eNews Land
ಸುದ್ದಿ

ಐಪಿಎಲ್; ಚೆನ್ನೈ ಮಣಿಸಿ ಸೇಡು ತೀರಿಸಿಕೊಂಡ ಕೊಲ್ಕತ್ತಾ

Listen to this article

ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್

ಎಂ.ಎಸ್.ಧೋನಿಯ ಆಕರ್ಷಕ ಅರ್ಧಶತಕ ಹೊರತಾಗಿಯೂ ಐಪಿಎಲ್ 15ನೇ ಆವೃತ್ತಿಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿ ಹಿಂದಿನ ಆವೃತ್ತಿಯ ಫೈನಲ್ಸ್ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್’ಗೆ ಆಹ್ವಾನಿಸಲ್ಪಟ್ಟ ಸಿಎಸ್’ಕೆ ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಕಲೆಹಾಕಿತು.
ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ 6 ವಿಕೆಟ್‌ಗಳ ಗೆಲುವನ್ನು ಸಾಧಿಸಿತು.

ಸಿಎಸ್’ಕೆ ರುತುರಾಜ್ ಗಾಯಕ್ವಾಡ್ ಮತ್ತು ಡಿವೋನ್ ಕಾನ್ವೆ ಕಣಕ್ಕಿಳಿದು ಮುಗ್ಗರಿಸಿದರು. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದ್ದ ರುತುರಾಜ್ ಗಾಯಕ್ವಾಡ್ ಈ ಪಂದ್ಯದ ಮೊದಲನೇ ಓವರ್‌ನಲ್ಲಿಯೇ ಶೂನ್ಯಕ್ಕೆ ಔಟ್ ಆದರು. ಹಾಗೂ ಇನ್ನೊಬ್ಬ ಆರಂಭಿಕ ಆಟಗಾರ ಡಿವೋನ್ ಕಾನ್ವೆ ಕೂಡ 3 ರನ್ ಗಳಿಸಿ ಔಟ್ ಆದರು.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 21 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು 17 ಎಸೆತಗಳಿಗೆ 15 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಆಲ್‌ರೌಂಡರ್ ಶಿವಮ್ ದುಬೆ 6 ಎಸೆತಗಳಲ್ಲಿ 3 ರನ್ ಗಳಿಸಿ ತೆರಳಿದರು. ಬೇಗನೇ ತನ್ನ ಮೊದಲ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ತಂಡಕ್ಕೆ ಆಸರೆಯಾಗಿದ್ದು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ.

7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 38 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ಮಾಜಿ ನಾಯಕಗೆ ಸಾಥ್ ನೀಡಿದ ನಾಯಕ ರವೀಂದ್ರ ಜಡೇಜಾ 28 ಎಸೆತಗಳಲ್ಲಿ ಅಜೇಯ 26 ರನ್‌ ಬಾರಿಸಿದರು. ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದರು.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಜಿಂಕ್ಯಾ ರಹಾನೆ 34 ಎಸೆತಗಳಲ್ಲಿ 44 ರನ್ ಗಳಿಸಿದರೆ, ಇನ್ನೊಬ್ಬ ಆಟಗಾರ ವೆಂಕಟೇಶ್ ಐಯ್ಯರ್ 16 ಎಸೆತಗಳಲ್ಲಿ 16 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ರಾಣಾ 17 ಎಸೆತಗಳಲ್ಲಿ 21 ರನ್ ಗಳಿಸಿದರೆ, ಸ್ಯಾಮ್ ಬಿಲ್ಲಿಂಗ್ಸ್ 22 ಎಸೆತಗಳಲ್ಲಿ 25 ರನ್ ಗಳಿಸಿದರು. ಹಾಗೂ ತಂಡದ ನಾಯಕ ಶ್ರೇಯಸ್ ಐಯ್ಯರ್ 19 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು ಮತ್ತು ಶೆಲ್ಡನ್ ಜಾಕ್ಸನ್ 3 ಎಸೆತಗಳಲ್ಲಿ 3 ರನ್ ಕಲೆಹಾಕಿದರು.

ಚೆನೈ ಸೂಪರ್ ಕಿಂಗ್ಸ್ ಪರ ಬ್ರಾವೋ 3, ಮಿಶೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದರು.

ಉಮೇಶ್ ಯಾದವ್ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಪಡೆದರು.

Related posts

₹12,795 ಕೋಟಿ ವೆಚ್ಚದ 925 ಕಿ.ಮೀ.ಉದ್ದದ ರಾಷ್ಟ್ರೀಯ ಹೆದ್ದಾರಿ ಭೂಮಿ ಪೂಜೆ

eNEWS LAND Team

ಕರ್ನಾಟಕ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ-2022. ಜಿಲ್ಲೆಯ 21 ಮತಗಟ್ಟೆಗಳ ಮಾಹಿತಿ ಇಲ್ಲಿದೆ ನೋಡಿ

eNEWS LAND Team

ಕಲಘಟಗಿ ತಾಲೂಕಿನಲ್ಲಿ ಬರ್ಬರ ಹತ್ಯೆ!!

eNEWS LAND Team