33 C
Hubli
ಏಪ್ರಿಲ್ 25, 2024
eNews Land
ರಾಜ್ಯ ಸಂಸ್ಕೃತಿ ಸುದ್ದಿ

ಸಿಬ್ಬಂದಿ ನೇಮಕಾತಿ ಆಯೋಗದ ಕನ್ನಡ ವಿರೋಧಿ ನೀತಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಚಿಂತನೆ: ಕಸಾಪ

ಇಎನ್ಎಲ್ ಬೆಂಗಳೂರು:

ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್) ನಡೆಸುತ್ತಿರುವ ಪ್ರವೇಶ ಪರೀಕ್ಷೆಯಲ್ಲಿ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕಾನ್ಸ್ಟೇಬಲ್ ಹುದ್ದೆಗಳಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪ್ರವೇಶ ಪರೀಕ್ಷೆ ನಡೆಸುತ್ತಿರುವದನ್ನು ಕನ್ನಡ ಸಾಹಿತ್ಯ ಪರಿಷತ್ತು ಆರಂಭದಿಂದಲೂ ಕಟುವಾಗಿ ವಿರೋಧಿಸುತ್ತಲೇ ಬಂದಿದೆ. ಹಿಂದಿ ಭಾಷೆಗೆ ಬೆಣ್ಣೆ ಕನ್ನಡಕ್ಕೆ ಸುಣ್ಣ ಎನ್ನುವ ರೀತಿಯಲ್ಲಿ ʻಎಸ್ಎಸ್ಸಿʼ ನಡೆದುಕೊಳ್ಳುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ* ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್‌ಎಫ್‌), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಏಫ್‌) ಸೇರಿದಂತೆ ಕೇಂದ್ರ ಭದ್ರತಾ ಪಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಇತ್ತೀಚಿಗೆ ಅರ್ಜಿ ಆಹ್ವಾನಿಸಿರುವ ಸಿಬ್ಬಂದಿ ನೇಮಕಾತಿ ಆಯೋಗವು ಮತ್ತೆ ಪ್ರಾದೇಶಿಕ ಭಾಷೆಗಳ ವಿರೋಧಿ ನೀತಿಯನ್ನು ಅನುಸರಿಸಿದೆ. ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಷ್ಟೇ ಪರೀಕ್ಷೆ ನಡೆಸುತ್ತಿರುವುದನ್ನು ನಾವು ಖಂಡಿಸುತ್ತಲೇ ಬಂದಿದ್ದೇವೆ. ಕೇಂದ್ರ ಭದ್ರತಾ ಪಡೆಗಳಲ್ಲಿ ಖಾಲಿ ಇರುವ 24,369 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ʻಎಸ್‌ಎಸ್‌ಸಿʼ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ. ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್‌ ಆಧರಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಒಳಗೊಂಡಿದೆ. ಆದರೆ ಎಲ್ಲಿಯೂ ಕನ್ನಡವನ್ನು ಬಳಸಲು ಅವಕಾಶ ಕಲ್ಪಿಸಲಾಗಿಲ್ಲ. ‘ಎಸ್‌ಎಸ್‌ಸಿ’ಯ ಈ ಧೋರಣೆಯಿಂದ ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ, ಕೇಂದ್ರ ಪೊಲೀಸ್‌ ಸಂಸ್ಥೆಗಳಲ್ಲಿ ಕನ್ನಡಿಗರು ಕೆಲಸ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ರಾಜ್ಯದ ಬೆಳಗಾವಿ, ಬೆಂಗಳೂರು, ಕಲಬುರಗಿ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಸಿಬ್ಬಂದಿ ನೇಮಕಾತಿ ಆಯೋಗದ (ಸ್ಟಾಫ್ ಸೆಲೆಕ್ಷನ್ ಕಮಿಷನ್) ಪ್ರವೇಶ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್‌ ಆಧರಿತ ಈ ಪರೀಕ್ಷೆಯಲ್ಲಿ ಕೇವಲ ಇಂಗ್ಲಿಷ್‌, ಹಿಂದಿ ಭಾಷೆ ಮಾತ್ರ ಇರಲಿದೆ. ಜೊತೆಗೆ ಅಭ್ಯರ್ಥಿಗಳ ಇಂಗ್ಲಿಷ್‌, ಹಿಂದಿ ಭಾಷಾ ಜ್ಞಾನ ಪರೀಕ್ಷಿಸಲು ಪ್ರಸ್ತುತ ದ್ವಿಭಾಷೆಯನ್ನು ಬಳಸಲಾಗುತ್ತಿದೆ ಎನ್ನುವ ಸಮಜಾಯಿಷಿಯನ್ನು ಎಸ್‌ಎಸ್‌ಸಿ ನೀಡುತ್ತಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿಯಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಎನ್ನುವ ನಿಯಮವಿದೆ. ಹತ್ತನೇ ತರಗತಿಯವರೆಗೆ ಓದಿದ ಪ್ರಾದೇಶಿಕ ಅಭ್ಯರ್ಥಿಗಳಿಗೆ ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲಿ ಎಷ್ಟರ ಮಟ್ಟಿಗೆ ಪ್ರಾಬಲ್ಯವಿರುವುದಕ್ಕೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಎಲ್‌ಸಿ ಪಾಸಾದ ಬರೋಬರಿ 24,369 ಅಬ್ಯರ್ಥಿಗಳಿಗೆ ಈ ಬಾರಿ ಭರ್ಜರಿ ಉದ್ಯೋಗ ಅವಕಾಶ ನೀಡಿದ್ದೇನೋ ಹೌದು. ಆದರೆ ಕನ್ನಡ ಭಾಷೆಯನ್ನೇ ನಂಬಿದವರಿಗೆ ಮೂಗಿಗೆ ತುಪ್ಪ ಸವರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಮೊದಲಿನಿಂದಲೂ ಈ ಭಾಷಾ ವಿರೋಧಿ ಕ್ರಮಕ್ಕೆ ವಿರೋಧಿಸುತ್ತಲೆ ಬಂದಿದೆ. ಜೊತೆಗೆ ಪತ್ರದ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡಲೇಬಾರದು ಎನ್ನುವ ಒತ್ತಾಯವನ್ನು ಮಾಡುತ್ತಲೇ ಬಂದಿದೆ. ಆದರೂ ತಮ್ಮ ಜಗಮೊಂಡುತನವನ್ನು ಮುಂದುವರೆಸಿಕೊಂಡು ಬಂದಿದ್ದು ಅಕ್ಷಮ್ಯ ಎಂದಿದ್ದಾರೆ.
ಈಗಾಗಲೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೆಲವು ಪರಿಷತ್ತಿನ ಸದಸ್ಯರು ಸಿಬ್ಬಂದಿ ನೇಮಕಾತಿ ಆಯೋಗದ ಈ ಕನ್ನಡ ವಿರೋಧಿ ನೀತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೇಟ್ಟಿಲೆರಲು ಸೂಚಿಸಿದ್ದಾರೆ. ಆದ್ದರಿಂದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡಿದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಸಮಾಲೋಚನೆ ನಡೆಸಿ ಅವರಿಂದ ಸಲಹೆ ಪಡೆದು ಮುಂದಿನ ದಿನಗಳಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Related posts

ಅಣ್ಣಿಗೇರಿ ಪುರಸಭೆ… ಅಧ್ಯಕ್ಷಗಿರಿ ಮೆಹಬೂಬಿ… ಯಾವ ಪಕ್ಷ? ಇಲ್ಲಿದೆ ಸಂಪೂರ್ಣ ಮಾಹಿತಿ ತಪ್ಪದೇ ನೋಡಿ ಮತ್ತು ಶೇರ್ ಮಾಡಿ

eNEWS LAND Team

ಗಡ್ಕರಿಯಿಂದ ಬೆಂಗಳೂರು ಮೈಸೂರು ಎಕ್ಸ್’ಪ್ರೆಸ್ ವೇ ವೈಮಾನಿಕ ಸಮೀಕ್ಷೆ ಇಂದು

eNewsLand Team

ವಾಯುಪುತ್ರ ಫಿಟ್ನೆಸ್ ಸೆಂಟರ್ ಉದ್ಘಾಟನೆ

eNEWS LAND Team