ಚಾಲುಕ್ಯರ ಕಾಲದ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ-ಶಾಸಕ ಜಗದೀಶ್ ಶೆಟ್ಟರ್
ಇಎನ್ಎಲ್ ಹುಬ್ಬಳ್ಳಿ:
ಹುಬ್ಬಳ್ಳಿಯ ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯದ ಅಭಿವೃದ್ಧಿಗಾಗಿ ಅತಿಕ್ರಮಣ ತೆರವು ಮತ್ತು ನಿರಾಶ್ರಿತರಾಗುವ ಜನತೆಗೆ ಸೂಕ್ತ ಪುನರ್ವಸತಿಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಉಣಕಲ್ ನಲ್ಲಿರುವ ಚಂದ್ರಮೌಳೇಶ್ವರ ಹಾಗೂ ಅಮರಗೋಳದ ಬನಶಂಕರಿ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು.
ಈ ದೇವಸ್ಥಾನ 11ನೇ ಶತಮಾನಕ್ಕೆ ಸೇರಿದೆ. ಇವುಗಳನ್ನು ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನಗಳು ಮೂಲ ಸೌಕರ್ಯವಿಲ್ಲದೇ ಹಾಳಾಗುತ್ತಿದ್ದವು. ಇವುಗಳನ್ನು ಪುರಾತತ್ವ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಸುತ್ತಲಿನ ಮನೆಗಳು ತೊಂದರೆಯಾಗುತ್ತಿದ್ದವು. ರಾಜ್ಯ ಸರ್ಕಾರ ಜಾಗ ಕಲ್ಪಿಸಿದರೆ, ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದರೆ ದೇವಸ್ಥಾನದ 100 ಮೀಟರ್ ವ್ಯಾಪ್ತಿಗೆ ಬರುವ ಮನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕಾಗಿ ಪಾಲಿಕೆ, ಕಂದಾಯ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳು ಸರ್ವೇ ಕಾರ್ಯ ನಡೆಸುವಂತೆ ತಿಳಿಸಲಾಗಿದೆ. ದೇವಸ್ಥಾನಕ್ಕೆ ದಿನನಿತ್ಯ 500ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಅನುಕೂಲ ದೃಷ್ಟಿಯಿಂದ ಮೂಲ ಸೌಕರ್ಯ ಸೇರಿದಂತೆ ಅಭಿವೃದ್ದಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಅರವಿಂದ್ ಬೆಲ್ಲದ್, ಪಾಲಿಕೆ ಆಯುಕ್ತ ಬಿ.ಗೋಪಾಲಕೃಷ್ಣ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಹುಬ್ಬಳ್ಳಿ ನಗರ ತಹಶೀಲ್ದಾರ ಶಶಿಧರ್ ಮಾಡ್ಯಾಳ, ಪುರಾತತ್ವ ಇಲಾಖೆಯ ಅಧೀಕ್ಷಕಿ ರೇಷ್ಮಾ ಸಾವಂತ, ಪುರಾತತ್ವ ಇಲಾಖೆಯ ಸಹಾಯಕ ಅಧೀಕ್ಷಕ ಅಭಿಯಂತರ ಬಿ.ಪ್ರಮೋದ್, ಮಾಜಿ ಪಾಲಿಕೆ ಸದಸ್ಯ ಶಾಂತಪ್ಪ ದೇವಕ್ಕಿ, ಸಿದ್ದನಗೌಡ ಪಾಟೀಲ್, ಅಜ್ಜಪ್ಪ ಹೊರಕೇರಿ ಸೇರಿ ಮುಖಂಡರು ಭಾಗವಹಿಸಿದ್ದರು.