೂ ಕಲಬುರ್ಗಿ ಸೇರಿದಂತೆ ಅನೇಕ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ.ಭಾರತಮಾಲಾ 2 ರ ಯೋಜನೆಯಡಿ ಕೊಪ್ಪಳ, ಚಿತ್ರದುರ್ಗ ,ತುಮಕೂರು ಜಿಲ್ಲೆಗಳ ಅನೇಕ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ಭಾಗದಲ್ಲಿ ಮಹತ್ತರ ಕಾರ್ಯಗಳು ಪ್ರಗತಿಯಲ್ಲಿವೆ.ಕರ್ನಾಟಕದ ಯೋಜನೆಗಳನ್ನು 3 ಪ್ಯಾಕೇಜುಗಳಲ್ಲಿ ಉದ್ಯಮ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಕರ್ನಾಟಕ ವಿಕಾಸಕ್ಕೆ ಕೇಂದ್ರ ಸಂಪೂರ್ಣ ಸಹಕಾರ ನೀಡಲಿದೆ.ಅರಣ್ಯ ಹಾಗೂ ಪರಿಸರ ಸಂಬಂಧಿತ ಕ್ಲಿಯರೆನ್ಸ್ ಕೊಡಿಸುವ ಕಾರ್ಯಗಳು ರಾಜ್ಯ ಸರ್ಕಾರದಿಂದ ಆಗಬೇಕು. ಕರ್ನಾಟಕದಲ್ಲಿ ಸಾಕಷ್ಟು ಜಲಸಂಪತ್ತು ಇದೆ.ಅದರ ಸದ್ಬಳಕೆಯಾಗಬೇಕು.ಹೆಚ್ಚು ಕೆರೆಗಳನ್ನು ನಿರ್ಮಿಸಿ ಜಲ ಸಂವರ್ಧನೆ ಮಾಡಬೇಕು.ರೈತರ,ದೇಶದ ಹಿತಾಭಿವೃದ್ಧಿ ಇದರಲ್ಲಿ ಅಡಗಿದೆ.ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ.ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಧ್ಯೇಯವಾಗಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳು,ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಷಿ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಧ್ಯದ 31 ಕಿ.ಮೀ.ಉದ್ದದ ಬೈಪಾಸ್ ರಸ್ತೆಯನ್ನಾ ಷಟ್ಪಥ ರಸ್ತೆ ಹಾಗೂ ಎರಡೂ ಕಡೆ ಚತುಷ್ಪಥಗಳ ಸೇವಾ ರಸ್ತೆಗಳನ್ನು 1050 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ಈ ವ್ಯಾಪ್ತಿಯಲ್ಲಿ ಯಾವುದೇ ಟೋಲ್ ವಿಧಿಸುವುದಿಲ್ಲ.ಈ ಮೊದಲು ಅವಳಿನಗರದ ನಡುವೆ ಚತುಷ್ಪಥ ಬೈಪಾಸ್ ರಸ್ತೆಗಾಗಿ ಜನರು ಬೇಡಿಕೆ ನೀಡುತ್ತಿದ್ದರು. ಈಗ ಷಟ್ಪಥ ರಸ್ತೆ ಮಾಡುತ್ತಿರುವುದು ಐತಿಹಾಸಿಕವಾಗಿದೆ.ಅಭಿವೃದ್ಧಿಗಾಗಿ ಯೋಜನೆಯಲ್ಲಿ ಮಾನದಂಡಗಳಲ್ಲಿ ಮಾರ್ಪಾಡುಗಳನ್ನು ತಂದು ಪ್ರೋತ್ಸಾಹಿಸುವ ಗುಣ ನಿತಿನ್ ಗಡ್ಕರಿಯವರಲ್ಲಿದೆ. ದೇಶದಾದ್ಯಂತ ಸರಾಸರಿ ಪ್ರತಿನಿತ್ಯ 38 ಕಿ.ಮೀ.ಹೆದ್ದಾರಿ ನಿರ್ಮಾಣವಾಗುತ್ತಿವೆ.ಮೂಲಭೂತ ಸೌಕರ್ಯಗಳ ಅಭಿವೃದ್ಧಿಯು ದೇಶದ ಸಮಗ್ರ ಆರ್ಥಿಕತೆಯ ಸುಧಾರಣೆಗೆ ವರದಾನವಾಗುತ್ತದೆ.ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ದೇಶವು ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ ಎಂದರು.

ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಭಾರತ ಮಾಲಾ,ಹಾಗೂ ಸಾಗರಮಾಲಾ ಯೋಜನೆಗಳ ಮೂಲಕ ಕೇಂದ್ರ ಸರ್ಕಾರವು ಭೂಸಾರಿಗೆ ಹಾಗೂ ಸಮುದ್ರ ಸಾರಿಗೆಯಲ್ಲಿ ಆಮೂಲಾಗ್ರ ಸುಧಾರಣೆಯನ್ನು ತಂದಿದೆ.ಪರ್ವತಮಾಲಾ ಯೋಜನೆ ಮೂಲಕ ಈಶಾನ್ಯ ರಾಜ್ಯಗಳ ರಸ್ತೆಗಳ ಅಭಿವೃದ್ಧಿಯನ್ನೂ ಸಹ ಕೈಗೊಳ್ಳಲಾಗಿದೆ.

ಕರ್ನಾಟಕ ರಾಜ್ಯದ ಹೆದ್ದಾರಿಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ಸಚಿವರಾದ ನಿತಿನ್ ಗಡ್ಕರಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ,ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇನೆ, ಅವರ ಬಗ್ಗೆ ವಿಶೇಷ ಗೌರವ ಇದೆ.ಅಭಿವೃದ್ಧಿ ಪರ ಇರುವ ವ್ಯಕ್ತಿ ಗಡ್ಕರಿ ಅವರ ಗುಣಗಳು ಪ್ರಶಂಸನೀಯವಾಗಿವೆ.ರಾಜಕೀಯವಾಗಿ, ಪಕ್ಷಾತೀತವಾಗಿ ಗುಣ ಮೆಚ್ಚಿಕೊಳ್ಳಬೇಕು.ಈ ಹಿಂದೆ ತಾವು ಕಾರ್ಮಿಕ,ರೇಲ್ವೇ ಮಂತ್ರಿಯಾಗಿದ್ದಾಗಲೂ ಕೂಡ ಅಗತ್ಯ ಇರುವ ಕಡೆಗಳ ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಕೈಗೊಳ್ಳುತ್ತಿದ್ದುದನ್ನು ಸ್ಮರಿಸಿದರು.ನಿತಿನ್ ಗಡ್ಕರಿ ಅವರು ಸಂಪೂರ್ಣ ದೂರದೃಷ್ಟಿ ಹಾಗೂ ಆರ್ಥಿಕ ಖರ್ಚು ವೆಚ್ಚ, ಆದಾಯ ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ಸ್ವತಃ ರೂಪಿಸುತ್ತಾರೆ.ಇಂತಹ ಅಭಿವೃದ್ಧಿ ಕಾರ್ಯಗಳ ರೂವಾರಿ ಗಡ್ಕರಿಯವರನ್ನು ಅಭಿನಂದಿಸಲು ಇಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ.ರಾಜ್ಯದ ಪ್ರಸ್ತಾವನೆಗಳನ್ನು ಅವರು ಆದ್ಯತೆಯ ಮೇಲೆ ಪುರಸ್ಕರಿಸಲಿ . ಜಿಲ್ಲಾ ಮುಖ್ಯ ರಸ್ತೆಗಳನ್ನು ಹೆದ್ದಾರಿಗೆ ಸಂಪರ್ಕಿಸುವ ಕಾಮಗಾರಿಗಳಿಗೆ ಪ್ರಾಶಸ್ತ್ಯ ದೊರೆಯಲಿ ಎಂದರು.

ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣಕ್ಕಾಗಿ ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ಕೇಂದ್ರ ಸರ್ಕಾರ ನೀಡುತ್ತಿದೆ.ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಸ್ತೆ ಅಪಘಾತಗಳನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಗಳನ್ನು ಐರೋಪ್ಯ ಹಾಗೂ ಮುಂದುವರೆದ ರಾಷ್ಟ್ರಗಳ ರಸ್ತೆಗಳ ಗುಣಮಟ್ಟಕ್ಕೆ ಏರಿಸುವ ಸಂಕಲ್ಪ ಮಾಡಿ ಮುನ್ನುಡಿ ಬರೆದಿದ್ದಾರೆ, ಅವರ ಕನಸುಗಳನ್ನು ಇಂದಿನ ಸರ್ಕಾರ ನನಸು ಮಾಡುತ್ತಿದೆ.ಪೆಟ್ರೋಲ್ ,ಡಿಸೇಲ್ ಅವಲಂಬನೆ ಕಡಿಮೆ ಮಾಡಲು ಇಲೆಕ್ಟ್ರಿಕಲ್ ವಾಹನಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಸಹಕಾರ ನೀಡುತ್ತಿರುವುದಕ್ಕೆ ಕೃತಜ್ಞತೆ ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಸಾರಿಗೆ ಮತ್ತು ಎಸ್‌ಟಿ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ,ಗಣಿ,ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ, ಕೈಮಗ್ಗ ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ,ಕೊಪ್ಪಳ ಸಂಸದ ಸಂಗಣ್ಣ ಕರಡಿ,ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ,ಹಾವೇರಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಪ್ರಸಾದ ಅಬ್ಬಯ್ಯ,ಕಳಕಪ್ಪ ಬಂಡಿ,ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ,ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಶಂಕುಸ್ಥಾಪನೆ

ಬೆಂಗಳೂರು – ಮುಂಬೈ ರಸ್ತೆಯ ಹುಬ್ಬಳ್ಳಿ – ಧಾರವಾಡ ಬೈಪಾಸ್‌ನ 8 ಲೇನಿಂಗ್ , ( ರೂ . 1050 ಕೋಟಿ ರಾ.ಹೆ.48 , ಉದ್ದ -31 ಕಿಮೀ )

ಕುಮಟಾ – ಹಾವೇರಿ ರಸ್ತೆ ಹಾವೇರಿ ಯೆಕ್ಕಂಬಿ – ಶಿರಸಿ ವಿಭಾಗ 2 ಲೇನ್ + ಪಿಎಸ್ (ರೂ.174 ಕೋಟಿ,ರಾ.ಹೆ.-766ಇಇ, ಉದ್ದ-75 ಕಿ.ಮೀ)

ವಿಜಯಪುರದ ರೇಲ್ವೇ ಎಲ್.ಸಿ.75 ರಲ್ಲಿ 58 ಕೋಟಿ ರೂ.ವೆಚ್ಚದಲ್ಲಿ ರೇಲ್ವೇ ಮೇಲ್ಸೇತುವೆ

ಭಾನಾಪುರ ಗದ್ದನಕೇರಿ ರಸ್ತೆಯ ಗಜೇಂದ್ರಗಡದಿಂದ ಸರ್ಜಾಪುರ ( ಬನಶಂಕರಿ ) ರವರೆಗೆ 2 ಲೇನ್ + ಪಿಎಸ್ . (ರೂ. 173 ಕೋಟಿ, ರಾ.ಹೆ. – 387 , ಉದ್ದ -25 ಕಿಮೀ )

ಭಾನಾಪುರ – ಗದ್ದನಕೇರಿ ರಸ್ತೆಯ ಪಟ್ಟದಕಲ್ಲಿನಿಂದ ಶಿರೂರು ಕ್ರಾಸ್ ವರೆಗೆ 2 ಲೇನ್ + ಪಿ.ಎಸ್.(ರೂ.264 ಕೋಟಿ, ರಾ.ಹೆ.-367,ಉದ್ದ 26 ಕಿ.ಮೀ.)

ಭಾನಾಪುರ-ಗದ್ದನಕೇರಿ ರಸ್ತೆ ಶಿರೂರು ಕ್ರಾಸ್‌ನಿಂದ ಗದ್ದನಕೇರಿ ಚತುಷ್ಪಥ (ರೂ.351 ಕೋಟಿ)

ಅನಂತಪುರ- ಮೊಳಕಾಲ್ಮೂರು ರಸ್ತೆ ಆಂಧ್ರಪದೇಶ ಗಡಿಯವರೆಗೆ 2 ಲೇನ್ + ಪಿಎಸ್ . (ರೂ . 33 ಕೋಟಿ ರಾ.ಹೆ. – 544 ಡಿಡಿ, ಉದ್ದ -6 ಕಿಮೀ )

ಜೇವರ್ಗಿ – ಚಾಮರಾಜನಗರ ರಸ್ತೆಯ ಹಿರಿಯೂರಿನಿಂದ ಹುಳಿಯಾರ್‌ ಭಾಗದವರೆಗೆ 2 ಲೆನ್ + ಪಿಎಸ್. (ರೂ. 140 ಕೋಟಿ, ರಾ.ಹೆ.-150 ಎ, ಉದ್ದ -32 ಕಿಮೀ)

ರಾಷ್ಟ್ರ ಸಮರ್ಪಣೆ

ಬೆಂಗಳೂರು – ಮುಂಬೈ ರಸ್ತೆಯ ಬೈಪಾಸ್ ಸೇರಿದಂತೆ ಚಿತ್ರದುರ್ಗ – ದಾವಣಗೆರೆ 6 ಲೇನಿಂಗ್ (ರೂ.1434 ಕೋಟಿ ರೂ.ರಾ.ಹೆ.48 ,ಉದ್ದ 73 ಕಿ.ಮೀ)

ಬೆಂಗಳೂರು – ಮುಂಬೈ ರಸ್ತೆಯ ದಾವಣಗೆರೆ-ಹಾವೇರಿ ವಿಭಾಗ 6 ಲೇನಿಂಗ್ ( ರೂ .1177 ಕೋಟಿ ರೂ.ರಾ.ಹೆ. – 48 , ಉದ್ದ -79 ಕಿಮೀ )

ಹಾವೇರಿ-ಹುಬ್ಬಳ್ಳಿ 6 ಲೇನಿಂಗ್ (ರೂ.2821 ಕೋಟಿ,ಉದ್ದ-64 ಕಿ.ಮೀ)

ಹುಬ್ಬಳ್ಳಿ – ಹೊಸಪೇಟೆ ವಿಭಾಗ 4 ಲೇನಿಂಗ್ (ರೂ.

2722 ಕೋಟಿ , ರಾ.ಹೆ. – 67 , ಉದ್ದ -144 ಕಿಮೀ )

ಜೇವರ್ಗಿ -ಚಾಮರಾಜನಗರ ರಸ್ತೆಯ ಬೈರಾಪುರ-ಚಳ್ಳಕೆರೆ ಭಾಗದ 4 ಲೇನಿಂಗ್ (ರೂ. 842 ಕೋಟಿ , ರಾ.ಹೆ. – 150 ಎ , ಉದ್ದ -50 ಕಿಮೀ )

ತುಮಕೂರು – ಹೊನ್ನಾವರ ರಸ್ತೆಯ ತಾಳಗುಪ್ಪದಿಂದ ಗೇರುಸೊಪ್ಪದವರೆಗೆ 2 ಪಥ ( ರೂ. 58 ಕೋಟಿ , ರಾ.ಹೆ. – 206 , ಉದ್ದ 48 ಕಿಮೀ )

ರಾ.ಹೆ. – 218 ಮತ್ತು ರಾ.ಹೆ. – 63 ಅನ್ನು ಸಂಪರ್ಕಿಸುವ ಹುಬ್ಬಳ್ಳಿ ನಗರಕ್ಕೆ ಬೈಪಾಸ್ ನಿರ್ಮಾಣ(ರೂ.114 ಕೋಟಿ,ಉದ್ದ 4 ಕಿ.ಮೀ) .

ಹುಬ್ಬಳ್ಳಿ ನಗರದ ಬಂಕಾಪುರ ಚೌಕದಿಂದ ರಾಣಿ ಚೆನ್ನಮ್ಮ ವೃತ್ತದವರೆಗಿನ ರಸ್ತೆ ಸುಧಾರಣೆ (ರೂ.39 ಕೋಟಿ ,ರಾ.ಹೆ.04, ಉದ್ದ 2.5 ಕಿ.ಮೀ)

ಧಾರವಾಡ ನಗರ ವ್ಯಾಪ್ತಿಯಲ್ಲಿ ಜ್ಯುಬಿಲಿ ವೃತ್ತದಿಂದ
ನರೇಂದ್ರ ಬೈಪಾಸ್‌ವರೆಗೆ 4 – ಲೇನಿಂಗ್ , ( ರೂ . 71 ಕೋಟಿ , ರಾ.ಹೆ. – 4 , ಉದ್ದ-6 ಕಿಮೀ )

ವಿಜಯಪುರ – ಹುಬ್ಬಳ್ಳಿ ವಿಭಾಗ 2 ಲೇನ್ + ಪಿಎಸ್ ( ರೂ . 292 ಕೋಟಿ , ರಾ.ಹೆ. 218 , ಉದ್ದ 51 ಕಿಮೀ )

ವಿಜಯಪುರ ಹುಬ್ಬಳ್ಳಿ ವಿಭಾಗದ 2 ಲೇನ್ + ಪಿಎಸ್ ( ರೂ.326 ಕೋಟಿ,ರಾ.ಹೆ.218, ಉದ್ದ -97ಕಿ.ಮೀ )

ಅಂಕೋಲಾ – ಹುಬ್ಬಳ್ಳಿ ವಿಭಾಗದ ಕಲಘಟಗಿ ಟೌನ್ ಮಿತಿಯ 4 ಲೇನಿಂಗ್ ( ರೂ 51 ಕೋಟಿ, ರಾ.ಹೆ. – 63 , ಉದ್ದ -4 ಕಿಮೀ 

ಯಾದಗಿರಿ ಬೈಪಾಸ್‌ನಿಂದ ಆಂಧ್ರಪ್ರದೇಶ ಗಡಿ ವಿಭಾಗಕ್ಕೆ ದ್ವಿಪಥ ಹಾಗೂ ಚತುಷ್ಪಥ ರಸ್ತೆಗಳು ( ರೂ 329 ಕೋಟಿ , ರಾ.ಹೆ. – 150 , ಉದ್ದ – 39 ಕಿಮೀ)

2 ಲೇನ್ + ತೆಕ್ಕಲಕೋಟೆಯ ಪಿಎಸ್ – ಜೇವರ್ಗಿಯ ಸಿಂದಗೇರಿ ಏಭಾಗ – ಚಾಮರಾಜನಗರ ರಸ್ತೆ ( ರೂ 94 ಕೋಟಿ, ರಾ.ಹೆ. – 150 ಎ , ಉದ್ದ -20 ಕಿಮೀ)

ಭಾನಾಪುರ ಗದ್ದನಕೇರಿ ರಸ್ತೆ ಯಲಬುರ್ಗಾ ಭಾಗದಿಂದ ಕುಕನೂರಿನ 2 ಲೇನ್ + ಪಿಎಸ್ ( ರೂ . 97 ಕೋಟಿ. ರಾ.ಹೆ.367,ಉದ್ದ -19 ಕಿ.ಮೀ)

ಕೊಪ್ಪಳ ನಗರ ವ್ಯಾಪ್ತಿಯ 4 ಲೇನಿಂಗ್ (ರೂ. 84 ಕೋಟಿ, ರಾ.ಹೆ.-63 ,ಉದ್ದ -7 ಕಿ.ಮೀ)

ಜೇವರ್ಗಿ – ಚಾಮರಾಜನಗರ ರಸ್ತೆಯಲ್ಲಿ ಮೈನರ್ ಬ್ರಿಡ್ಜ್ ಪುನರ್ ನಿರ್ಮಾಣ ( ರೂ.05 ಕೋಟಿ, ರಾ.ಹೆ.- 150ಎ)

Related posts

ಭೀಮಸೇನ ಜೋಶಿ ಅವರ ಜನ್ಮ ದಿನ ಅಂಗವಾಗಿ ಭೀಮಪಲಾಸ ಸಂಗೀತೋತ್ಸವ

eNEWS LAND Team

ಅಣ್ಣಿಗೇರಿ ನೀಲಗುಂದ ಪುಣ್ಯಪುರುಷ ಗುದ್ನೇಶ್ವರ ಶ್ರೀಗಳ ಬಗ್ಗೆ ಇನ್ನಷ್ಟು ಓದಿ ತಿಳಿಯಿರಿ. ರಥೋತ್ಸವಕ್ಕೆ ತಪ್ಪದೇ ನಾಳೆ ಬನ್ನಿ…

eNEWS LAND Team

ಮೂರು, ನಾಲ್ಕನೇ ರಂಗ ಸೃಷ್ಟಿಯಾದರೂ ಬಿಜೆಪಿಗೆ ಸಾಟಿಯಾಗಲ್ಲ: ಶೆಟ್ಟರ್

eNewsLand Team