ಅವರ ಚಿಂತನೆಗಳು ನಾಡಿಗೆ ಮತ್ತೆ ದೊರಕುವಂತಾಗಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇಎನ್ಎಲ್ ಧಾರವಾಡ: ಕಳೆದ ಒಂದು ತಿಂಗಳಿನಿಂದ ತೀವ್ರ ಅಸ್ವಸ್ಥರಾಗಿರುವ ಹೆಸರಾಂತ ಕವಿ,ನಾಡೋಜ ಡಾ.ಚೆನ್ನವೀರ ಕಣವಿ ಅವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ.ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ, ಮುಂದಿನ 3-4 ದಿನಗಳಲ್ಲಿ ಇನ್ನಷ್ಟು ಆರೋಗ್ಯ ಸುಧಾರಿಸುವ ಭರವಸೆ ಇದೆ.ಕಣವಿ ಅವರ ಚಿಂತನೆಗಳು ನಾಡಿಗೆ ಮತ್ತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದರು.
ಧಾರವಾಡದ ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಗೆ ಭೇಟಿ ನೀಡಿ,ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕವಿ ಡಾ.ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕಳೆದ ಒಂದು ತಿಂಗಳ ಹಿಂದೆ ನ್ಯುಮೋನಿಯಾ ಖಾಯಿಲೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಆರ್‌ಟಿಪಿಸಿಆರ್ ತಪಾಸಣೆಯಿಂದ ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು.ನಂತರ ಕೋವಿಡ್ ನೆಗೆಟಿವ್ ಆಗಿದೆ.ಮುಂದಿನ 3-4 ದಿನಗಳಲ್ಲಿ ನ್ಯಮೋನಿಯಾ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಭರವಸೆಯಿದೆ.ಹಿರಿಯರಾದ ಕಣವಿ ಅವರು ಬಹಳಷ್ಟು ಗಟ್ಟಿತನದಿಂದ ಚಿಕಿತ್ಸೆಗೆ ಸ್ಪಂದಿಸುತ್ತ,ಹೋರಾಟ ನಡೆಸುತ್ತಿದ್ದಾರೆ.ಆರೋಗ್ಯ ಚೇತರಿಕೆ ಬಗ್ಗೆ ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಳ – ಸಜ್ಜನಿಕೆಗೆ ಹೆಸರಾಗಿರುವ ಕಣವಿ ಅವರ ಚಿಂತನೆಗಳಿಂದ ನಾಡಿಗೆ ಮತ್ತೆ ಪ್ರೇರಣೆ ದೊರೆಯುವಂತಾಗಲಿ ಎಂಬ ಆಶಯ,ಭರವಸೆ ಇದೆ.ಅವರ ಕುಟುಂಬದೊಂದಿಗೆ ತಮಗೆ ದೀರ್ಘ ಕಾಲದ ಆತ್ಮೀಯ ಒಡನಾಟ ಇದೆ.ಸರ್ಕಾರದ ವೆಚ್ಚ,ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಸ್.ಡಿ.ಎಂ.ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಶೀಘ್ರ ಗುಣಮುಖರಾಗಿ,ಚೇತರಿಸಿಕೊಳ್ಳಲಿ ಎಂದು ಮುಖ್ಯಮಂತ್ರಿಯವರು ಹಾರೈಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ, ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ಲಾಭೂರಾಮ್, ಎಸ್.ಡಿ.ಎಂ.ವಿ.ವಿ.ಕುಲಪತಿ ಡಾ.ನಿರಂಜನಕುಮಾರ ಮತ್ತಿತರರು ಇದ್ದರು.