17 C
Hubli
ಡಿಸೆಂಬರ್ 7, 2022
eNews Land
ಸುದ್ದಿ

ನವಲಗುಂದ ನೀಲಮ್ಮನ ಜಲಾಶಯ ಪರಿಸ್ಥಿತಿ ನೋಡಿ!!

Listen to this article

ನೀಲಮ್ಮನ ಕೆರೆ ತನ್ನ ಕತೆ ಹೇಳಿದೆ, ದುಸ್ಥಿತಿಗೆ ಮರುಗಿ ಮಾತಾಡಿದೆ!!

ಕಿವಿಯಿದ್ದರೆ ಕೇಳಿಸಿಕೊಳ್ಳಿ, ಕಣ್ಣಿದ್ದರೆ ನೋಡಿ, ಮನಸಿದ್ದರೆ ಕೆರೆ ಉಳಿಸಿ

ಇಎನ್ಎಲ್ ನವಲಗುಂದ

ಹಿಂದೊಮ್ಮೆ ಈ ಜಲಪಾತ್ರೆ ಜನರ ಜೀವನಾಧಾರ ಆಗಿತ್ತು. ದಾಹ ನೀಗಿಸುವ ಜಲಮೂಲವಾಗಿತ್ತು. ಆದರೆ ಇವತ್ತು ನಿರ್ಲಕ್ಷ್ಯಕ್ಕೆ ಒಳಗಾಗಿ ತಾನೇ ಬರಿದಾಗುವ ಸ್ಥಿತಿಗೆ ಬಂದಿದೆ.

 

ಇಂತಹ ಕೆರೆ ತನ್ನ ಸ್ವಗತವನ್ನು ಬಿಚ್ಚಿಟ್ಟಿದೆ..ಕೆರೆ ಮರುಗಿ ಮಾತಾಡಿದೆ. ನೀಲಮ್ಮನ ಕೆರೆಯ ಕತೆ ಅದರ ಮಾತಲ್ಲೇ ಕೇಳಿ..

ನಾನು ಶಿರಸಂಗಿ ಲಿಂಗರಾಜರ ಆಳ್ವಿಕೆಯಲ್ಲಿ ಅವರ ಮನೆತನದವರೇ ಆದಂತಹ ನೀಲಮ್ಮನ ಹೆಸರಿನಲ್ಲಿ ಕಟ್ಟಲಾದ ಕೆರೆ.

 

ಜನತೆಗೆಗೆ ಅನುಕೂಲ ಆಗಲೆಂದು ಪಟ್ಟಣದ ಹೃದಯ ಭಾಗದಲ್ಲಿರುವ ಜಮೀನನ್ನು ಅವರು ದಾನವಾಗಿ ನೀಡಿ ನನ್ನನ್ನು ಕಟ್ಟಿದರು. ಲಕ್ಷಾಂತರ ಜನರ ನೀರಿನ ದಾಹವನ್ನು ನೀಗಿಸಿರುವ ಇತಿಹಾಸ ನನಗಿದೆ.

ಈಗ ನೀವೆಲ್ಲಾಹೊರ ವಲಯದಲ್ಲಿನ ಚನ್ನಮ್ಮನ ಕೆರೆಯ ಯೋಜನೆಯಿಂದ ಶಾಶ್ವತ ಕುಡಿಯುವ ನೀರು ಬಳಸುತ್ತಾ ಇರಬಹುದು. ಆದರೆ, ಇದಕ್ಕೂ ಮುಂಚೆ ನಾನು ಮನೆ, ಹೊಟೇಲ್, ಮದುವೆ ಸೇರಿ ಎಲ್ಲಾ ಕಾರ್ಯಕ್ರಮಕ್ಕೆ ನೀಲಮ್ಮಾ ನೀನೇ ಗತಿಯಮ್ಮಾ ಎಂದು ನೀರು ತೆಗೆದುಕೊಂಡು ಹೋಗಲು ನನ್ನ ಸನಿಹಕ್ಕೆ ಬರುತ್ತಿದ್ದಿರಿ, ಆದರೆ ಈಗ ಅದೆಲ್ಲಾ ಮರೆತಿದ್ದೀರಿ

ಈಗ ನನ್ನ ಪಾಟೂನಿಗೆ ಹೊಂದಿಕೊಂಡಿರುವ ತಡೆಗೋಡೆಗಳು ಬೀಳುತ್ತಿವೆ. ಕೆರೆಯಲ್ಲಿರುವ ಬಸವಣ್ಣ ದೇವರ ಪಕ್ಕದ ಸಿಮೆಂಟ್ ಕಾಂಕ್ರಿಟ್ ಕಿತ್ತು ಹೋಗಿದೆ. ದಡದಲ್ಲಿರುವ ಸಿಮೆಂಟ್ ಗೇಟ್‍ಗಳು ಹಾಗೂ ಕೆರೆಗೆ ನೀರು ಬರುವ ನೀರಿನ ಗೇಟ್‍ಗಳು ತುಕ್ಕು ಹಿಡಿದಿವೆ. ನನ್ನ ಒಡಲಲ್ಲಿ ಕಸ ಬೆಳೆದು ಹಾಳಾಗುತ್ತಿದ್ದರೂ ಜನ ಸುಮ್ಮನಿದ್ದೀರಿ, ಜನಪ್ರತಿನಿಧಿ ಎನ್ನಿಸಿಕೊಂಡವರು ಕೈ ಕಟ್ಟಿದ್ದೀರಿ.

ಪ್ರಯೋಜನಕ್ಕೆ ಇಲ್ಲದ ಕೆರೆ ಎಂದು ನಿರ್ಲಕ್ಷ್ಯ ಮಾಡಿದ್ದೀರಿ, ನಿಮ್ಮ ಅಪ್ಪ ಚಿಕ್ಕವನಿದ್ದಾಗ, ಅಜ್ಜ ಹರೆಯದಲ್ಲಿ ಇದ್ದಾಗ ನನ್ನ ಮಡಿಲಲ್ಲಿ ಆಡುತ್ತಾ ಬೆಳೆದವರು, ದಾಹವಾದಾಗ ಸನಿಹಕ್ಕೆ ಬಂದವರು.

ಈಚೆಗೆ ನೀಲಮ್ಮನ ಕೆರೆ ಬಳಿ ಗಾರ್ಡನ್‍ ನಿರ್ಮಿಸಬೇಕು ಎಂದು ಸೋಲಾರ್ ಲೈಟ್ ಇತರೆ ಖರ್ಚುಗಳನ್ನು ನನ್ನ ಮೇಲೆ ಮಾಡಿದರು. ವಾಕಿಂಗ್ ಬಂದವರು ಕುಳಿತುಕೊಳ್ಳಲು ಬೆಂಚ್ ಹಾಕಿದರು. ಅದು ಮುರಿದು ಬಿದ್ದು ಅಂದಗೆಟ್ಟಿದೆ.

ಪವಿತ್ರ ಗಂಗಾ ಮಾತೆಯಾದ ನನ್ನ ಆವರಣದಲ್ಲಿ ಮದ್ಯ ವ್ಯಸನಿಗಳು ನನ್ನ ಆವರಣವನ್ನು ತಮ್ಮ ಸ್ಥಳ ಎಂದುಕೊಂಡಿದ್ದಾರೆ‌‌. ಕುಡಿದ ಬಾಟಲಿ ಕೆರೆಯಲ್ಲಿಯೇ ಬಿಸಾಕುತ್ತಾರೆ. ಪ್ಲಾಸ್ಟಿಕ್, ಬೇಡದ ವಸ್ತುಗಳನ್ನು ಜನ ಎಸೆಯುತ್ತಾರೆ. ನಾನು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಏಕೆಂದರೆ ನಾನು ಜಲದೇವಿ.

ಈ ಕತೆ ಕೇಳಿದ, ನನ್ನ ದುರವಸ್ಥೆ ನೋಡಿದ ಪ್ರಜ್ಞಾವಂತರು ಬೇಸರ ಪಟ್ಟುಕೊಂಡಿದ್ದಾರೆ. ನನ್ನ ಅಭಿವೃದ್ಧಿ ಬಗ್ಗೆ, ಉಳಿಸಿಕೊಳ್ಳಲು ಮತ್ತೆ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಮಾತಾಡಿದ್ದಾರೆ. ಆದರೆ ಎಷ್ಟರ ಮಟ್ಟಿಗೆ ಆ ಕೆಲಸ ಮಾಡುತ್ತಾರೋ ಕಾದು ನೋಡುತ್ತೇನೆ‌.

ಕೊನೆಗೆ ಒಂದು ಮಾತು. ಅಕಸ್ಮಾತ್ ನಾನು ನಾಶವಾದರೆ ನನಗೆನೂ ನಷ್ಟವಿಲ್ಲ. ನಿಮಗೆ ಕಷ್ಟ.

ಹೃದಯ ಭಾಗದಲ್ಲಿರುವ ಪುರಾತನ ನೀಲಮ್ಮನ ಕೆರೆ ದುರಸ್ತಿ ಹಾಗಗೂ ಡಿಜಿಟಲ್ ಉದ್ಯಾನವನಕ್ಕಾಗಿ 8 ಕೋಟಿ ರುಪಾಯಿಗಳ ಡಿ.ಬಿ.ಆರ್ ಸರಕಾರದ ಅನುಮೋದನೆ ಕಳುಹಿಸಲಾಗಿದೆ ಮಂಜೂರಾತಿ ತೊರೆದ ತಕ್ಷಣ ಕಾಮಗಾರಿಯನ್ನು ಪ್ರಾರಂಭಿಸಬೇಕಾಗಿದೆ ಎನ್ನುತ್ತಾರೆ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ.

 

ನೀಲಮ್ಮನ ಕೆರೆ ಇತಿಹಾಸವುಳ್ಳದ್ದು. ಕೆರೆ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸಬೇಕು ಎಂದು ಪುರಸಭೆ ಸದಸ್ಯ ಪ್ರಕಾಶ ಶಿಗ್ಲಿ ಹೇಳಿದ್ದಾರೆ.

ನೀಲಮ್ಮನ ಕೆರೆ ಹಾಳಾಗಲು ಅಧಿಕಾರಿಗಳು ಮಾತ್ರ ಕಾರಣ ಅಲ್ಲ. ಜನರೂ ಕಾರಣ. 40 ವರ್ಷಗಳ ಹಿಂದೆ ನಾವು ಇದೇ ನೀರನ್ನು ಮನೆಗೆ ಬಳಕೆ ಮಾಡುತ್ತಿದ್ದೆವು. ಈಗ ಕೆರೆ ನೋಡಿದರೆ ಸಂಕಟ ಆಗುತ್ತದೆ ಎಂದು ಮುರಗೇಶ ಪೂಜಾರ ಬೇಸರ ವ್ಯಕ್ತಪಡಿಸಿದರು.

Related posts

ಆಸ್ಪತ್ರೆಗೆ ಮಗು ತೋರಿಸಲು ಬಂದ ದಂಪತಿ ಅಪಘಾತದಲ್ಲಿ ಸಾವು, ಮಗು ಸ್ಥಿತಿ ಹೇಗಿದೆ?

eNewsLand Team

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team

ಕುಂದಗೋಳ: ಪ್ರಸಿದ್ಧ ಸಂಗೀತ ಕಲಾವಿದರ ಪುಣ್ಯಭೂಮಿ: ಡಾ.ಬಂಡು ಕುಲಕರ್ಣಿ

eNEWS LAND Team