27 C
Hubli
ಏಪ್ರಿಲ್ 20, 2024
eNews Land
ಸುದ್ದಿ

ಕಂದಾಯ ಗ್ರಾಮವಾಗಿ ಲಂಬಾಣಿ ತಾಂಡಾ: ಸರ್ವೇ ಚುರುಕಿಗೆ ಕ್ರಮ- ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಳಗಾವಿ: ರಾಜ್ಯದ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ 2 ಜಿಲ್ಲೆಗಳಲ್ಲಿ ಸರ್ವೇ ಕಾರ್ಯ ನಡೆಯುತ್ತಿದ್ದು, ಇತರ ಜಿಲ್ಲೆಗಳಲ್ಲಿಯೂ ಶೀಘ್ರವೇ ಸರ್ವೇ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವತಿಯಿಂದ ಸ್ಥಾಪಿಸಲಾದ 18 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಾಯಧನ ಚೆಕ್ ವಿತರಿಸಿ ಮಾತನಾಡಿದರು.

ಸರ್ವೇಯರುಗಳ ನೇಮಕಾತಿ ಪೂರ್ಣಗೊಂಡ ಕೂಡಲೇ ತಾಂಡಾಗಳ ಸರ್ವೇ ಪ್ರಕ್ರಿಯೆಯನ್ನು ಇತರ ಜಿಲ್ಲೆಗಳಲ್ಲಿಯೂ ಪ್ರಾರಂಭಿಸಲಾಗುವುದು. ನಿಗದಿತ ಅವಧಿಯಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಾಂಡ ಅಭಿವೃದ್ಧಿ ನಿಗಮವು ಬಂಜಾರ ಸಮುದಾಯದವರ ರೈತ ಉತ್ಪಾದಕ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ನಿಗಮದ ಅಲ್ಪ ಅನುದಾನದಲ್ಲಿ ಉತ್ಕೃಷ್ಟ ಉಪಯೋಗ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.

ನಿಗಮದ ವತಿಯಿಂದ ಬಂಜಾರ ಸಮುದಾಯದವರು ಇರುವ ಎಲ್ಲ ತಾಲ್ಲೂಕುಗಳಲ್ಲಿ ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಬೇಕು. ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಎಫ್.ಪಿ.ಓ.ಗಳಿಗೆ ಮತ್ತೆ 15 ಲಕ್ಷ ರೂ. ನೆರವು ನೀಡಿ, ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.

ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣದ ಮೂಲಕ ಯಾವುದೇ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ನಿಗಮವು ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡುವಂತೆ ಸೂಚಿಸಿದರು.

ಬಂಜಾರ ಸಮುದಾಯದವರ ಗಟ್ಟಿತನ, ಚೈತನ್ಯ, ಹುಮ್ಮಸ್ಸು, ಸಂಸ್ಕೃತಿ ಅದ್ಭುತವಾದುದು. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಕಾಣಸಿಗುವ ಕೆಲವೇ ಸಮುದಾಯಗಳಲ್ಲಿ ಬಂಜಾರ ಸಮುದಾಯ ಒಂದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಸಮಾರಂಭದಲ್ಲಿ ಕಂದಾಯ ಸಚಿವ ಆರ್. ಅಶೋಕ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಯೋಜನೆ ಮತ್ತು ತೋಟಗಾರಿಕೆ ಸಚಿವ ಮುನಿರತ್ನ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಮತ್ತಿತರರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Related posts

ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ

eNEWS LAND Team

ನೀರಿನಲ್ಲಿ ಮುಳುಗಿದ ರೈಲ್ವೇ ಬೋಗಿಗಳಿಂದ ಪಾರುಗಾಣಿಕಾ ಮತ್ತು ಮರುಪಡೆಯುವಿಕೆಗಾಗಿ ವಿಶೇಷ ತರಬೇತಿ

eNEWS LAND Team

ರೈತರ ಆರ್ಥಿಕ ಶಕ್ತಿ ಹೆಚ್ಚಳಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪನೆ: ಸಿಎಂ

eNewsLand Team