ಇಎನ್ಎಲ್ ಡೆಸ್ಕ್
ನವದೆಹಲಿ: ಇಸ್ರೇಲ್‌ನ ಇಲಾಟ್‌ನಲ್ಲಿ ಆಯೋಜನೆಯಾಗಿದ್ದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಪಂಜಾಬ್ ಮೂಲದ 21ರ ಹರೆಯದ ಸುಂದರಿ ಹರ್ನಾಜ್ ಕೌರ್ ಸಂಧು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿದೆ.
ಈ ಹಿಂದೆ ಎರಡು ಬಾರಿ ಮಾತ್ರ ಭಾರತಕ್ಕೆ ಭುವನ ಸುಂದರಿ ಪಟ್ಟ ಒಲಿದಿತ್ತು. 2000ನೇ ಇಸವಿಯಲ್ಲಿ ಲಾರಾ ದತ್ತ ಮತ್ತು 1994ರಲ್ಲಿ ಸುಶ್ಮಿತಾ ಸೆನ್ ಪ್ರಶಸ್ತಿಯನ್ನು ಗೆದ್ದಿದ್ದರು. ಇಬ್ಬರೂ ಕೂಡ ಹರ್ನಾಜ್ ಅವರನ್ನು ಅಭಿನಂದಿಸಿದ್ದಾರೆ.
ಚಂಡೀಗಡ ಮೂಲದ ರೂಪದರ್ಶಿ ಹರ್ನಾಜ್, ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.
ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಪ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದರು. ಹರ್ನಾಜ್ ಅವರ ತಾಯಿ ಸ್ತ್ರೀರೋಗ ವೈದ್ಯೆ. ಹೀಗಾಗಿ ಮಹಿಳೆಯರ ಆರೋಗ್ಯ, ಶಿಕ್ಷಣ, ಸಬಲೀಕರಣಕ್ಕಾಗಿ ತಾಯಿಯೊಂದಿಗೆ ಹಲವು ಶಿಬಿರಗಳನ್ನು ಹರ್ನಾಜ್ ನಡೆಸಿದ್ದರು.
ಹರ್ನಾಜ್ ಅವರ ತಾಯಿ, ತಂದೆ ಹಾಗೂ ಕುಟುಂಬದ ಬಗ್ಗೆ ಈವರೆಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಗೊಳಿಸಲಾಗಿಲ್ಲ.
ಹರ್ನಾಜ್ 2017ರಲ್ಲಿ ಮಿಸ್ ಚಂಡೀಗಡ ಹಾಗೂ 2018ರಲ್ಲಿ ಮಿಸ್ ಮಾಕ್ಸ್ ಸ್ಟಾರ್ ಆಫ್ ಇಂಡಿಯಾ ಪಟ್ಟವನ್ನು ಗೆದ್ದಿದ್ದರು. ನಂತರ 2019ರಲ್ಲಿ ಪಂಜಾಬ್ನ ಫೆಮಿನಾ ಮಿಸ್ ಇಂಡಿಯಾ ಪಟ್ಟ ಗೆದ್ದು ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.
ಇದೀಗ 2021ರಲ್ಲಿ ಮಿಸ್ ಯುನಿವರ್ಸ್ ಆಗಿ ಗೆದ್ದು ಭಾರತಕ್ಕೆ ಹೊಸ ಗೆಲುವು ತಂದುಕೊಟ್ಟಿದ್ದಾರೆ.
ಸಿಖ್ ಮನೆತದ ಹರ್ನಾಜ್ ಅವರ ವಾರ್ಷಿಕ ಆದಾಯ ಒಂದು ಮಿಲಿಯನ್ ಡಾಲರ್ ಎಂದು ವರದಿಯಲ್ಲಿ ಹೇಳಲಾಗಿದೆ.