31 C
Hubli
ಮಾರ್ಚ್ 28, 2024
eNews Land
ಸುದ್ದಿ

ತೊಗರಿ ಬೆಳೆಯಲ್ಲಿ ಉತ್ತಮ ಇಳುವರಿಗೆ ಏನು ಮಾಡಬೇಕು?

ಇಎನ್ಎಲ್ ಹಾವೇರಿ:

ಹನುಮನಮಟ್ಟಿ ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರಾಣೇಬೆನ್ನೂರ ತಾಲೂಕಿನ ಕಮದೋಡ ಗ್ರಾಮದಲ್ಲಿ ಗುಚ್ಛ ಕ್ಷೇತ್ರ ಪ್ರಾತ್ಯಕ್ಷಿಕೆಯ ಕ್ಷೇತ್ರದಲ್ಲಿ ಪ್ರಗತಿಪರ ರೈತರಾದ ಗಣೇಶ ಆರ್ ಕುಂಟೇರ್ ಮತ್ತು ಹನುಮಂತಪ್ಪ ಬಣಕಾರ ಇವರ ತೊಗರಿ ಕ್ಷೇತ್ರಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭೇಟಿ ನೀಡಿ ತಾಂತ್ರಿಕ ಸಲಹೆ ನೀಡಿದರು.

ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಅಶೋಕ ಪಿ ಅವರು ಮಾತನಾಡಿ, ಈ ವರ್ಷ ಜಿಲ್ಲೆಯಲ್ಲಿ ಏಕ ಬೆಳೆಯಾಗಿ ಹಾಗೂ ಅಂತರ ಬೆಳೆಗಳಾಗಿ ತೊಗರಿ ಬೆಳೆಯನ್ನು ರೈತರು ಬೆಳೆದಿದ್ದು, ಈ ಬೆಳೆಯು ಕೈಹಿಡಿಯುವ ಲಕ್ಷಣಗಳು ಗೋಚರಿಸುತ್ತಿವೆ. ತೊಗರಿ ಸದ್ಯ ಹೂವಾಡುವ ಹಂತದಲ್ಲಿದೆ. ಉತ್ತಮ ಮಳೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕೀಟ ಬಾಧೆ ಇಲ್ಲ. ಆದ್ದರಿಂದ ರೈತರು ಉತ್ತಮ ಇಳುವರಿ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎಂದರು.

ಈ ತೊಗರಿ ಬೆಳೆಯ ಎಲೆಗಳು ಕಟಾವಿನ ಹಂತದಲ್ಲಿ ಒಣಗಿ ಉದುರಿ ಭೂಮಿಯಲ್ಲಿ ಎಲೆಗಳು ಉದುರುವುದರಿಂದ ಭೂಮಿಯ ಭೌತಿಕ ಜೈವಿಕ ಚಟುವಟಿಕೆಗಳಿಗೆ ಚಾಲನೆ ದೊರೆತು ಮಣ್ಣಿನ ಫಲವತ್ತತೆಯಲ್ಲಿ ಸ್ಥಿರತೆಯನ್ನು ಕಾಪಾಡುತ್ತದೆ. ತೊಗರಿ ಬೆಳೆ ಹೊಂದಿರುವ ಪ್ರತಿಯೊಬ್ಬ ರೈತರು ಆರಂಭಿಕವಾಗಿ ಬೇವಿನೆಣ್ಣೆ 5 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಎರಡು ಹಾಗೂ ಮೂರನೇ ಹಂತದ ಕೀಡೆಗಳು ಕಂಡು ಬಂದಿದ್ದರೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಪ್ರೊಫೆನೊಫಾಸ್ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಅಂದರೆ ಮಾತ್ರ ಉತ್ತಮ ಇಳುವರಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಂತರ ತೊಗರಿಯಲ್ಲಿ ಪಲ್ಸ ಮ್ಯಾಜಿಕ್ ಬಳಸಿ ಇಳುವರಿ ಹೆಚ್ಚಿಸಲು ಈ “ಪಲ್ಸ್ ಮ್ಯಾಜಿಕ್” ಒಂದು ಪೋಷಕಾಂಶಗಳ ಮತ್ತು ಸಸ್ಯ ಪ್ರಚೋದಕಗಳ ಸಮ್ಮಿಶ್ರಣವಾಗಿದೆ. ಪಲ್ಸ ಮ್ಯಾಜಿಕ್ ಅನ್ನು ಬಳಸುವುದರಿಂದ ಕೇವಲ ಹೂ ಉದುರುವುದನ್ನು ತಡೆಗಟ್ಟುವುದಲ್ಲದೇ ಕಾಳುಗಳು ಗಾತ್ರ ಮತ್ತು ಗುಣಮಟ್ಟ ವೃದ್ಧಿಯಾಗುವುದರ ಜೊತೆಗೆ ಕಾಯಿಗಳ ಸಂಖ್ಯೆ ಹೆಚ್ಚಾಗುವುದು ಹಾಗೂ ಟೋಂಗೆಗಳಲ್ಲಿ ಕೊನೆಯವರೆಗೂ ಕಾಯಿ ಕಟ್ಟುತ್ತವೆ.

ಈ ಪಲ್ಸ ಮ್ಯಾಜಿಕ್‍ನ್ನು 10 ಗ್ರಾಂ ಪುಡಿ 1 ಲೀಟರ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣಮಾಡಿ ಸಿಂಪಡಿಸಬೇಕು. ಸಿಂಪರಣೆಯನ್ನು ಬೆಳಗ್ಗೆ 8-10 ಹಾಗೂ ಸಾಯಂಕಾಲ 4-6 ಗಂಟೆಯವರೆಗೆ ಕೈಗೊಳ್ಳುವುದು ಸೂಕ್ತ. ಪಲ್ಸ್ ಮ್ಯಾಜಿಕಿನ ಮೊದಲನೇ ಸಿಂಪರಣೆಯನ್ನು ಬೆಳೆಯ ಶೇಕಡಾ 50 ರಷ್ಟು ಹೂವಾಡುವ ಹಂತದಲ್ಲಿ ಹಾಗೂ ಎರಡನೇ ಸಿಂಪರಣೆಯನ್ನು 15 ದಿವಸಗಳ ನಂತರ ಕೈಗೊಳ್ಳಬೇಕು. ಪಲ್ಸ್ ಮ್ಯಾಜಿಕನ್ನು ಯಾವುದೆ ಕೀಟನಾಶಕ ಅಥವಾ ಶಿಲೀಂದ್ರನಾಶಕ ( ತಾಮ್ರಯುಕ್ತ ಹೊರತುಪಡಿಸಿ) ಗಳೊಂದಿಗೆ ಮಿಶ್ರಣ ಮಾಡಬಹುದು. ಪ್ರತಿ ಎಕರೆಗೆ 4 ಕಿ.ಗ್ರಾಂ ಪಲ್ಸ್ ಮ್ಯಾಜಿಕ್ (2 ಬಾರಿ) ನ್ನು ಬಳಸಿ ಹೆಚ್ಚಿನ ಇಳುವರಿ ಪಡೆಯಿರಿ ಎಂದು ಸಲಹೆ ನೀಡಿದರು.

ವಿಪರೀತ ಮಳೆ ಕಾರಣಕ್ಕೆ ಬಹುತೇಕ ಬೆಳೆಗಳು ಹಾಳಾಗಿದ್ದರೆ ತೊಗರಿ ಬೆಳೆಗೆ ಮಾತ್ರ ಮಳೆ ಪೂರಕವಾಗಿದ್ದು, ನಾಲ್ಕಾರು ವರ್ಷಗಳಲ್ಲಿ ಕಂಡರಿಯದ ರೀತಿಯಲ್ಲಿ ಈ ಬಾರಿ ತೊಗರಿ ಬೆಳೆ ಬೆಳೆದಿದೆ ಎಂದು ಪ್ರಗತಿ ಪರ ರೈತರಾದ ಗಣೇಶ ರಾಮಪ್ಪ ಕುಂಟೇರ್ ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಶಾಂತವೀರಯ್ಯ ಭಾಗವಹಿಸಿದ್ದರು.

Related posts

ಅಣ್ಣಿಗೇರಿ ತಾಲೂಕ ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹಿಸಿ ಪ್ರತಿಭಟನೆ

eNewsLand Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಖಾಡಕ್ಕೆ ಆಮ್ ಆದ್ಮಿ- ಸಂತೋಷ ನರಗುಂದ

eNewsLand Team

ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ

eNEWS LAND Team